ಬೆಂಗಳೂರು:ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನವನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಿಕೊಳ್ಳುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚಿಂತನೆ ಮಹತ್ವದ ಹೆಜ್ಜೆಯಾಗಿದ್ದು, ಇದು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ವೃತ್ತಿಪರವಾದ ಕ್ಷಮತೆಯ ಜೊತೆಗೆ ಮಾನವೀಯ ಮೌಲ್ಯಗಳು, ಸಹನುಭೂತಿ ಮತ್ತು ಸಹಜೀವಿಗಳ ಕುರಿತಾದ ಸಂವೇದನೆಯನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ನಡೆದ ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ, ಸವಾಲುಗಳು ಮತ್ತು ನಿವಾರಣಾ ಮಾರ್ಗೋಪಾಯಗಳು ಎನ್ನುವ ಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣವೆಂದರೆ ಕೇವಲ ವೈದ್ಯಕೀಯ ಜ್ಞಾನ ಮತ್ತು ಚಿಕಿತ್ಸಾ ವಿಧಾನಗಳನ್ನು ಕಲಿಸುವುದಷ್ಟೇ ಅಲ್ಲ, ರೋಗಿಗಳ ಮನಸ್ಥಿತಿ, ಅವರ ಬದುಕಿನ ಸವಾಲುಗಳನ್ನು ಮಾನವೀಯ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಸಂವೇದನಾಶೀಲವಾದ ಮನೋಭಾವವನ್ನು ಬೆಳೆಸಬೇಕಾದ ಅವಶ್ಯಕತೆ ಇದೆ. ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನ ವಿದ್ಯಾರ್ಥಿಗಳಲ್ಲಿ ಇಂತಹ ಮಾನವೀಯ ದೃಷ್ಟಿಕೋನವನ್ನು ಬೆಳೆಸಲು ನೆರವಾಗಲಿದ್ದು, ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಪ್ರಯತ್ನ ವೈದ್ಯಕೀಯ ಶಿಕ್ಷಣಕ್ಕೆ ಹೊಸ ಆಯಾಮವನ್ನು ನೀಡಲಿದೆ ಎಂದರು.
**ಶಾಲಾ ಶಿಕ್ಷಣದಲ್ಲಿ ವೈದ್ಯಕೀಯ ಪಠ್ಯ ಅಳವಡಿಕೆ: **
ಶಾಲಾ ಶಿಕ್ಷಣದಲ್ಲಿಯೂ ಕೂಡ ವೈದ್ಯಕೀಯ ವಿಜ್ಞಾನದ ಬೋಧನೆಯನ್ನು ಅಳವಡಿಸಿಕೊಳ್ಳಬೇಕೆನ್ನುವ ಅಭಿಮತ ತಮ್ಮದಾಗಿದೆ ಎಂದ ಬಿಳಿಮಲೆ, ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಪಠ್ಯ ಪರಿಷ್ಕರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪೂರ್ವಭಾವಿ ಕೆಲಸ ಆರಂಭವಾಗಿದೆ. ಮಕ್ಕಳಲ್ಲಿ ಮಾನವ ದೇಹದ ರಚನೆ ಮತ್ತು ಕಾರ್ಯ ನಿರ್ವಹಣೆಯ ಬಗೆಗಿನ ಜ್ಞಾನ ಮೂಡಿದಲ್ಲಿ ಅದು ವೈಜ್ಞಾನಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೂಕ್ತ ಆರೋಗ್ಯ ನಡವಳಿಕೆಗಳನ್ನು ಅಳವಡಿಸಿಕೊಳ್ಳಲು ಮತ್ತು ಪಾಲಿಸಲು ಸಹಕಾರಿಯಾಗಲಿದ್ದು, ಅದು ತನ್ನದೇ ಆದ ರೀತಿಯಲ್ಲಿ ಭವಿಷ್ಯದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದರು.
8ನೇ ತರಗತಿಯಿಂದ ಶಾಲಾ ಪಠ್ಯ ಪುಸ್ತಕಗಳಲ್ಲಿ ದೈಹಿಕ ಅರಿವು, ಸ್ವಚ್ಛತೆಯ ಅಭ್ಯಾಸ, ಪೌಷ್ಠಿಕಾಂಶದ ಅರಿವಿನ ಪಾಠಗಳ ಜೊತೆಯಲ್ಲಿ ಭಾವನ್ಮಾತಕ ಸಮತೋಲನ, ಒತ್ತಡ ನಿರ್ವಹಣೆಗಳಂತಹ ಪಾಠಗಳನ್ನು ಸೇರ್ಪಡಿಸಿ ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಕುರಿತಂತೆ ಜಾಗೃತಿ ಮೂಡಿಸುವುದು ಮತ್ತು ಅವರಲ್ಲಿ ವೈದ್ಯಕೀಯ, ನರ್ಸಿಂಗ್, ಬಯೋ ಟೆಕ್ನಾಲಜಿಯಂತಹ ವೈದ್ಯಕೀಯ ಕ್ಷೇತ್ರದ ವಿವಿಧ ವೃತ್ತಿ ಜೀವನದ ಅವಕಾಶಗಳ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವೂ ಆಗಬೇಕಾಗಿದೆ ಎಂದ ಬಿಳಿಮಲೆ, ಪಠ್ಯ ಪುಸ್ತಕಗಳ ಪರಿಷ್ಕರಣೆಯ ಸಂದರ್ಭದಲ್ಲಿ ಶಿಕ್ಷಣ ಇಲಾಖೆಗೆ ಈ ಕುರಿತಂತೆ ಸಲಹೆ ನೀಡಲಾಗುತ್ತದೆ ಎಂದರು.
ವೈದ್ಯ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಸಂಸ್ಕೃತಿಯ ಪಠ್ಯ ವಸ್ತುವನ್ನು ರೂಪಿಸುವ ಮಹತ್ವದ ಆಶಯವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಅಗತ್ಯ ಸಹಕಾರವನ್ನು ನೀಡಲಿದೆ ಎಂದ ಬಿಳಿಮಲೆ, ಕನ್ನಡ ಸಾಹಿತ್ಯ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ವೈದ್ಯಕೀಯ ಶಿಕ್ಷಣದೊಂದಿಗೆ ಬೆಸೆಯುವ ಈ ಪ್ರಯತ್ನವು ಆರೋಗ್ಯಕರ ಸಮಾಜವನ್ನು ನಿರ್ಮಿಸುವಲ್ಲಿ ಹೊಸ ದಿಕ್ಕನ್ನು ತೆರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ.ಭಗವಾನ್, ಡಾ. ಸಚ್ಚಿದಾನಂದ್, ಡಾ. ಶಿವರಾಜ್ ಪಾಟೀಲ್ ಸೇರಿದಂತೆ 300ಕ್ಕೂ ಹೆಚ್ಚು ವೈದ್ಯ ಲೇಖಕರು ಭಾಗವಹಿಸಿದ್ದರು.
