ಸಮಗ್ರ ಸುದ್ದಿ

24 ವೆಂಚರ್ ಕ್ಯಾಪಿಟಲ್ ಸಂಸ್ಥೆಗಳಿಂದ ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ₹ 1,050 ಕೋಟಿ ಹೂಡಿಕೆ ನಿರ್ಧಾರ

Share

ನಾವೀನ್ಯತೆ ಹಾಗೂ ತಯಾರಿಕೆಯ ಜಾಗತಿಕ ತಾಣವಾಗುವ ಮಹತ್ವಾಕಾಂಕ್ಷೆಗೆ ಬಲ ತುಂಬಿದ ತಂತ್ರಜ್ಞಾನ ಶೃಂಗಸಭೆ

ಬೆಂಗಳೂರು, ನವೆಂಬರ್‌ 19, 2026: ಕೃತಕ ಬುದ್ಧಿಮತ್ತೆ (ಎಐ), ಡೀಪ್‌ಟೆಕ್‌, ಜೈವಿಕ ತಂತ್ರಜ್ಞಾನ, ರೋಬೊಟಿಕ್ಸ್‌ ಮತ್ತು ಸೆಮಿಕಂಡಕ್ಟರ್‌ ಕ್ಷೇತ್ರಗಳಲ್ಲಿ ಜಾಗತಿಕ ಸ್ಪರ್ಧೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಕರ್ನಾಟಕವು ಕೇವಲ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಕೇಂದ್ರವಾಗಿರದೆ, ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ, ಸಂಶೋಧಿಸುವ ಮತ್ತು ವಾಣಿಜ್ಯೀಕರಿಸುವ ಜಾಗತಿಕ ನಾವೀನ್ಯತೆಯ ತಾಣವಾಗಿ ಹೊರಹೊಮ್ಮುವ ಮಹತ್ವಾಕಾಂಕ್ಷೆಯನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ (ಟೆಕ್‌ ಸಮಿಟ್‌ 2026) ಮೂಲಕ ಮತ್ತೊಮ್ಮೆ ಯಶಸ್ವಿಯಾಗಿ ಪ್ರದರ್ಶಿಸಿದೆ.

ಮೂರು ದಿನಗಳವರೆಗೆ ನಡೆದ ಸಮಾವೇಶವು ಗುರುವಾರ ಇಲ್ಲಿ ಹಲವು ಹೊಸ ಸಾಧನೆಗಳ ಮೂಲಕ ಸಮಾರೋಪಗೊಂಡಿತು.

ಸಮಾವೇಶದ ಯಶಸ್ಸಿನ ಕುರಿತು ಮಾತನಾಡಿರುವ ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ‘ಕರ್ನಾಟಕವು ತಂತ್ರಜ್ಞಾನ ಸೇವೆಗಳ ಕೇಂದ್ರ ಎಂಬ ತನ್ನ ಸಾಂಪ್ರದಾಯಿಕ ಗುರುತನ್ನು ಮೀರಿ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಸಂಶೋಧನೆ ಮತ್ತು ವಾಣಿಜ್ಯೀಕರಣದ ಜಾಗತಿಕ ತಾಣವಾಗಿ ಬೆಳೆಯುತ್ತಿದೆ’ ಎಂದು ಹೇಳಿದ್ದಾರೆ.

“ಬೆಂಗಳೂರು ಟೆಕ್‌ ಸಮಿಟ್‌ ಕೇವಲ ವಾರ್ಷಿಕ ತಂತ್ರಜ್ಞಾನ ಸಮಾವೇಶವಾಗಿ ಉಳಿದಿಲ್ಲ; ಜಾಗತಿಕ ಚರ್ಚೆಗಳು ಸಹಭಾಗಿತ್ವ, ಹೂಡಿಕೆ ಮತ್ತು ನೈಜ ಅವಕಾಶಗಳಾಗಿ ಪರಿವರ್ತನೆಯಾಗುವ ವೇದಿಕೆಯಾಗಿ ಬೆಳೆದಿದೆ. ಜಾಗತಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಯು ಭಾರತದೊಂದಿಗೆ ಸಂಪರ್ಕ ಸಾಧಿಸಲು ಬೆಂಗಳೂರನ್ನು ಪ್ರವೇಶದ್ವಾರವನ್ನಾಗಿ ರೂಪಿಸುವುದು ನಮ್ಮ ಗುರಿ. ಅದೇ ವೇಳೆ, ಕರ್ನಾಟಕದ ನಾವೀನ್ಯತೆ ಮತ್ತು ಪರಿಹಾರಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದ್ದಾರೆ.

ರಾಜ್ಯದ ಜಾಗತಿಕ ತಂತ್ರಜ್ಞಾನ ನಾಯಕತ್ವಕ್ಕೆ ಹೊಸ ಆಯಾಮ
ಸಮಾವೇಶವು ಕೇವಲ ತಂತ್ರಜ್ಞಾನ ಪ್ರದರ್ಶನಕ್ಕೆ ಸೀಮಿತವಾಗದೆ, ಕರ್ನಾಟಕದ ನಾವೀನ್ಯತೆ, ಹೂಡಿಕೆ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಹೊಸ ವೇದಿಕೆಯನ್ನು ಒದಗಿಸುವ ಮೂಲಕ ಮಹತ್ವದ ಯಶಸ್ಸು ದಾಖಲಿಸಿದೆ. ಡೀಪ್‌ಟೆಕ್‌ ಕ್ಷೇತ್ರಕ್ಕೆ ಪ್ರಕಟವಾದ ₹ 1,050 ಕೋಟಿ ಹೂಡಿಕೆ, ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಕರ್ನಾಟಕದ ಶೇಕಡ 51ರಷ್ಟು ಪಾಲು ಹಾಗೂ ವಿವಿಧ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದಗಳು ರಾಜ್ಯದ ತಂತ್ರಜ್ಞಾನ ಸಾಮರ್ಥ್ಯಕ್ಕೆ ಜಾಗತಿಕ ಮನ್ನಣೆ ದೊರೆಯುತ್ತಿರುವುದನ್ನು ಪ್ರತಿಬಿಂಬಿಸುತ್ತವೆ.
ಎಐ, ಜೈವಿಕ ತಂತ್ರಜ್ಞಾನ, ಡ್ರೋನ್‌, ಕ್ರೀಡಾ ತಂತ್ರಜ್ಞಾನ ಮತ್ತು ಸೈಬರ್‌ ಸುರಕ್ಷತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆ, ಉದ್ಯಮಶೀಲತೆ ಮತ್ತು ಹೂಡಿಕೆಗೆ ಅವಕಾಶಗಳು ಸೃಷ್ಟಿಯಾಗಲಿವೆ.

ವಿಶೇಷವಾಗಿ ಬೆಂಗಳೂರಿನ ಆಚೆಗೂ ಎಐ ಕೌಶಲ, ಸ್ಟಾರ್ಟ್‌ಅಪ್‌ ಚಟುವಟಿಕೆ ಮತ್ತು ತಂತ್ರಜ್ಞಾನ ಮೂಲಸೌಕರ್ಯ ವಿಸ್ತರಿಸುವ ಪ್ರಯತ್ನಗಳು ರಾಜ್ಯದ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ನೆರವು ನೀಡಲಿದೆ. ಈ ಮೂಲಕ ಕರ್ನಾಟಕವು ಜಾಗತಿಕ ತಂತ್ರಜ್ಞಾನ ಸೇವಾ ಕೇಂದ್ರ ಎಂಬ ತನ್ನ ಹಳೆಯ ಗುರುತನ್ನು ಮೀರಿ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವಾಣಿಜ್ಯೀಕರಣದ ಪ್ರಮುಖ ತಾಣವಾಗಿ ಬೆಳೆಯುವ ಅವಕಾಶಗಳನ್ನು ಪರಿಚಯಿಸುವಲ್ಲಿ ಸಮಾವೇಶವು ಸಫಲವಾಗಿದೆ.

ಅಂತರರಾಷ್ಟ್ರೀಯ ಸಹಭಾಗಿತ್ವಗಳು, ನವೋದ್ಯಮ ಹೂಡಿಕೆ, ಸಂಶೋಧನಾ ಮೂಲಸೌಕರ್ಯ ಮತ್ತು ಕೌಶಲ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಕಟಣೆಗಳು ಈ ಬಾರಿಯ ಸಮಾವೇಶದ ಪ್ರಮುಖ ಆಕರ್ಷಣೆಯಾಗಿವೆ.
‘ಎಐ ಮತ್ತು ಅದರಾಚೆಗೆ’ (AI & Beyond) ಧ್ಯೇಯದ 17ರಿಂದ 19ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆದ 29ನೇ ಆವೃತ್ತಿಯ ಸಮಾವೇಶವು, ರಾಜ್ಯದ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಸೆಯುವ ಪ್ರಮುಖ ಹಾಗೂ ಯಶಸ್ವಿ ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ರಾಜ್ಯದ ವಿದ್ಯುನ್ಮಾನ, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಈ ಸಮಾವೇಶದಲ್ಲಿ 64 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾವೇಶದ ಪ್ರಮುಖ ಸಾಧನೆಗಳು:
ಮೂರು ದಿನಗಳ ಸಮಾವೇಶದಲ್ಲಿ 162 ಗೋಷ್ಠಿಗಳು, 24 ದುಂಡುಮೇಜಿನ ಸಭೆಗಳು ಮತ್ತು 704 ಭಾಷಣಕಾರರು ಪಾಲ್ಗೊಂಡಿದ್ದರು. 11,257 ಸಮ್ಮೇಳನ ಪ್ರತಿನಿಧಿಗಳು, 58,872 ನೋಂದಾಯಿತ ಉದ್ಯಮ ಸಂದರ್ಶಕರು ಹಾಗೂ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಒಟ್ಟು 70,129 ಮಂದಿ ಭಾಗವಹಿಸಿದ್ದರು. 104 ನಗರಗಳಿಂದ ಬಂದ 923 ಸ್ಟಾರ್ಟ್‌ಅಪ್‌ಗಳು ಸೇರಿದಂತೆ 1,518 ಪ್ರದರ್ಶಕರು ತಮ್ಮ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಿದರು. ಉದ್ಯಮ ಸಂಪರ್ಕಕ್ಕಾಗಿ 938 ನೇರ ಬಿ2ಬಿ ಸಭೆಗಳು ನಡೆದಿದ್ದು, ವಾಟ್ಸ್‌ಆ್ಯಪ್ ಕನೆಕ್ಟ್‌ ಮೂಲಕ 11,289 ಉದ್ಯಮ ಸಂಪರ್ಕಗಳು ದಾಖಲಾಗಿವೆ.

ಡೀಪ್‌ಟೆಕ್‌ಗೆ ₹ 1,050 ಕೋಟಿ ಹೂಡಿಕೆ
ಸಮಾವೇಶದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಭವಿಷ್ಯ ರೂಪಿಸುವವರ ಸಮಾವೇಶ’ದಲ್ಲಿ ನವೋದ್ಯಮಗಳಲ್ಲಿ ಬಂಡವಾಳ ತೊಡಗಿಸುವ 24 ವೆಂಚರ್‌ ಕ್ಯಾಪಿಟಲ್‌ ಸಂಸ್ಥೆಗಳು ಡೀಪ್‌ಟೆಕ್‌ ಸ್ಟಾರ್ಟ್‌ಅಪ್‌ ವಲಯಕ್ಕೆ ಸುಮಾರು ₹ 1,050 ಕೋಟಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿವೆ. ಹಿಂದಿನ ವರ್ಷ ಇದೇ ವೇದಿಕೆಯಲ್ಲಿ ಎಐ ಮತ್ತು ಡೀಪ್‌ಟೆಕ್‌ ಸ್ಟಾರ್ಟ್‌ಅಪ್‌ಗಳಿಗೆ ₹ 400 ಕೋಟಿ ಹೂಡಿಕೆ ಘೋಷಿಸಲಾಗಿತ್ತು. ಈ ಬಾರಿ ಹೂಡಿಕೆ ಪ್ರಮಾಣ ಹೆಚ್ಚಿರುವುದು ರಾಜ್ಯದ ನವೋದ್ಯಮ ಪರಿಸರ ವ್ಯವಸ್ಥೆಯ ಮೇಲಿನ ಹೂಡಿಕೆದಾರರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.

ಕರ್ನಾಟಕದ ‘ಎಲೆವೇಟ್‌’ ಕಾರ್ಯಕ್ರಮದ ಮೂಲಕ ಬೆಳೆದ ನಾಲ್ಕು ಸ್ಟಾರ್ಟ್‌ಅಪ್‌ಗಳು ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸಿದವು. ವೈದ್ಯಕೀಯ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ರಕ್ಷಣಾ ತಂತ್ರಜ್ಞಾನ ಮತ್ತು ಕೈಗಾರಿಕಾ ಸ್ವಯಂಚಾಲನೆ ಕ್ಷೇತ್ರಗಳಲ್ಲಿನ ಅವುಗಳ ಸಾಧನೆಗಳನ್ನು ಪರಿಚಯಿಸಲಾಯಿತು. ಜತೆಗೆ, ಆಯ್ದ ಡೀಪ್‌ಟೆಕ್‌ ನವೋದ್ಯಮಗಳಿಗೆ ‘ಐಡಿಯಾಬಾಜ್‌ ಸೀಸನ್‌ 2’ ಮೂಲಕ ರಾಷ್ಟ್ರಮಟ್ಟದಲ್ಲಿ ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಜಿಸಿಸಿ ಮತ್ತು ‘ಎಐ’ನಲ್ಲಿ ಕರ್ನಾಟಕದ ಮುನ್ನಡೆ
ಸಮಾವೇಶದಲ್ಲಿ ಬಿಡುಗಡೆಯಾದ ‘ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರಗಳು: ಉದ್ಯಮಗಳ ಎಐ ಭವಿಷ್ಯ ರೂಪಿಸುವುದು’ ವರದಿಯ ಪ್ರಕಾರ, ರಾಜ್ಯದಲ್ಲಿ 1,088 ಜಾಗತಿಕ ಸಾಮರ್ಥ್ಯ ಕೇಂದ್ರಗಳಿವೆ. ಇದು ದೇಶದ ಒಟ್ಟು 2,117 ಕೇಂದ್ರಗಳ ಪೈಕಿ ಶೇಕಡ 51ರಷ್ಟಾಗಿದೆ. ಈ ಕೇಂದ್ರಗಳಲ್ಲಿ 1.11 ಲಕ್ಷ ಎಐ ಮತ್ತು ಮಷಿನ್‌ ಲರ್ನಿಂಗ್‌ ಪರಿಣತರು ಕಾರ್ಯನಿರ್ವಹಿಸುತ್ತಿದ್ದು, ದೇಶದ ಜಿಸಿಸಿ ಎಐ/ಎಂಎಲ್ ಪ್ರತಿಭೆಗಳ ಶೇಕಡ 43ರಷ್ಟು ಪಾಲು ಕರ್ನಾಟಕದಲ್ಲಿದೆ.

ರಾಜ್ಯದ ಸಮೀಕ್ಷೆಗೆ ಒಳಪಟ್ಟ ‘ಜಿಸಿಸಿ’ಗಳ ಎಐ ಪ್ರೌಢಿಮೆಯ ಮಟ್ಟ ರಾಷ್ಟ್ರೀಯ ಸರಾಸರಿಗಿಂತ 1.12 ಪಟ್ಟು ಹೆಚ್ಚಿದೆ.

ಶೇಕಡ 66ರಷ್ಟು ಕೇಂದ್ರಗಳು ಎಐ ಬಳಕೆಯಲ್ಲಿ ಉನ್ನತ ಹಂತ ತಲುಪಿವೆ. ಬೆಂಗಳೂರಿನಲ್ಲಿ ದೇಶದ ‘ಜಿಸಿಸಿ’ಗಳಲ್ಲಿನ ಹಿರಿಯ ಎಐ ನಾಯಕತ್ವದ ಉದ್ಯೋಗ ಪ್ರಕಟಣೆಗಳ ಶೇಕಡ 44ರಷ್ಟು ಅವಕಾಶಗಳಿವೆ ಎಂಬುದು ವರದಿಯ ಮತ್ತೊಂದು ಪ್ರಮುಖ ಸಂಗತಿಯಾಗಿದೆ. 2030ರ ವೇಳೆಗೆ ಜಾಗತಿಕ ಎಐ ನಾಯಕತ್ವ, ಕೌಶಲ ಅಭಿವೃದ್ಧಿ ಮತ್ತು ಸಂಶೋಧನೆಯ ವಾಣಿಜ್ಯ ಬಳಕೆಗೆ ಆದ್ಯತೆ ನೀಡಲು ವರದಿ ಶಿಫಾರಸು ಮಾಡಿದೆ.

ಜಾಗತಿಕ ಸಹಭಾಗಿತ್ವ ಮತ್ತು ಸಂಶೋಧನೆ
ಪೋಲೆಂಡ್‌ನ ಕಟೋವಿಸ್ ಪ್ರದೇಶದ ಸಂಸ್ಥೆಗಳ ಜೊತೆಗೆ ತಂತ್ರಜ್ಞಾನ ಸಹಕಾರ, ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆ ಪ್ರವೇಶ ಮತ್ತು ನಾವೀನ್ಯತೆ ವಿನಿಮಯಕ್ಕೆ ಜಂಟಿ ಘೋಷಣೆಗೆ ಸಹಿ ಹಾಕಲಾಗಿದೆ.

ದುಬೈ ಕಾಮರ್ಸ್‌ಸಿಟಿ ಜೊತೆಗೆ ಎಐ ಮತ್ತು ಅನ್ವಯಿಕ ಎಐ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದವಾಗಿದ್ದು, ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ದುಬೈ ಮಾರುಕಟ್ಟೆಯಲ್ಲಿ ಕಾರ್ಯಾಚರಣೆ ವಿಸ್ತರಿಸಲು ನೆರವಾಗಲಿದೆ. ಜರ್ಮನಿ, ಜಪಾನ್‌ ಮತ್ತು ಯುರೋಪಿನ ಇತರ ಮಾರುಕಟ್ಟೆಗಳಲ್ಲಿ ಜಾಗತಿಕ ನಾವೀನ್ಯತೆ ಒಕ್ಕೂಟದ ವ್ಯಾಪ್ತಿ ವಿಸ್ತರಿಸಲು ಕಾರ್ವ್‌ ಸ್ಟಾರ್ಟ್‌ಅಪ್‌ ಲ್ಯಾಬ್ಸ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕೊರಿಯಾ ಮತ್ತು ತೈವಾನ್‌ ವಾಣಿಜ್ಯ ಮಂಡಳಿಗಳೊಂದಿಗಿನ ಒಪ್ಪಂದಗಳು ಉದ್ಯಮ ಸಂಪರ್ಕ ಮತ್ತು ಹೂಡಿಕೆಗೆ ಉತ್ತೇಜನ ನೀಡಲಿವೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಬಯೊ ಇನ್ನೊವೇಷನ್‌ ಸೆಂಟರ್‌ ಮೂರು ಮಹತ್ವದ ಉಪಕ್ರಮಗಳನ್ನು ಪ್ರಕಟಿಸಿದೆ.

ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್‌ ಯಾರ್ಕ್‌ ಜತೆ ಕೈಗಾರಿಕಾ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ, ಬೆಕ್‌ಮನ್‌ ಕೌಲ್ಟರ್‌ ಉತ್ಕೃಷ್ಟತಾ ಕೇಂದ್ರ ಮತ್ತು ಪೆಪ್ಟೈಡ್‌ ಸಂಶೋಧನೆ ಹಾಗೂ ಚಿಕಿತ್ಸಾ ಆವಿಷ್ಕಾರಕ್ಕಾಗಿ ಕರ್ನಾಟಕ ಪ್ರೈಡ್‌ ಯೋಜನೆ ಇವುಗಳಲ್ಲಿ ಸೇರಿವೆ. ಫ್ರಾನ್ಸ್‌ನ ಜಿನೊಪೋಲ್‌ ಜತೆ ಸಿ-ಕ್ಯಾಂಪ್‌ ಒಪ್ಪಂದ ಮಾಡಿಕೊಂಡಿದ್ದು, ಸೈಬರ್‌ ಸುರಕ್ಷತಾ ಕೌಶಲ ಮತ್ತು ಸಂಶೋಧನೆಗೆ ಸೈಸೆಕ್‌ ಹಾಗೂ ಡಿಎಸ್‌ಎನ್‌ ಫೌಂಡೇಷನ್‌ ಸಹಭಾಗಿತ್ವ ರೂಪಿಸಿವೆ.

ಹೊಸ ತಂತ್ರಜ್ಞಾನ ಉಪಕ್ರಮಗಳು
ಅಮಾಗಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಕ್ರೀಡಾ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರ ಸ್ಥಾಪಪಿಸುವ ಇಂಗಿತ ಪತ್ರಕ್ಕೆ ಸಹಿ ಹಾಕಲಾಗಿದೆ. ಕ್ರೀಡಾ ವಿಶ್ಲೇಷಣೆ, ಬಯೊಮೆಕ್ಯಾನಿಕ್ಸ್‌, ಕ್ರೀಡಾಪಟುಗಳ ಸಾಮರ್ಥ್ಯ ವೃದ್ಧಿ, ಗಾಯ ತಡೆ ಮತ್ತು ಪುನರ್ವಸತಿ ಇದರ ಪ್ರಮುಖ ಕಾರ್ಯಕ್ಷೇತ್ರಗಳಾಗಿವೆ. ಈ ಕೇಂದ್ರದ ಆಡಳಿತ ಮತ್ತು ಕಾರ್ಯಾಚರಣೆಯ ವಿವರಗಳನ್ನು ಮುಂದಿನ ಒಪ್ಪಂದಗಳಲ್ಲಿ ಅಂತಿಮಗೊಳಿಸಬೇಕಿದೆ.

ಡ್ರೋನ್‌ ಪರೀಕ್ಷಾ ಸೌಲಭ್ಯ ಅಭಿವೃದ್ಧಿ
ಚಿಕ್ಕಬಳ್ಳಾಪುರ ಜಿಲ್ಲೆಯ ಜೀದರಹಳ್ಳಿಯಲ್ಲಿ ಮೀಸಲಾದ ಡ್ರೋನ್‌ ಪರೀಕ್ಷಾ ಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದೆ.
ಕೃಷಿ, ರಕ್ಷಣೆ, ಸರಕು ಸಾಗಣೆ, ಸಾಗರ ತಂತ್ರಜ್ಞಾನ ಮತ್ತು ನಗರ ಯೋಜನೆ ಕ್ಷೇತ್ರಗಳಲ್ಲಿ ಬಳಸುವ ಡ್ರೋನ್‌ಗಳ ಪರೀಕ್ಷೆ ಹಾಗೂ ತಂತ್ರಜ್ಞಾನ ಮೌಲ್ಯಮಾಪನಕ್ಕೆ ಇದು ನೆರವಾಗಲಿದೆ.

ಮತ್ತೊಂದೆಡೆ, ಸೋಲ್ಏಸ್‌ ಸಹಯೋಗದಲ್ಲಿ ಬಳಕೆಯಲ್ಲಿಲ್ಲದ ಕಾರ್ಪೊರೇಟ್‌ ಕಂಪನಿಗಳ ಲ್ಯಾಪ್‌ಟಾಪ್‌ಗಳನ್ನು ನವೀಕರಿಸಿ ಸರ್ಕಾರಿ ಶಾಲೆಗಳು, ಪಂಚಾಯಿತಿಗಳು ಮತ್ತು ಕಚೇರಿಗಳಿಗೆ ಒದಗಿಸುವ ಡಿಜಿಟಲ್‌ ಸೇರ್ಪಡೆ ಕಾರ್ಯಕ್ರಮ ರೂಪಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಎಂಜಿನಿಯರ್‌ಗಳಿಗಾಗಿ 63,200 ಜನರನ್ನು ಗುರಿಯಾಗಿಸಿಕೊಂಡ ಎಐ ಕೌಶಲ ಅಭಿವೃದ್ಧಿ ಉಪಕ್ರಮವನ್ನೂ ಕೈಗೊಳ್ಳಲು ಸಮಾವೇಶದಲ್ಲಿ ನಿರ್ಧರಿಸಲಾಗಿದೆ.

ಶೃಂಗಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳು ಕರ್ನಾಟಕದ ತಂತ್ರಜ್ಞಾನ ಕ್ಷೇತ್ರದ ಮುಂದಿನ ಹಂತಕ್ಕೆ ದಿಕ್ಕು ತೋರಿಸಲಿವೆ. ಜಾಗತಿಕ ಹೂಡಿಕೆ, ಸಂಶೋಧನೆ, ಸ್ಟಾರ್ಟ್‌ಅಪ್‌ ಬೆಳವಣಿಗೆ ಮತ್ತು ಹೊಸ ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಯಶಸ್ವಿ ಪ್ರಯತ್ನ ಇದಾಗಿದೆ.

–ಕರ್ನಾಟಕವು ತಂತ್ರಜ್ಞಾನ ಸೇವೆಗಳ ಕೇಂದ್ರ ಎಂಬ ತನ್ನ ಸಾಂಪ್ರದಾಯಿಕ ಗುರುತನ್ನು ಮೀರಿ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಸಂಶೋಧನೆ ಮತ್ತು ವಾಣಿಜ್ಯೀಕರಣದ ಜಾಗತಿಕ ತಾಣವಾಗಿ ಬೆಳೆಯುತ್ತಿರುವುದಕ್ಕೆ ಸಮಾವೇಶದ ಯಶಸ್ಸು ಸಾಕ್ಷಿಯಾಗಿದೆ.–ಪ್ರಿಯಾಂಕ್‌ ಖರ್ಗೆ(ಐಟಿ, ಬಿಟಿ ಸಚಿವ)**


Share

You cannot copy content of this page