ಬೆಂಗಳೂರು: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬಳಸುವ ಸ್ಪಟರಿಂಗ್ ಟಾರ್ಗೆಟ್ಸ್ ತಯಾರಿಕೆಗೆ ಹೆಸರಾಗಿರುವ ಅಮೆರಿಕ ಮೂಲದ ಲಿಂಡ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಟೆಕ್ನಾಲಜಿ ಕಂಪನಿಯು ರಾಜ್ಯದಲ್ಲಿ ತನ್ನದೇ ಆದ ತಯಾರಿಕಾ ಸ್ಥಾವರದ ಅಭಿವೃದ್ಧಿಗೆ ಬಂಡವಾಳ ಹೂಡಲು ಮುಂದೆ ಬಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಶುಕ್ರವಾರ ತಮ್ಮನ್ನು ಇಲ್ಲಿ ಭೇಟಿಯಾದ ಕಂಪನಿಯ ಉನ್ನತ ಮಟ್ಟದ ನಿಯೋಗದ ಜತೆ ಅವರು ಹೂಡಿಕೆ ಮತ್ತು ಇದಕ್ಕೆ ಪೂರಕವಾದ ಸೌಕರ್ಯಗಳ ಬಗ್ಗೆ ಚರ್ಚಿಸಿದರು.
ಬಳಿಕ ಮಾತನಾಡಿದ ಅವರು, ಲಿಂಡ್ ಲಂಪನಿಯು ಉತ್ತರ ಅಮೆರಿಕ, ಯೂರೋಪ್ ಮತ್ತು ಏಷ್ಯಾದ 12 ದೇಶಗಳ 35 ಕಡೆಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ. ಇದು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್, ಸರ್ಫೇಸ್ ಎಂಜಿನಿಯರಿಂಗ್ ಮತ್ತು ಅಡ್ವಾನ್ಸ್ಡ್ ಕೋಟಿಂಗ್ ತಂತ್ರಜ್ಞಾನಗಳಲ್ಲಿ ಕೂಡ ಮುಂಚೂಣಿಯಲ್ಲಿದೆ. ಇಂತಹ ಕಂಪನಿಯ ಹೂಡಿಕೆಗೆ ನಮ್ಮ ಸ್ವಾಗತವಿದೆ ಎಂದು ಅವರು ಹೇಳಿದ್ದಾರೆ.
ಲಿಂಡ್ ಕಂಪನಿಯು ವಿಶೇಷವಾಗಿ ಹೈಪ್ಯೂರಿಟಿ ಮೆಟೀರಿಯಲ್ಸ್ ಮತ್ತು ಪಿವಿಡಿ (ಫಿಸಿಕಲ್ ವೇಪರ್ ಡಿಪೊಸಿಷನ್) ತಯಾರಿಕೆಗೆ ಹೆಸರುವಾಸಿಯಾಗಿದೆ. ಇದರಿಂದ ಸೆಮಿಕಂಡಕ್ಟರ್, ಏರೋಸ್ಪೇಸ್ ಮತ್ತು ಆಟೋಮೋಟಿವ್ ಉದ್ಯಮಗಳ ಪೂರೈಕೆ ಸರಪಳಿಯ ಬಲವರ್ಧನೆ ಆಗಲಿದೆ. ಸ್ಥಳೀಯವಾಗಿಯೇ ಎಲ್ಲವೂ ತಯಾರಾಗಬೇಕು ಎನ್ನುವುದು ಸರಕಾರದ ಗುರಿಯಾಗಿದೆ. ಹೀಗಾಗಿ ಕಂಪನಿಗೆ ಬೇಕಾಗಿರುವ ಭೂಮಿ, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಕಂಪನಿಯ ನಿಯೋಗದಲ್ಲಿ ಅಧ್ಯಕ್ಷ ಫ್ರಾಂಕ್ ಡಿ ಕರ್ಮಾನ್ಟ್ರೆಂಡ್, ಉಪಾಧ್ಯಕ್ಷ ಜಾನ್ ಸಿರ್ಮನ್, ಸಹನಿರ್ದೇಶಕರುಗಳಾದ ಸಾಹಿರ್ ಖಾನ್ ಮತ್ತು ಆದಿತ್ಯ ಬೋಡೇಪುಡಿ ಹಾಗೂ ಆದಿತ್ಯ ವಾಸನ್ ಸಿಂಗ್ಲಾ ಉಪಸ್ಥಿತರಿದ್ದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಖುಷ್ಬು ಗೋಯಲ್ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.
