ಸಮಗ್ರ ಸುದ್ದಿ

ಯುವ ಪೀಳಿಗೆಗೆ ಶಾಲಾ ಹಂತದಲ್ಲೇ ಸಂವಿಧಾನದ ಅರಿವು ಮೂಡಿಸಲು ಯುವ ಸಂಸತ್ತು ಕಾರ್ಯಕ್ರಮ ಆಯೋಜನೆ: ಕೆ.ಹೆಚ್. ಮುನಿಯಪ್ಪ

Share

ಮೈಸೂರು:ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ಶಾಲೆಗಳ ಸಹಯೋಗದಲ್ಲಿ ಆಯೋಜಿಸಿರುವ ಯುವ ಸಂಸತ್ತು ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲೇ ಸಂವಿಧಾನ, ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.

ಇಂದು ಮುಕ್ತ ಗಂಗೋತ್ರಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು.

ಯುವಕರಿಗೆ ಸಂವಿಧಾನದ ಹಕ್ಕುಗಳು, ಸಮಾನತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಶಾಲಾ ಹಂತದಿಂದಲೇ ಪರಿಚಯಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ವಸತಿ ಶಾಲೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

12ನೇ ಶತಮಾನದಲ್ಲೇ ಬಸವಣ್ಣನವರು ಹಿಂದುಳಿದ ವರ್ಗದವರನ್ನು ಅಧ್ಯಕ್ಷರನ್ನಾಗಿ ಮಾಡಿ ‘ಅನುಭವ ಮಂಟಪ’ದ ಮೂಲಕ ಸಮಾನತೆಯ ಆಶಯವನ್ನು ಜಗತ್ತಿಗೆ ತೋರಿಸಿಕೊಟ್ಟರು. ಸಮಾಜದಲ್ಲಿ ಸಮಾನತೆ ಮೂಡಿದಾಗ ಪ್ರೀತಿ, ವಾತ್ಸಲ್ಯ ಹಾಗೂ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಹಾತ್ಮ ಗಾಂಧೀಜಿ, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಮತ್ತು ಮೌಲಾನಾ ಆಜಾದ್ ಸೇರಿದಂತೆ ಹಲವು ಮಹಾನ್ ನಾಯಕರ ಸ್ಫೂರ್ತಿ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ, ಜೈಲುವಾಸ ಮತ್ತು ಬಲಿದಾನಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನವನ್ನು ನೀಡಿದರು. ಮಹಾರಾಜರಿಗಿರಲಿ ಅಥವಾ ಕೂಲಿ ಮಾಡುವ ಕಟ್ಟಕಡೆಯ ವ್ಯಕ್ತಿಗಿರಲಿ—ಪ್ರತಿಯೊಬ್ಬರಿಗೂ ಒಂದೇ ಮತದ ಹಕ್ಕು ನೀಡಿರುವುದು ಸಂವಿಧಾನದ ಶಕ್ತಿ ಮತ್ತು ಹಕ್ಕಾಗಿದೆ ಎಂದರು.

ಇಂದಿನ ಯುವಕರೇ ಮುಂದಿನ ಪ್ರಜೆಗಳು ದೇಶವನ್ನು ಅಭಿವೃದ್ಧಿಪಡಿಸಿ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಜವಾಬ್ದಾರಿ ಯುವಕರ ಕೈಯಲ್ಲಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು ಹಾಗೂ ವಿಶೇಷವಾಗಿ ಅಧ್ಯಾಪಕ ವೃಂದದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು
ಮಾತನಾಡಿ ಮೈಸೂರಿನಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ರಾಜ್ಯಮಟ್ಟದ ಯುವ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ದೊಡ್ಡ ಮಟ್ಟದಲ್ಲಿ ಹಾಗೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

​ಇದರ ಪೂರ್ವಭಾವಿಯಾಗಿ ಇಡೀ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಯುವ ಸಂಸತ್ ನಡೆದಿದ್ದು, ಅಲ್ಲಿ ಆಯ್ಕೆಯಾದ ಉತ್ತಮ ಅಭ್ಯರ್ಥಿಗಳು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.​ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದಲೂ ಶಾಲಾ ಮತ್ತು ಪದವಿ ವಿದ್ಯಾರ್ಥಿಗಳು ಹಾಗೂ ಯುವಕರು ಭಾಗವಹಿಸಿದ್ದಾರೆ ಎಂದರು.

ಯುವಕರು ಮತ್ತು ಮಕ್ಕಳು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಆಡಳಿತ ವ್ಯವಸ್ಥೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು, ಬದಲಾವಣೆಯ ಹರಿಕಾರರಾಗಿ ಮುನ್ನಡೆಯಬೇಕು ಎಂದು ಹೇಳಿದರು.

ವ್ಯವಸ್ಥೆ ಚೆನ್ನಾಗಿರಬೇಕಾದರೆ ಅದನ್ನು ನಡೆಸುವ ಜನರು ಸಮಾಜದಿಂದಲೇ ಸರಿಯಾಗಿ ರೂಪುಗೊಳ್ಳಬೇಕು ಆದ್ದರಿಂದ ಸಮಾಜದಲ್ಲಿ ಜಾಗೃತಿ ಮತ್ತು ಸಂವಿಧಾನದ ಮೌಲ್ಯಗಳ ಅರಿವು ಅಗತ್ಯ.​ಸುಶಿಕ್ಷಿತರು ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಸಂಕಲ್ಪ ಹೊಂದಿರುವ ಯುವಕರು ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗೆ ಬಂದಾಗ ಮಾತ್ರ ನಿಜವಾದ ಸುಧಾರಣೆ ಹಾಗೂ ಬದಲಾವಣೆ ಸಾಧ್ಯ ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಅವರು ಮಾತನಾಡಿ ಸಮಾಜದಲ್ಲಿ ಬೇರೂರಿರುವ ಅಸ್ಪೃಶ್ಯತೆ ಮತ್ತು ತಾರತಮ್ಯವನ್ನು ಕೇವಲ ಕಾನೂನುಗಳಿಂದ ಮಾತ್ರ ಹೋಗಲಾಡಿಸಲು ಸಾಧ್ಯವಿಲ್ಲ ಇದಕ್ಕೆ ಪ್ರತಿಯೊಬ್ಬರ ಮನಃಪರಿವರ್ತನೆ ಅತ್ಯಗತ್ಯ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶವು ಅಜ್ಞಾನ, ಅನಕ್ಷರತೆ ಹಾಗೂ ಮಲೇರಿಯಾ, ಕ್ಷಯ, ಸಿಡುಬು, ಕುಷ್ಠರೋಗದಂತಹ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿತ್ತು. ಮಹಾತ್ಮ ಗಾಂಧೀಜಿ ಅವರ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರೆತ ಬಳಿಕ, ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುನ್ನಡೆಸಲು ಹಾಗೂ ಅಸ್ಪೃಶ್ಯತೆ ತೊಡೆದುಹಾಕಲು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ,ಕೃಷಿ ಸಚಿವರಾದ ನರೇಂದ್ರ ಸ್ವಾಮಿ, ಮಾಜಿ ಸಂಸದ ಚಂದ್ರಪ್ಪ, ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ ಎಂ, ಮುಂಡರಗಿ ನಾಗರಾಜು, ಅಶೋಕ ಸಾಲಪ್ಪ, ಸರ್ಕಾರದ ಕಾರ್ಯದರ್ಶಿ ಮೋಹನ್ ರಾಜ್ ,ಆಯುಕ್ತರಾದ ನಾಗರಾಜು, ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page