ಬೆಂಗಳೂರು: ರಾಜ್ಯದಲ್ಲಿ ಬಿ-ಖಾತಾ ನಿವೇಶನಗಳನ್ನು ಎ-ಖಾತಾಗೆ ಪರಿವರ್ತಿಸುವ ಪ್ರಕ್ರಿಯೆಗೆ ಪೂರಕವಾಗಿ, ನಿವೇಶನಗಳ ಸರ್ವೇ ಕಾರ್ಯವನ್ನು ಹೆಚ್ಚು ನಿಖರವಾಗಿ ಹಾಗೂ ತಂತ್ರಜ್ಞಾನ ಆಧಾರಿತವಾಗಿ ಕೈಗೊಳ್ಳಲು 674 ಜಿಪಿಎಸ್ ರೋವರ್ಗಳನ್ನು ಖರೀದಿಸಿ ಆಧುನಿಕ ಸರ್ವೇ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿಯ 69ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ನಗರವೂ ಸುಸಜ್ಜಿತ ಮೂಲಸೌಕರ್ಯ, ವೈಜ್ಞಾನಿಕ ಯೋಜನೆ ಮತ್ತು ಸುಸ್ಥಿರ ಅಭಿವೃದ್ಧಿಯೊಂದಿಗೆ ಬೆಳೆಯಬೇಕು. ಆಧುನಿಕ ತಂತ್ರಜ್ಞಾನ, ನುರಿತ ಮಾನವ ಸಂಪನ್ಮೂಲ ಹಾಗೂ ಪರಿಣಾಮಕಾರಿ ಯೋಜನಾ ವ್ಯವಸ್ಥೆಯ ಮೂಲಕ ನಗರಗಳ ಸಮಗ್ರ ಅಭಿವೃದ್ಧಿಗೆ ಮಂಡಳಿಯು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.
ಪ್ರಸ್ತುತ ಎಂ.ಎಸ್. ಬಿಲ್ಡಿಂಗ್ನಲ್ಲಿ ಮಂಡಳಿಯ ಕಚೇರಿಗೆ ಸ್ಥಳಾವಕಾಶದ ಕೊರತೆಯಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಇಲಾಖೆಗೆ ಹಂಚಿಕೆಯಾಗಿರುವ ನಾಗರಿಕ ಸೌಲಭ್ಯ ನಿವೇಶನದಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಿ ಮಂಡಳಿಯ ಕಚೇರಿಯನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ರಾಜ್ಯದ ವಿವಿಧ ಹಂತದ ಕಚೇರಿಗಳಲ್ಲಿ ಯೋಜನಾ ಕಾರ್ಯಗಳನ್ನು ತಂತ್ರಜ್ಞಾನ ಆಧಾರಿತವಾಗಿ ನಿರ್ವಹಿಸಲು ಅಗತ್ಯವಿರುವ ಜಿಐಎಸ್ (GIS) ಮತ್ತು ಆಟೋಕ್ಯಾಡ್ (AutoCAD) ಸಾಫ್ಟ್ವೇರ್ ಪರವಾನಗಿಗಳನ್ನು ಖರೀದಿಸುವಂತೆಯೂ ತಿಳಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿಗೆ ಅಧಿಕೃತ ಲಾಂಛನವನ್ನು ಅಳವಡಿಸುವ ಬಗ್ಗೆಯೂ ಸಚಿವರು ಚರ್ಚಿಸಿದರು.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿಯ ಸಾಮರ್ಥ್ಯವರ್ಧನೆಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತರಬೇತಿ, ಕಾರ್ಯಾಗಾರ ಹಾಗೂ ಸಮ್ಮೇಳನಗಳಿಗೆ ಅಧಿಕಾರಿಗಳನ್ನು ನಿಯೋಜಿಸುವುದರ ಜೊತೆಗೆ, ಮೈಸೂರಿನ ಸ್ಟೇಟ್ ಇನ್ಸ್ಟಿಟ್ಯೂಟ್ ಫಾರ್ ಅರ್ಬನ್ ಡೆವಲಪ್ಮೆಂಟ್ ವತಿಯಿಂದ ಒಟ್ಟು 2,000 ಅಧಿಕಾರಿಗಳಿಗೆ (ಪ್ರತಿ ತಂಡದಲ್ಲಿ 40 ಅಧಿಕಾರಿಗಳಂತೆ 50 ತಂಡಗಳಲ್ಲಿ) ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಇದರ ವೆಚ್ಚವನ್ನು ಮಂಡಳಿಯಿಂದಲೇ ಭರಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (BMRDA) ವ್ಯಾಪ್ತಿಯಲ್ಲಿರುವ ದೊಡ್ಡಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶವನ್ನು (LPA) ಪರಿಷ್ಕರಿಸಿ, ಗುಡ್ಡದಹಳ್ಳಿ ಗ್ರಾಮವನ್ನು ದೊಡ್ಡಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಬಿ. ಕಾವೇರಿ, ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮಹೇಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
