ಸಮಗ್ರ ಸುದ್ದಿ

ಬೆಂಗಳೂರಿನ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಉಚಿತವಾಗಿ ವಾಟ್ಸಾಪ್ ಮೂಲಕ ಇ-ಖಾತಾ ವಿತರಣೆ: ಮಹೇಶ್ವರ್ ರಾವ್

Share

ಬೆಂಗಳೂರು:ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿನ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಉಚಿತವಾಗಿ ವಾಟ್ಸಾಪ್ ಮೂಲಕ ಇ-ಖಾತಾ ವಿತರಿಸಲಾಗುತ್ತಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯ ಮತ್ತು ನಿರ್ದೇಶನದಂತೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾದ ‘ಭೂ-ಗ್ಯಾರಂಟಿ – ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ಇ-ಖಾತಾ ಪ್ರಮಾಣಪತ್ರಗಳನ್ನು ಉಚಿತವಾಗಿ ವಾಟ್ಸಾಪ್ ಮೂಲಕ ನೇರವಾಗಿ ತಲುಪಿಸಲಾಗುತ್ತಿದೆ.

ಆಸ್ತಿ ಮಾಲೀಕರು ತಮ್ಮ ಇ-ಖಾತಾ ಪ್ರಮಾಣಪತ್ರವನ್ನು PDF ರೂಪದಲ್ಲಿ, ವಿಶಿಷ್ಟ ePID ಸಂಖ್ಯೆಯೊಂದಿಗೆ ವಾಟ್ಸಾಪ್ ಮೂಲಕ ಪಡೆಯಲಿದ್ದಾರೆ. ಇದರಿಂದ ಸಾರ್ವಜನಿಕರು ಯಾವುದೇ ಸರ್ಕಾರಿ ಕಚೇರಿಗೆ ಭೇಟಿ ನೀಡದೆ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸದೆ ತಮ್ಮ ಇ-ಖಾತಾ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿರಿಸಿಕೊಳ್ಳಬಹುದು.

ವಾಟ್ಸಾಪ್ ಸಂದೇಶದೊಂದಿಗೆ ಜಿಬಿಎಯ ಅಧಿಕೃತ ಇ-ಆಸ್ತಿ ಪೋರ್ಟಲ್‌ https://GBAeAasthi.karnataka.gov.in ಲಿಂಕ್ ಅನ್ನು ಸಹ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ePID ಸಂಖ್ಯೆಯನ್ನು ಬಳಸಿ ಆನ್‌ಲೈನ್ ಮೂಲಕ ಇ-ಖಾತಾದಲ್ಲಿ ತಿದ್ದುಪಡಿ ಅಥವಾ ಮಾಲೀಕತ್ವ ಬದಲಾವಣೆ (ಮ್ಯುಟೇಷನ್) ಪ್ರಕ್ರಿಯೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರಿ ಸೇವೆಗಳನ್ನು ನೇರವಾಗಿ ನಾಗರಿಕರ ಮನೆಬಾಗಿಲಿಗೆ ತಲುಪಿಸುವ ಈ ಉಪಕ್ರಮವು ಅನಗತ್ಯ ಕಚೇರಿ ಭೇಟಿಗಳನ್ನು ತಪ್ಪಿಸುವುದರ ಜೊತೆಗೆ, ಪಾರದರ್ಶಕ, ಸುಲಭ ಹಾಗೂ ನಾಗರಿಕ ಸ್ನೇಹಿ ಸೇವಾ ವಿತರಣೆಗೆ ಉತ್ತೇಜನ ನೀಡಲಿದೆ.

ಆದ್ದರಿಂದ, ಎಲ್ಲಾ ಆಸ್ತಿ ಮಾಲೀಕರು ತಮ್ಮ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿ, ಇ-ಖಾತಾ PDF ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಈ ಸೇವೆಯು ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳಿಗೆ ಹಣ ಪಾವತಿಸುವ ಅಗತ್ಯವಿರುವುದಿಲ್ಲ.


Share

You cannot copy content of this page