ಸಮಗ್ರ ಸುದ್ದಿ

ಸಂವಿಧಾನ ದಿನಾಚರಣೆಗೆ ರಾಜಕೀಯ ಲೇಪನ ಬೇಡ: ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ

Share

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ನ.26 ರಂದು ಹಮ್ಮಿಕೊಂಡಿರುವ ಸಂವಿಧಾನ ದಿನಾಚರಣೆ ಸರ್ಕಾರಿ ಕಾರ್ಯಕ್ರಮ. ಇದರ ಸುತ್ತ  ನಡೆಯುತ್ತಿರುವ ರಾಜಕೀಯ ಚರ್ಚೆಗಳು ಮಾಧ್ಯಮಗಳ ಸೃಷ್ಟಿಯಾಗಿದೆ ಎಂದು ಕೃಷಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಹೇಳಿದರು.


ನಗರದ ಟೌನ್ ಹಾಲ್ ಸಮೀಪ ಸಂವಿಧಾನ‌ ದಿನಾಚರಣೆ ಪ್ರಯುಕ್ತ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂವಿಧಾನ ದಿನಾಚರಣೆಯನ್ನು ದೇಶವ್ಯಾಪಿ ಆಚರಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆಚರಿಸಲು ಕರೆ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವ ಹಿನ್ನೆಲೆಯಲ್ಲಿ, ಸರ್ಕಾರದ ವತಿಯಿಂದಲೂ ವಿಭಾಗವಾರು ಸಂವಿಧಾನ ದಿನಾಚರಣೆಯನ್ನು ಆಚರಿಸಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷ ಒಂದೊಂದು ವಿಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು.ಅದರಂತೆ ಈ ಬಾರಿ ಮೈಸೂರಿನಲ್ಲಿ ನಡೆಸಲಾಗುತ್ತಿದೆ‌ ಎಂದರು.

ರಾಜಕೀಯ ಪ್ರೇರಿತ‌ ಚರ್ಚೆ ಅನಗತ್ಯ

ಸಂವಿಧಾನ ದಿನಾಚರಣೆ ವಿಚಾರದಲ್ಲಿ ರಾಜಕೀಯ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರದ ಕಾರ್ಯಕ್ರಮದಲ್ಲಿ ರಾಜಕಾರಣ ಎಲ್ಲಿಂದ ಬರುತ್ತದೆ? ಎಲ್ಲರನ್ನೂ ಆಹ್ವಾನಿಸುತ್ತೇವೆ. ಪಕ್ಷಭೇದ ಮರೆತು, ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಂವಿಧಾನ ಇರುವುದು ಒಬ್ಬರಿಗಲ್ಲ, ಸರ್ವರಿಗೂ ಎಂಬುದರೊಂದಿಗೆ ಅದರ ಮೂಲ ಆಶಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಈ ಹಿಂದೆ ಡಾ.ಎಚ್.ಸಿ. ಮಹದೇವಪ್ಪ ಅವರು ಪೂರ್ವಭಾವಿ ಸಭೆ ನಡೆಸಿದ್ದು, ಮಹಾರಾಜ ಕಾಲೇಜು ಮೈದಾನವನ್ನೇ  ಆಯ್ಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ನಾವು ಯಾವುದೇ ವಿಚಾರಕ್ಕೂ ಜವಾಬ್ದಾರರಲ್ಲ. ಇದರ ಸಂಪೂರ್ಣ ಜವಾಬ್ದಾರಿ ಸರ್ಕಾರದ್ದು. ಸರ್ಕಾರದ ತೀರ್ಮಾನದಂತೆ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ರಾಜಕೀಯ ಪ್ರೇರಿತ ಲೇಪನ ನೀಡುವುದು ಸರಿಯಲ್ಲ ಎಂದು ನರೇಂದ್ರ ಸ್ವಾಮಿ ಹೇಳಿದರು.


ಮಹದೇವಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಶಾಸಕರು ಮತ್ತು ಮಾಜಿ ಸಚಿವರು. ಪಕ್ಷದ ಆದೇಶದಂತೆ ನಾವೆಲ್ಲರೂ ಒಟ್ಟಾಗಿ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇವೆ. ನಾನೊಬ್ಬ ಸಹಭಾಗಿಯಷ್ಟೇ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸಚಿವರು ಅನುದಾನ ಕೊಡಿಸಲಿ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಟೀಕೆ ಕುರಿತಂತೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಕೇಂದ್ರದಿಂದ ಅನುದಾನ ಕೊಡಲು ಪ್ರಯತ್ನಿಸಲಿ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಟೀಕೆ ಮಾಡುವುದು ಸರಿಯಲ್ಲ ಎಂದರು.

ವಿವಾದಿತ ಬಸವ ಮಂಟಪ ಕೃತಿಯ ಕುರಿತ ಪ್ರಶ್ನೆಗೆ ಉತ್ತರಿಸಿ, ಬಸವಣ್ಣನವರು ಮಹಾ ಮಾನವತವಾದಿ. ಅವರ ಕುರಿತು ಬರೆದಿರುವ ಕೃತಿಕಾರರ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಕೃತಿಯು ಯೋಗ್ಯವಲ್ಲ, ಕೃತಿಕಾರರಿಗೆ ಬಸವಣ್ಣರ ಕುರಿತು ಮಾತನಾಡುವ ಯೋಗ್ಯತೆಯೂ ಇಲ್ಲ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಇತರರು ಇದ್ದರು.


Share

You cannot copy content of this page