ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್ಗಳಿಗೆ (OFC) ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಹಾಗೂ ಇಡೀ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ ಏಕರೂಪತೆ ತರಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಬಿಎ ಕೇಂದ್ರ ಕಚೇರಿಯ ಸಭಾಂಗಣ-1ರಲ್ಲಿ ಇಂದು ಓಎಫ್ಸಿ ಕೇಬಲ್ಗಳ ನಿರ್ವಹಣೆ ಮತ್ತು ನಿಯಂತ್ರಣ ಕುರಿತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದರು.
ಅಕ್ರಮ ಕೇಬಲ್ ಗಳ ತೆರವು ಮತ್ತು ಸಕ್ರಮಕ್ಕೆ ಕಾಲಾವಕಾಶ:
ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ಅನಧಿಕೃತ ಓವರ್ಹೆಡ್ ಕೇಬಲ್ಗಳು ಹಾಗೂ ಸುಮಾರು 12,000 ಕಿ.ಮೀ. ನಷ್ಟು ಅಕ್ರಮ ಭೂಗತ ಕೇಬಲ್ಗಳಿರುವುದು ವರದಿಯಾಗಿದೆ. ಅಲ್ಲದೆ, 3,460 ಕಿ.ಮೀ. ಓವರ್ಹೆಡ್ ಕೇಬಲ್ಗಳಿದ್ದು, ಮರಗಳ ಮೇಲೆ 30ಕ್ಕೂ ಹೆಚ್ಚು ನಿರುಪಯುಕ್ತ ಕೇಬಲ್ಗಳು ನೇತಾಡುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸಲು ಗುತ್ತಿಗೆದಾರರೊಂದಿಗೆ ಚರ್ಚಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅನಧಿಕೃತ ಕೇಬಲ್ಗಳನ್ನು ಘೋಷಿಸಿಕೊಳ್ಳಲು (Declare) ಮತ್ತು ಒಂದು ಬಾರಿ ಶುಲ್ಕ (One-time charge) ಪಾವತಿಸಿ ಸಕ್ರಮಗೊಳಿಸಿಕೊಳ್ಳಲು (Regularize) ನಿಗದಿತ ಕಾಲಾವಕಾಶ ನೀಡಲಾಗುವುದು. ನಿಗದಿತ ಗಡುವಿನ ನಂತರವೂ ಸಕ್ರಮಗೊಳಿಸದ ಮತ್ತು ಅಪಾಯಕಾರಿಯಾಗಿ ನೇತಾಡುವ ಅನಧಿಕೃತ ಕೇಬಲ್ಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ತೆರವುಗೊಳಿಸಬೇಕು ಎಂದು ಸಚಿವರು ಸ್ಪಷ್ಟಪಡಿಸಿದರು.
ಕೇಬಲ್ ಅಳವಡಿಕೆಯನ್ನು ಕ್ರಮಬದ್ಧಗೊಳಿಸಲು ಕಾಲಾವಕಾಶ ನೀಡಿ:
ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆ ಒದಗಿಸುವ ಸಂಸ್ಥೆಗಳು ಈಗಾಗಲೇ ಅನಧಿಕೃತವಾಗಿ ಅಳವಡಿಸಿರುವ ಕೇಬಲ್ಗಳನ್ನು ನಿಯಮಾನುಸಾರ ಕ್ರಮಬದ್ಧಗೊಳಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಬೇಕು. ನಿಗದಿತ ಅವಧಿಯೊಳಗೆ ಕೇಬಲ್ಗಳನ್ನು ಕ್ರಮಬದ್ಧಗೊಳಿಸದಿದ್ದಲ್ಲಿ ಸಂಬಂಧಪಟ್ಟ ನಗರ ಪಾಲಿಕೆಗಳ ವತಿಯಿಂದಲೇ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಆನ್ಲೈನ್ ಪಾವತಿ ವ್ಯವಸ್ಥೆ ಜಾರಿಗೊಳಿಸಿ:
ಓಎಫ್ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ನಗರ ಪಾಲಿಕೆಗಳ ಸಾಫ್ಟ್ವೇರ್ ಮೂಲಕ ಅರ್ಜಿ ಸಲ್ಲಿಸುವ ಸಂಸ್ಥೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ನಿಗದಿತ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಹೊಸ ರಸ್ತೆ ಅಗೆಯುವಂತಿಲ್ಲ:
ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಯಾವುದೇ ಕಾರಣಕ್ಕೂ ಅಗೆಯಲು ಅನುಮತಿ ನೀಡಬಾರದು. ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ರಸ್ತೆಗಳಲ್ಲಿರುವ ಡಕ್ಟ್ಗಳನ್ನು (Ducts) ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜಂಕ್ಷನ್ ಬಾಕ್ಸ್ಗಳನ್ನು ಆಸ್ತಿಯ ಅಂಚಿನಲ್ಲಿ (Property edge) ಹಾಗೂ 7 ಅಡಿ ಎತ್ತರದಲ್ಲಿ ಅಳವಡಿಸಬೇಕು. ಅಗತ್ಯವಿದ್ದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಿ ಪ್ರತ್ಯೇಕ ಬೈಲಾ (By-law) ರೂಪಿಸಿಕೊಳ್ಳಲು ಅವರು ಸೂಚಿಸಿದರು.
ರಸ್ತೆ ಸುರಕ್ಷಾ ಮತ್ತು 75 ಜಂಕ್ಷನ್ ಗಳ ಅಭಿವೃದ್ಧಿ:
ಸಭೆಯಲ್ಲಿ ನಗರದ ರಸ್ತೆ ಸುರಕ್ಷತೆ ಕುರಿತು ಚರ್ಚಿಸಿದ ಸಚಿವರು, ನಗರದ 75 ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳುವಂತೆ ಸೂಚಿಸಿದರು. ಯಾವುದೇ ಕಾಮಗಾರಿ ಆರಂಭಿಸುವ ಮುನ್ನ ‘ಗುಡ್ ಫಾರ್ ಕನ್ಸ್ಟ್ರಕ್ಷನ್’ (GFC) ಡ್ರಾಯಿಂಗ್ಗಳನ್ನು ಅಂತಿಮಗೊಳಿಸಬೇಕು. ರಸ್ತೆಗಳಲ್ಲಿ ಲೇನ್ ಮಾರ್ಕಿಂಗ್, ದಿಕ್ಕು ಸೂಚಕಗಳು, ಜೀಬ್ರಾ ಕ್ರಾಸಿಂಗ್, ರೀ-ಆಸ್ಫಾಲ್ಟಿಂಗ್, ಫ್ರೀ-ಲೆಫ್ಟ್, ರಿಫ್ಲೆಕ್ಟರ್ ಮತ್ತು ರಸ್ತೆ ಸ್ಟಡ್ ಗಳನ್ನು ಸಮರ್ಪಕವಾಗಿ ಅಳವಡಿಸಬೇಕು. ಸಂಚಾರ ದಟ್ಟಣೆ ಮತ್ತು ಸುರಕ್ಷತಾ ಸಮಸ್ಯೆಗಳನ್ನು ಬಗೆಹರಿಸಲು ಸಂಚಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಶಿಲ್ಪಾ ನಾಗ್, ರಮೇಶ್ ಕೆ.ಎನ್., ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್, ಅಪರ ಆಯುಕ್ತರಾದ ವೆಂಕಟಾಚಲಪತಿ, ನವೀನ್ ಕುಮಾರ್ ರಾಜು, ಓಎಫ್ಸಿ ಅಧೀಕ್ಷಕ ಅಭಿಯಂತರ ಧರ್ಮಪ್ರಸಾದ್ ಹಾಗೂ ಮುಖ್ಯ ಅಭಿಯಂತರರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
