ಮೈಸೂರು:ನನಗೆ ವ್ಯಕ್ತಿಪೂಜೆಗಿಂತ ಸಮುದಾಯದ ಹಿತಚಿಂತನೆಯೇ ಮುಖ್ಯ; ನಾನು ಬದುಕಿರುವವರೆಗೂ ಸಮಾಜವನ್ನು ಒಡೆಯುವ ಕೆಲಸ ಮಾಡುವುದಿಲ್ಲ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
ವಿಜಯನಗರ 2ನೇ ಹಂತದಲ್ಲಿರುವ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ(ಕರ್ನಾಟಕ ಬುದ್ಧ ಧಮ್ಮ ಸಮಿತಿ ಮೈಸೂರು) ಸೋಮವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮೈಸೂರಿನಲ್ಲಿ ನ.26 ರಂದು ನಡೆಯುವ ರಾಜ್ಯಮಟ್ಟದ ಸಂವಿಧಾನ ದಿನಾಚರಣೆಗೆ ಯಾವುದೇ ರಾಜಕೀಯ ಲೇಪನ ಮಾಡಬಾರದು. ಕಾರ್ಯಕ್ರಮದ ಕುರಿತು ಎದ್ದಿರುವ ಅಪಸ್ವರಗಳಿಗೆ ಯಾರೂ ಕಿವಿಗೊಡಬಾರದು. ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ವೈಯಕ್ತಿಕ ಪ್ರತಿಷ್ಠೆ, ರಾಜಕೀಯ ಹಿತಾಸಕ್ತಿಗಾಗಿ ಕಾರ್ಯಕ್ರಮವನ್ನು ದುರುಪಯೋಗ ಮಾಡಿಕೊಳ್ಳಬಾರದು. ಸಂವಿಧಾನವು ಸರ್ವರ ಸ್ವತ್ತು; ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಹೇಳಿದರು.
ಸಂವಿಧಾನ ದಿನಾಚರಣೆಯಂದು ಗನ್ ಹೌಸ್ ನಿಂದ ಕಾರ್ಯಕ್ರಮದ ಸ್ಥಳದವರೆಗೆ ನಡೆಯುವ ಮೆರವಣಿಗೆಯಲ್ಲಿ ಎಲ್ಲರೂ ನೀಲಿ ಶಾಲು ಧರಿಸಿ ಪಾಲ್ಗೊಳ್ಳಬೇಕು. ನಮಗೆ ಸಂವಿಧಾನವೇ ಶ್ರೇಷ್ಠ. ಇಂತಹ ಕಾರ್ಯಕ್ರಮವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಜನಾಂಗಕ್ಕೆ ತಿಳಿವಳಿಕೆ ಮೂಡಿಸಿ
ನಾನು ಸ್ವಾಭಿಮಾನದಿಂದ ನನ್ನತನ ರೂಡಿಸಿಕೊಂಡು, ಅಂಬೇಡ್ಕರ್ ಅವರನ್ನು ಒಪ್ಪಿ ಅಪ್ಪಿಕೊಂಡೆ. ರಾಜಕಾರಣ ಗುಲಾಮಗಿರಿಯಂತಹ ಪರಿಸ್ಥಿತಿಯನ್ನು ಎದುರು ಹಾಕಿಕೊಂಡು ಬೆಳೆದವನು ನಾನು. ಜನಾಂಗಕ್ಕೆ ತಿಳಿವಳಿಕೆ ಮೂಡಿಸುವ ಜೊತೆಗೆ ಪಕ್ಷ ಸಂಘಟನೆ ಮಾಡಿದೆ ಎಂದ ಸಚಿವರು, ಬಾಬಾ ಸಾಹೇಬರ ವಿಚಾರಗಳು, ಸಂಘಟನೆ, ಸ್ವಸಾಮರ್ಥ್ಯದಿಂದ ಬೆಳೆಯಲು ಅವಕಾಶ ಸಿಗುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದರು.
ನಾನು ವಿವಿಧ ಜಾತಿಗಳನ್ನು ಒಗ್ಗೂಡಿಸಿಕೊಂಡು ನಾಯಕನಾಗಿ ಬೆಳೆದೆ. ಬಾಬಾ ಸಾಹೇಬರ ಕಾರಣದಿಂದಲೇ ಎರಡು ಬಾರಿ ಮಂತ್ರಿಯಾದೆ. ನನ್ನ ಅಧಿಕಾರವನ್ನು ಸಮುದಾಯದ ಕಲ್ಯಾಣಕ್ಕಾಗಿ ಬಳಸುವೆ. ಯಾವುದೇ ಬಣಗಳಿಲ್ಲದಂತೆ ಎಲ್ಲರನ್ನೂ ಒಗ್ಗೂಡಿಸುವುದೇ ನನ್ನ ಗುರಿ ಎಂದು ಸಚಿವರು ಹೇಳಿದರು.
ಗಣಿ ಗುತ್ತಿಗೆಯಲ್ಲಿ ಮೀಸಲಾತಿ
ನಾನು ಸದನ ಸಮಿತಿಯ ಅಧ್ಯಕ್ಷನಾಗಿ ನೀಡಿದ ವರದಿಯ ಶಿಫಾರಸಿನ ಮೇರೆಗೆ ಬಜೆಟ್ನಲ್ಲಿ ಎಸ್ಸಿಪಿ/ಟಿಎಸ್ಪಿ (SCP/TSP) ಯೋಜನೆ ಪ್ರಕಟವಾಯಿತು. ಕಲ್ಲು ಮತ್ತು ಮರಳು ಗಣಿಗಾರಿಕೆಯಲ್ಲಿ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿದೆ. ಸಂವಿಧಾನ ವಿರೋಧಿಗಳ ನಡುವೆಯೂ ನಾನು ಯಾರ ಕೃಪಾಕಟಾಕ್ಷವಿಲ್ಲದೇ ಸಚಿವನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
ಇದೇ ವೇಳೆ, ಬುದ್ಧ ವಿಹಾರದಲ್ಲಿ ಮುಂದುವರಿದ ಕಾಮಗಾರಿಗಳಿಗೆ ಸರ್ಕಾರದ ನೆರವು ಕೊಡಿಸಬೇಕೆಂಬ ಮನವಿಗೆ ಸಚಿವರು ಸ್ಪಂದಿಸಿದರು.
ಸಭೆಯಲ್ಲಿ ಸಿದ್ಧಾರ್ಥ ಬುದ್ಧ ವಿಹಾರದ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ, ಸಮುದಾಯದ ಮುಖಂಡರಾದ ನಂಜುಂಡಯ್ಯ, ಪ್ರಭು, ಡಾ.ದಿಲೀಪ್ ನರಸಯ್ಯ, ಮಲ್ಲಿಕಾರ್ಜುನ್, ಎಸ್ಸಿ-ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ದೀಪಕ್, ರಮೇಶ್ ಇತರರು ಭಾಗವಹಿಸಿದ್ದರು.
