ಬೆಂಗಳೂರು: ರೋಗಪತ್ತೆಯಲ್ಲಿ ರೇಡಿಯಾಲಜಿ ಮಹತ್ವದ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ಭಾಗದ ಬಡಜನರಿಗೂ ಈ ಸೇವೆ ಲಭಿಸುವಂತೆ ಸಂಚಾರಿ ರೇಡಿಯಾಲಜಿ ಘಟಕಗಳನ್ನು ಅಭಿವೃದ್ಧಿ ಪಡಿಸಿ, ಕಾರ್ಯಾಚರಣ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಇಂಡಿಯನ್ ರೇಡಿಯಾಲಜಿಕಲ್ ಅಂಡ್ ಇಮೇಜಿಂಗ್ ಅಸೋಸಿಯೇಷನ್ – ಐಆರ್.ಐಎ ರಾಜ್ಯ ಘಟಕ ಆಯೋಜಿಸಿದ್ದ “ವಿಕಿರಣೋತ್ಸವ-2026’’ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರು ಎಕ್ಸ್-ರೇ, ಅಲ್ಟ್ರಾಸೌಂಡ್ ಅಥವಾ ಸಿಟಿ ಸ್ಕ್ಯಾನ್ ಮಾಡಿಸಲು ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಬರುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಐಆರ್.ಐಎ ಸಂಚಾರಿ ಘಟಕ ನಿರ್ವಹಣೆಗೆ ಮುಂದಾಗಬೇಕು ಎಂದರು.
ಇಂದು ಎಲ್ಲ ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ ಕಾಲಿಟ್ಟಿದ್ದು, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬೆಳೆದಂತೆ, ರೇಡಿಯಾಲಜಿ ಕ್ಷೇತ್ರವೂ ಬದಲಾಗುತ್ತಿದೆ ಮತ್ತು ನಿಖರತೆ ಪಡೆಯುತ್ತಿದೆ. ಇಂದಿನ ಯುಗಮಾನದ ಬದಲಾವಣೆಗೆ ಹೊಂದಿಕೊಳ್ಳುವ ಮತ್ತು ಆ ಸವಾಲುಗಳನ್ನು ಎದುರಿಸಲು ರೇಡಿಯಾಲಜಿಸ್ಟ್ ಗಳು ಸಜ್ಜಾಗಬೇಕು ಎಂದರು.
ಭ್ರೂಣಲಿಂಗ ಪತ್ತೆ ನಿಗ್ರಹಕ್ಕೆ ರೇಡಿಯಾಲಜಿಸ್ಟ್ ಗಳು ಶ್ರಮಿಸಬೇಕು:
ಎಷ್ಟೇ ನಾಗರಿಕತೆ ಬೆಳೆದಿದ್ದರೂ, ಮೂಢ ನಂಬಿಕೆ ಮಾತ್ರ ಹೋಗಿಲ್ಲ. ಇಂದಿಗೂ ಹಣ್ಣು ಭ್ರೂಣಹತ್ಯೆ ನಿಂತಿಲ್ಲ. ಪ್ರಸವ ಪೂರ್ವದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಎರಡೂ ಅಪರಾಧ ಆದರೂ, ಕೆಲವೇ ಕೆಲವು ಧನದಾಹಿಗಳು ಇಂತಹ ಕೆಲಸ ಮಾಡಿ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತಾರೆ. ಐ.ಆರ್.ಐ.ಎ. ಇಂತಹ ರೇಡಿಯಾಲಜಿಸ್ಟ್ ಗಳನ್ನು ನಿಯಂತ್ರಿಸಬೇಕು ಎಂದರು.
ರೇಡಿಯಾಲಜಿಗೆ ಕನ್ನಡದಲ್ಲಿ ವಿಕಿರಣಶಾಸ್ತ್ರ ಎಂದು ಹೇಳಲಾಗುತ್ತದೆ. ಆದರೆ ವಿಕಿರಣದಲ್ಲಿನ ಕನ್ನಡದ ವಿ ಬದಲಿಗೆ ಇಂಗ್ಲಿಷ್ ಪದ ವಿ ಹಾಕುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿರುವ ಈ ‘ we ಕಿರಣೋತ್ಸವ’ ಸೃಜನಾತ್ಮಕವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ರಾಜೀವಗಾಂಧೀ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಭಗವಾನ್, ಡಾ. ಮುರಳಿ ಕೃಷ್ಣ, ಡಾ. ವೀರೇಶ್ ಹಂಚಲ್, ಡಾ. ಆರ್.ಕೆ. ಸರೋಜಾ, ಡಾ. ಸುಧೀರ್ ಕುಮಾರ್ ಕಾಳೆ ಮೊದಲಾದವರು ಉಪಸ್ಥಿತರಿದ್ದರು.
