ಬೆಂಗಳೂರು: ಕರ್ನಾಟಕವನ್ನು ಭಾರತದ ಕ್ವಾಂಟಮ್ ತಂತ್ರಜ್ಞಾನ ರಾಜಧಾನಿಯನ್ನಾಗಿ ರೂಪಿಸುವ ಗುರಿಯೊಂದಿಗೆ ಪ್ರಸ್ತಾವಿತ ಕ್ವಾಂಟಮ್ ಸಿಟಿಯನ್ನು ಇನ್ನಷ್ಟು ವಿಸ್ತೃತವಾಗಿ ಅಭಿವೃದ್ಧಿಪಡಿಸಲು ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ 2026ರ ಅಂಗವಾಗಿ ಆಯೋಜಿಸಿದ್ದ “Karnataka Quantum City: Building a Global Quantum Innovation and Research Hub” ದುಂಡುಮೇಜಿನ ಸಭೆಯಲ್ಲಿ ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು, ಕ್ವಾಂಟಮ್ ತಂತ್ರಜ್ಞಾನ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಕ್ವಾಂಟಮ್ ಟಾಸ್ಕ್ ಫೋರ್ಸ್ನ ಸದಸ್ಯರು ಹಾಗೂ ಹೂಡಿಕೆ ವಲಯದ ಪ್ರತಿನಿಧಿಗಳೊಂದಿಗೆ ಅವರು ಸಂವಾದ ನಡೆಸಿದರು.
ಸಭೆಯಲ್ಲಿ ಕ್ವಾಂಟಮ್ ಸಿಟಿಯ ಪರಿಕಲ್ಪನೆ, ಮೂಲಸೌಕರ್ಯ, ಅನುಷ್ಠಾನ ಯೋಜನೆ ಮತ್ತು ಕರ್ನಾಟಕದಲ್ಲಿ ಲಭ್ಯವಿರುವ ಸಂಶೋಧನೆ ಹಾಗೂ ಮಾನವ ಸಂಪನ್ಮೂಲ ಸಾಮರ್ಥ್ಯದ ಕುರಿತು ವಿವರಿಸಿದ ಸಚಿವರು, ಹೂಡಿಕೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಜಾಗತಿಕ ಸಹಭಾಗಿತ್ವದ ಮೂಲಕ ಕ್ವಾಂಟಮ್ ಸಿಟಿಯಲ್ಲಿ ಪಾಲುದಾರರಾಗುವಂತೆ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಆಹ್ವಾನ ನೀಡಿದರು.
“ಬೆಂಗಳೂರು ಈಗಾಗಲೇ ದೇಶದ ಪ್ರಮುಖ ಕ್ವಾಂಟಮ್ ತಂತ್ರಜ್ಞಾನ ಕ್ಲಸ್ಟರ್ಗಳಲ್ಲೊಂದಾಗಿ ಹೊರಹೊಮ್ಮಿದೆ. ಐಐಎಸ್ಸಿ ಸೇರಿದಂತೆ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಗಳು, ಪರಿಣತ ಮಾನವ ಸಂಪನ್ಮೂಲ, ತಂತ್ರಜ್ಞಾನ ಕಂಪನಿಗಳು ಮತ್ತು ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಕರ್ನಾಟಕದ ದೊಡ್ಡ ಶಕ್ತಿಯಾಗಿದೆ. ಈ ಸಾಮರ್ಥ್ಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕರ್ನಾಟಕವನ್ನು ಭಾರತದ ಕ್ವಾಂಟಮ್ ರಾಜಧಾನಿಯನ್ನಾಗಿ ರೂಪಿಸುವುದು ನಮ್ಮ ಗುರಿ,” ಎಂದು ಡಾ. ಅಜಯ್ ಧರ್ಮಸಿಂಗ್ ಹೇಳಿದರು.
ರಾಜ್ಯ ಸರ್ಕಾರ ಈಗಾಗಲೇ ಹೆಸರಘಟ್ಟದಲ್ಲಿ 6.14 ಎಕರೆ ಜಾಗವನ್ನು ಕ್ವಾಂಟಮ್ ಸಿಟಿಗಾಗಿ ಮಂಜೂರು ಮಾಡಿದ್ದು, ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ₹1,000 ಕೋಟಿ ಹೂಡಿಕೆಯ ಬದ್ಧತೆಯನ್ನು ಘೋಷಿಸಿದೆ. ಸಂಶೋಧನೆ, ಸ್ಟಾರ್ಟ್ಅಪ್ಗಳು, ಕೈಗಾರಿಕೆ, ಹೂಡಿಕೆ ಮತ್ತು ಜಾಗತಿಕ ಪಾಲುದಾರಿಕೆಗೆ ಅಗತ್ಯವಿರುವ ಸಮಗ್ರ ಮೂಲಸೌಕರ್ಯವನ್ನು ಕ್ವಾಂಟಮ್ ಸಿಟಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಹೆಚ್ಚುವರಿ ಜಾಗಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ
ಈಗಾಗಲೇ ಹಲವಾರು ಪ್ರಮುಖ ಕಂಪನಿಗಳು ಹಾಗೂ ವಿದೇಶಿ ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು ಕ್ವಾಂಟಮ್ ಸಿಟಿಯೊಂದಿಗೆ ಸಹಭಾಗಿತ್ವಕ್ಕೆ ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ, ಯೋಜನೆಯನ್ನು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಲು ಹೆಚ್ಚುವರಿ ಜಾಗದ ಅವಶ್ಯಕತೆ ಇದೆ ಎಂದು ಸಚಿವರು ಹೇಳಿದರು.
“ಕ್ವಾಂಟಮ್ ಸಿಟಿಗೆ ಇನ್ನಷ್ಟು ವಿಸ್ತೃತ ಮೂಲಸೌಕರ್ಯ ನಿರ್ಮಿಸಲು ಹೆಚ್ಚುವರಿ ಜಾಗ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜಾಗತಿಕ ಮಟ್ಟದ ಕ್ವಾಂಟಮ್ ಪರಿಸರ ವ್ಯವಸ್ಥೆ ನಿರ್ಮಿಸಲು ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ,” ಎಂದು ಡಾ. ಅಜಯ್ ಧರ್ಮಸಿಂಗ್ ತಿಳಿಸಿದರು.
ಕ್ವಾಂಟಮ್ ಸಿಟಿಯನ್ನು ಕೇವಲ ಕಟ್ಟಡ ಅಥವಾ ಮೂಲಸೌಕರ್ಯ ಯೋಜನೆಯಾಗಿ ನೋಡದೆ, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು, ಕೈಗಾರಿಕೆ, ಹೂಡಿಕೆದಾರರು, ಪ್ರತಿಭಾವಂತ ಮಾನವ ಸಂಪನ್ಮೂಲ ಹಾಗೂ ಜಾಗತಿಕ ತಂತ್ರಜ್ಞಾನ ಪಾಲುದಾರರನ್ನು ಸಂಪರ್ಕಿಸುವ ಸಮಗ್ರ ಸಂಶೋಧನಾ ಪರಿಸರ ವ್ಯವಸ್ಥೆಯನ್ನಾಗಿ (innovation ecosystem) ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
“ಕ್ವಾಂಟಮ್ ಕ್ಷೇತ್ರದಲ್ಲಿ ಸಂಶೋಧನೆಯಿಂದ ಉತ್ಪನ್ನ ಅಭಿವೃದ್ಧಿಗೆ, ಉತ್ಪನ್ನದಿಂದ ವಾಣಿಜ್ಯೀಕರಣಕ್ಕೆ ಹಾಗೂ ವಾಣಿಜ್ಯೀಕರಣದಿಂದ ಜಾಗತಿಕ ಮಾರುಕಟ್ಟೆಗೆ ಸಾಗುವ ಸಂಪೂರ್ಣ ecosystem ಅನ್ನು ಕರ್ನಾಟಕದಲ್ಲೇ ನಿರ್ಮಿಸುವುದು ನಮ್ಮ ಉದ್ದೇಶ,” ಎಂದು ಸಚಿವರು ಹೇಳಿದರು.
ದುಂಡುಮೇಜಿನ ಸಭೆಯಲ್ಲಿ ಜರ್ಮನಿಯ ಕಾನ್ಸುಲ್ ಜನರಲ್ ಡಾ. ಕ್ರಿಸ್ಟೋಫ್ ಡೋರ್ಷ್ಫೆಲ್ಟ್, ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಆನೆಟ್ ಬೇಸ್ಲರ್, ಇಟಲಿ ಕಾನ್ಸುಲೇಟ್ ಜನರಲ್ನ ಪ್ರೊ. ಮಾರ್ಕೊ ರೆ, JNCASR ಅಧ್ಯಕ್ಷ ಪ್ರೊ. ನಾರಾಯಣ ಕೆ.ಎಸ್., IIIT ಧಾರವಾಡ ನಿರ್ದೇಶಕ ಪ್ರೊ. ಎಸ್.ಆರ್. ಮಹದೇವ ಪ್ರಸನ್ನ, ಮಾಜಿ DRDO ನಿರ್ದೇಶಕ ಕೆ.ಡಿ. ನಾಯಕ್, QETCI ಸ್ಥಾಪಕಿ ಮತ್ತು CEO ರೀನಾ ದಯಾಳ್, USIBCಯ ಸ್ಟ್ರಾಟೆಜಿಕ್ ಟೆಕ್ನಾಲಜೀಸ್ ನಿರ್ದೇಶಕ ಡಾ. ಸುಮೀರ್, Israel Innovation Authority ಪ್ರತಿನಿಧಿಗಳು, U.S. Chamber of Commerce ಪ್ರತಿನಿಧಿ, QNu Labsನ ಸುನಿಲ್ ಗುಪ್ತಾ, ಕ್ವಾಂಟಮ್ ಟಾಸ್ಕ್ ಫೋರ್ಸ್ನ ಸದಸ್ಯರು, QPIAI, Amazon Web Services, Seafund, IISc ಸೇರಿದಂತೆ ವಿವಿಧ ಸಂಶೋಧನಾ, ಕೈಗಾರಿಕಾ ಮತ್ತು ಹೂಡಿಕೆ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
