ಸಮಗ್ರ ಸುದ್ದಿ

ಒಪಿಎಸ್, ಎನ್ ಪಿಎಸ್ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ; ಸರ್ಕಾರಿ ನೌಕರರ ಹಬ್ಬದ ಮುಂಗಡ 50 ಸಾವಿರ ರೂಪಾಯಿಗೆ ಹೆಚ್ಚಳ: ಸಿಎಂ ಡಿ ಕೆ ಶಿವಕುಮಾರ್ ಘೋಷಣೆ

Share

ಹಿರಿಯೂರು:ಓಪಿಎಸ್, ಎನ್ ಪಿಎಸ್ ಸಂಬಂಧಿಸಿದಂತೆ ನೌಕರರು ಆತಂಕಪಡಬೇಕಿಲ್ಲ. ಈ ವಿಚಾರವಾಗಿ ಹಣಕಾಸು ಇಲಾಖೆ, ಸಚಿವ ಸಂಪುಟದಲ್ಲಿ ಸಮಾಲೋಚಿಸಲಾಗುವುದು. ನೌಕರರಿಗೆ ನೀಡುವ ಹಬ್ಬದ ಮುಂಗಡವನ್ನು 25 ಸಾವಿರದಿಂದ 50 ಸಾವಿರ ರೂಪಾಯಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹಿರಿಯೂರಿನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.

ಹಿರಿಯೂರಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನ, ಅಭಿನಂದನಾ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

“ಓಪಿಎಸ್, ಎನ್ ಪಿಎಸ್ ವಿಚಾರದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಚುನಾವಣಾ ಪ್ರಣಾಳಿಕೆ ರಚಿಸಿದವರೊಂದಿಗೂ ಸಮಾಲೋಚನೆ ಮಾಡಲಾಗುವುದು. ಹಾಗೂ, ನೌಕರರ ಸಂಘದ ಅಭಿಪ್ರಾಯವನ್ನೂ ಪಡೆದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.‌ ಸರ್ಕಾರಿ ನೌಕರರ ಸೇವೆ ಮತ್ತು ಅವರ ಸ್ವಾಭಿಮಾನಕ್ಕೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ” ಎಂದು ಹೇಳಿದರು.

ನಿಮಗೂ ನಮಗೂ ಇರುವ ಸಂಬಂಧ ಭಕ್ತ ಮತ್ತು ಭಗವಂತನ ನಡುವಿನ ಸಂಬಂಧದಂತೆ. ಎಲ್ಲದಕ್ಕೂ ಒಂದು ಕಾಲಾವಕಾಶವಿದೆ. ನಿಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಲಿದೆ.‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರಿ ನೌಕರರ ವೇತನವನ್ನು ಶೇ.27ರಷ್ಟು ಹೆಚ್ಚಿಸಲಾಗಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಬದ್ಧತೆ ಸರ್ಕಾರಕ್ಕಿದೆ ಎಂದರು.

“ಹಿರಿಯೂರಿನಲ್ಲಿ ಸರ್ಕಾರಿ ನೌಕರರ ಭವನ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಸಮುದಾಯ ಭವನ ನಿರ್ಮಾಣ, ಗುರುಭವನ ನವೀಕರಣ ಹಾಗೂ ಅರ್ಧಕ್ಕೆ ನಿಂತಿರುವ ನೌಕರರ ಭವನದ ಕಾಮಗಾರಿಯನ್ನು ಮುಂದುವರಿಸುವಂತೆ ಸರ್ಕಾರಿ ನೌಕರರ ಸಂಘದವರು ಸಲ್ಲಿಸಿದ ಮನವಿಗೆ ವೇದಿಕೆಯಲ್ಲಿಯೇ ಸಹಿ ಹಾಕುವ ಮೂಲಕ ಬೇಡಿಕೆಗಳನ್ನು ಈಡೇರಿಸಲು ಸಮ್ಮತಿ” ಸೂಚಿಸಿದರು.

ಹಬ್ಬದ ಮುಂಗಡ ಹೆಚ್ಚಳಕ್ಕೆ ಸ್ಥಳದಲ್ಲೇ ಸ್ಪಂದನೆ

“ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಹಬ್ಬದ ಮುಂಗಡ ಮೊತ್ತವನ್ನು 25 ಸಾವಿರದಿಂದ 50 ಸಾವಿರ ರೂಪಾಯಿಗೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಸ್ಥಳದಲ್ಲೇ ಸ್ಪಂದಿಸಿದ ಸಿಎಂ, “ಪೆನ್ನು ನನ್ನ ಕೈಯಲ್ಲಿದೆ. ಹಿರಿಯೂರಿನಲ್ಲಿ ವಿಶೇಷ ಘೋಷಣೆ ಮಾಡುತ್ತಿದ್ದೇನೆ” ಎಂದು ಪ್ರಕಟಿಸಿದರು.

ಆಡಳಿತದ ರಥದ ಸಾರಥಿಗಳು ನೌಕರರು

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ರಥದ ಎರಡು ಚಕ್ರಗಳಿದ್ದಂತೆ. ಸರ್ಕಾರ ರೂಪಿಸುವ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ. ಜನರ ಕಷ್ಟ-ಸುಖಗಳನ್ನು ಅರಿತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯ. ವಿಧಾನಸೌಧದಲ್ಲಿ ಕೆತ್ತಲಾಗಿರುವ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಸಂದೇಶವನ್ನು ಪ್ರತಿಯೊಬ್ಬ ನೌಕರರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.

“ತಾಯಿ ಮೇಲೆ ಮಗುವಿಗೆ ಎಷ್ಟು ನಂಬಿಕೆ ಇರುತ್ತದೆಯೋ, ಮರಕ್ಕೆ ಬೇರಿನ ಮೇಲೆ ಎಷ್ಟು ವಿಶ್ವಾಸವಿರುತ್ತದೆಯೋ ಅಷ್ಟೇ ನಂಬಿಕೆ ನನಗೆ ಸರ್ಕಾರಿ ನೌಕರರ ಮೇಲೂ ಇದೆ. ನಾಡಿನ ಅಭಿವೃದ್ಧಿಯ ರಥ ನಿಮ್ಮ ಕೈಯಲ್ಲಿದೆ. ಅದನ್ನು ಮುನ್ನಡೆಸುವ ಸಾರಥಿಗಳು ನೀವೇ. ಆಡಳಿತ ಯಂತ್ರ ಮತ್ತು ಅಭಿವೃದ್ಧಿಯ ಮಂತ್ರ ಒಟ್ಟಿಗೆ ಸಾಗಬೇಕು” ಎಂದು ಹೇಳಿದರು.

ನಿಮ್ಮ ಗೌರವ ಕಾಪಾಡುವುದು ನನ್ನ ಕರ್ತವ್ಯ

“ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ನಾಡಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ನಿವೃತ್ತರಾದ ಬಳಿಕವೂ ಅನೇಕರು ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರಿಗೆ “ಟಿಆರ್”, ಎಂಜಿನಿಯರ್ಗಳಿಗೆ “ಇಆರ್” ಎಂಬ ಗೌರವ ಸೂಚಕ ಪದಗಳನ್ನು ಸೇರಿಸಿರುವುದು ಅವರ ವೃತ್ತಿಪರ ಸೇವೆಗೆ ಗೌರವ ನೀಡುವ ಉದ್ದೇಶದಿಂದ” ಎಂದು ವಿವರಿಸಿದರು.

“ನನ್ನ ಗೌರವ ಕಾಪಾಡಬೇಕಾದವರು ನೀವೇ, ನಿಮ್ಮನ್ನು ರಕ್ಷಿಸಬೇಕಾದವರು ನಾವೇ. ಇಬ್ಬರ ನಡುವೆಯೂ ಪರಸ್ಪರ ತಿಳಿವಳಿಕೆ ಮತ್ತು ವಿಶ್ವಾಸ ಇರಬೇಕು. ನಾನು ನಿಮ್ಮ ಗೌರವ ಕಾಪಾಡುತ್ತೇನೆ, ನೀವು ನನ್ನ ಗೌರವ ಕಾಪಾಡಿ. ಪ್ರೀತಿ, ವಿಶ್ವಾಸ ಮತ್ತು ಸ್ನೇಹದ ಸಂಬಂಧವನ್ನು ಉಳಿಸಿಕೊಂಡು ಒಟ್ಟಾಗಿ ಕೆಲಸ ಮಾಡೋಣ” ಎಂದು ಮನವಿ ಮಾಡಿದರು.

“ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ನೇತೃತ್ವದಲ್ಲಿ ಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನೌಕರರ ಹಿತಾಸಕ್ತಿ ಕಾಪಾಡಲು ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ” ಎಂದು ಭರವಸೆ ನೀಡಿದರು.

“ಹಿರಿಯೂರಿನ ದಿವಂಗತ ಶಾಸಕ ಸುಧಾಕರ್ ಅವರ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಜಾತಿ, ಧರ್ಮದ ಬಲಕ್ಕಿಂತ ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ ಅವರು ಕೆಲಸ ಮಾಡಿದ್ದರು. ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ” ಎಂದರು.

ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನ

“ಮುಂದಿನ ವರ್ಷ ರಾಜ್ಯ ಸರ್ಕಾರದ ವತಿಯಿಂದ ಮೂರು ದಿನಗಳ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಸಹೋದ್ಯೋಗಿಗಳೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ವಿದೇಶಗಳಲ್ಲಿರುವ ಕನ್ನಡಿಗರು, ಕನ್ನಡ ಸಂಘಟನೆಗಳು, ಸಾಹಿತಿಗಳು, ಹೋರಾಟಗಾರರು ಹಾಗೂ ಸರ್ಕಾರಿ ನೌಕರರನ್ನು ಒಗ್ಗೂಡಿಸಿ ಸಮ್ಮೇಳನ ನಡೆಸಲಾಗುವುದು. ಜಾತಿ, ಧರ್ಮದ ಭೇದ ಮರೆತು ವಿದೇಶಗಳಲ್ಲಿಯೂ ಕನ್ನಡಿಗರು ಭಾಷೆಯ ಹೆಸರಿನಲ್ಲಿ ಒಂದಾಗುತ್ತಿರುವುದು ಹೆಮ್ಮೆಯ ಸಂಗತಿ. ಅವರೆಲ್ಲರನ್ನೂ ಆಹ್ವಾನಿಸಿ ಗೌರವಿಸುವ ಉದ್ದೇಶವಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು” ಎಂದು ತಿಳಿಸಿದರು.

ವಿಜಯೇಂದ್ರ ಅಧ್ಯಕ್ಷತೆಯಲ್ಲಿ ವೆಚ್ಚ ಶೋಧನಾ ತನಿಖಾ ತಂಡ ರಚಿಸಲು ಸಿದ್ದ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಅವರು, “ನನ್ನ ಮನೆಯ ನವೀಕರಣಕ್ಕೆ ಖರ್ಚಾಗಿರುವ ಹಣದ ಬಗ್ಗೆ ತನಿಖೆ ನಡೆಸಲು ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸುವುದಕ್ಕೆ ನಾನು ಸಿದ್ದನಿದ್ದೇನೆ. ಎರಡು ದಿನಗಳಲ್ಲಿ ತಂಡ ರಚಿಸಲಿ. ಅದರಲ್ಲಿ ನಮ್ಮ ಪಕ್ಷದವರು ಯಾರೂ ಕೂಡ ಸದಸ್ಯರಾಗುವುದು ಬೇಡ. ಜನತಾದಳ, ಬಿಜೆಪಿ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು ಒಟ್ಟಾರೆ, ವಿಜಯೇಂದ್ರ ಅವರಿಗೆ ಯಾರು ಬೇಕೋ ಅವರನ್ನು ಆಯ್ಕೆ ಮಾಡಿಕೊಂಡು ತನಿಖೆ ನಡೆಸಿ, ವರದಿ ಕೊಡಲಿ” ಎಂದು ಸವಾಲು ಹಾಕಿದರು.

“ನಾನು 224 ಜನ ಶಾಸಕರಿಗೆ ಮುಖ್ಯಮಂತ್ರಿ. ವಿಜಯೇಂದ್ರ ಅವರನ್ನು ಒಳಗೊಂಡಂತೆ ಎಲ್ಲರನ್ನೂ ನನ್ನ ನೂತನ ಮನೆಯ ಗೃಹಪ್ರವೇಶಕ್ಕೆ ಆಹ್ವಾನ ನೀಡಿದ್ದೆ. ನವೀಕರಣಕ್ಕೆ 100 ಕೋಟಿ ಖರ್ಚಾಗಿದೆ ಎಂದು ಹೇಳುತ್ತಿರುವ ವಿಜಯೇಂದ್ರ ಅವರು ತಮ್ಮದೇ ಅಧ್ಯಕ್ಷತೆಯಲ್ಲಿ ನವೀಕರಣಕ್ಕೆ ಎಷ್ಟೆಲ್ಲಾ ಖರ್ಚಾಗಿದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಿ. ಅದರ ವರದಿಯನ್ನು ಅಧಿವೇಶನದಲ್ಲಿ ಇಟ್ಟು ಚರ್ಚೆ ಮಾಡಲಿ. ಇದರಿಂದ ರಾಜ್ಯದ ಜನತೆಗೆ ಸತ್ಯ ಗೊತ್ತಾಗುತ್ತದೆ” ಎಂದು ಹೇಳಿದರು.

ಗೋವಿನ ಹೆಸರಿನಲ್ಲಿ ಅಧಿಕಾರ ದುರುಪಯೋಗಕ್ಕೆ ಬಿಡುವುದಿಲ್ಲ

ಮತಾಂತರ ಕಾಯ್ದೆ ರದ್ದತಿ ಬಗ್ಗೆ ವಿರೋಧ ಪಕ್ಷಗಳ ಆರೋಪದ ಬಗ್ಗೆ ಕೇಳಿದಾಗ, ‌”ಗೋವಿನ ಹೆಸರಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ. ನಮ್ಮ ಪಕ್ಷಕ್ಕೂ ಸಿದ್ದಾಂತವಿದೆ. ನಾವು ಗೋವಿನ ರಕ್ಷಣೆ ಮಾಡುತ್ತೇವೆ. ಗೌರವದಿಂದ ಕಾಣುತ್ತೇವೆ. ಹಿಂದಿನಿಂದಲೂ ಅನೇಕ ಕಾನೂನುಗಳು ಅಸ್ತಿತ್ವದಲ್ಲಿ ಇವೆ. ಕಾನೂನು ಜಾರಿ ಮಾಡುವುದು ದ್ವೇಷ ಹರಡುವುದಕ್ಕಲ್ಲ . ಎಲ್ಲಾ ಸಮಾಜದವರು ಕೂಡ ಇಲ್ಲಿ ಒಟ್ಟಿಗೆ ಬದುಕಬೇಕು. ಉತ್ತರ ಪ್ರದೇಶದಲ್ಲಿ ಗೋಮಾಂಸ ರಫ್ತು ಕಾರ್ಖಾನೆಗಳು ಬಹಳಷ್ಟಿವೆ. ಅದನ್ನು ಏಕೆ ಮುಚ್ಚಲಿಲ್ಲ, ಮೊದಲು ಅದನ್ನು ಮುಚ್ಚಿಬಿಡಲಿ” ಎಂದರು.

ಪ್ರತಿ ತಿಂಗಳು ಪ್ರಜಾಸೇವೆ

“ಎಲ್ಲಾ ಸಚಿವರು, ತಿಂಗಳಿಗೆ ಎರಡು ಶನಿವಾರ ಪ್ರಜಾಸೇವೆ ಕಾರ್ಯಕ್ರಮ ಮಾಡುತ್ತಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆ ಮಾಡುತ್ತೇವೆ. ಪ್ರತಿ ತಿಂಗಳು ನಾನು ಎರಡು- ಮೂರು ಕಡೆ ಹೋಗಿ ಜನರ ಸಮಸ್ಯೆಗಳನ್ನು ಆಲಿಸುತ್ತೇನೆ. ಜನರ ಬದುಕಿನಲ್ಲಿ ಬದಲಾವಣೆ ತರುವ ಮೂಲಕ ಅವರ ನೋವನ್ನು ನೀವಾರಿಸುವುದು ನಮ್ಮ ಸರ್ಕಾರದ ಕರ್ತವ್ಯ” ಎಂದರು.

ಕಬ್ಬಿನ ಬೆಲೆ ಏರಿಕೆ ಕೇಂದ್ರ ಜವಾಬ್ದಾರಿ

ಕಬ್ಬು ಬೆಳೆಗಾರರಿಗೆ ಖಾಲಿ ಜೇಬು ತೋರಿಸಿ, ಹಿರಿಯೂರಲ್ಲಿ 2 ಸಾವಿರ ಕೋಟಿ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡುತ್ತಿರುವುದು ಕೇವಲ ಗಿಮಿಕ್ ಎನ್ನುವ ವಿರೋಧ ಪಕ್ಷಗಳು ಆರೋಪದ ಬಗ್ಗೆ ಪ್ರಸ್ತಾಪಿಸಿದಾಗ,‌ “ವಿರೋಧ ಪಕ್ಷಗಳು ಏನು ಬೇಕಾದರು ಆರೋಪ ಮಾಡಲಿ. ನಾವು ಜನರ ಋಣ ತೀರಿಸುವ ಕೆಲಸವನ್ನ ಶ್ರದ್ಧೆಯಿಂದ ಮಾಡುತ್ತೇನೆ. ಕಬ್ಬು ಕಾರ್ಖಾನೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಕನಿಷ್ಠ ಮಾರಾಟ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಕಳೆದ 10 ವರ್ಷಗಳಿಂದ ಬೆಲೆ ನಿಗದಿ ಮಾಡಿಲ್ಲ. ಇದರ ಮಧ್ಯೆ ನಮ್ಮ ಮಂತ್ರಿಗಳೇ ಮುಂದೆ ನಿಂತು ಕಾರ್ಖಾನೆ ಮಾಲೀಕರ ಬಳಿ ಮಾತಾಡಿ ಬೆಲೆ ನಿಗದಿ ಮಾಡಿದ್ದಾರೆ” ಎಂದರು.


Share

You cannot copy content of this page