ಸಮಗ್ರ ಸುದ್ದಿ

ಬೆಂಗಳೂರಿನ ಸಾವಯವ ತ್ಯಾಜ್ಯದಿಂದ ಹಸಿರು ಇಂಧನ ಉತ್ಪಾದನೆಗೆ ಸಂಶೋಧನೆ; ಬ್ರಿಟನ್‌ನ ಯಾರ್ಕ್ ವಿಶ್ವವಿದ್ಯಾಲಯದೊಂದಿಗೆ ಬಿಬಿಸಿ ಸಹಭಾಗಿತ್ವ

Share

ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಸಾವಯವ ತ್ಯಾಜ್ಯವನ್ನು ಇಂಧನ ಹಾಗೂ ಗೊಬ್ಬರವಾಗಿ ಪರಿವರ್ತಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಬೆಂಗಳೂರು ಬಯೋಇನ್ನೋವೇಶನ್ ಸೆಂಟರ್ (ಬಿಬಿಸಿ) ಹಾಗೂ ಬ್ರಿಟನ್‌ನ ಯಾರ್ಕ್ ವಿಶ್ವವಿದ್ಯಾಲಯ ಕೈಜೋಡಿಸಿವೆ.

ಬೆಂಗಳೂರು ಟೆಕ್ ಸಮಿಟ್–2026ರಲ್ಲಿ ಮಾಡಿಕೊಳ್ಳಲಾದ ಒಡಂಬಡಿಕೆಯ ಭಾಗವಾಗಿ ಈ ಸಂಶೋಧನಾ ಯೋಜನೆ ರೂಪುಗೊಂಡಿದೆ. ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ, ತ್ಯಾಜ್ಯದಿಂದ ಆರ್ಥಿಕ ಮೌಲ್ಯವುಳ್ಳ ಉತ್ಪನ್ನಗಳನ್ನು ತಯಾರಿಸುವುದು ಈ ಸಹಭಾಗಿತ್ವದ ಪ್ರಮುಖ ಉದ್ದೇಶವಾಗಿದೆ.

ಮನೆಗಳು, ಹೋಟೆಲ್‌ಗಳು, ತರಕಾರಿ ಮಾರುಕಟ್ಟೆಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳಿಂದ ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ಸಾವಯವ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ತ್ಯಾಜ್ಯವನ್ನು ಆಮ್ಲಜನಕವಿಲ್ಲದ ವಾತಾವರಣದಲ್ಲಿ ಸೂಕ್ಷ್ಮಜೀವಿಗಳ ನೆರವಿನಿಂದ ಕೊಳೆಯುವಂತೆ ಮಾಡಿ ಜೈವಿಕ ಅನಿಲ ಹಾಗೂ ಪೋಷಕಾಂಶಯುಕ್ತ ಗೊಬ್ಬರ ಉತ್ಪಾದಿಸಬಹುದು. ಈ ವಿಧಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಬಳಸುವ ಕುರಿತು ಸಂಶೋಧನೆ ನಡೆಸಲಾಗುವುದು.

ಹೊಸಕೋಟೆಯಲ್ಲಿ ಪ್ರಾಯೋಗಿಕ ಅಧ್ಯಯನ:

ಯಾರ್ಕ್ ವಿಶ್ವವಿದ್ಯಾಲಯದ ಪ್ರೊ. ಜೇಮ್ಸ್ ಚಾಂಗ್ ಅವರ ನೇತೃತ್ವದಲ್ಲಿ ಹೊಸಕೋಟೆಯ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಾಯೋಗಿಕ ಅಧ್ಯಯನ ನಡೆಸಲು ಯೋಜಿಸಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ತ್ಯಾಜ್ಯ ಹಾಗೂ ಭಾರತದ ಹವಾಮಾನಕ್ಕೆ ಅನುಗುಣವಾಗಿ ಈ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ಅಧ್ಯಯನ ಮಾಡಲಾಗುವುದು.

ಸಂಶೋಧನೆಯ ಫಲಿತಾಂಶಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಲು ಹಾಗೂ ವಾಣಿಜ್ಯ ಬಳಕೆಗೆ ತರಲು ಬೆಂಗಳೂರಿನ ಹೆಲಿಕ್ಸ್ ಬಯೋಟೆಕ್ ಪಾರ್ಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಈ ಯೋಜನೆಗೆ ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ ತನ್ನ ಪ್ರಯೋಗಾಲಯ, ಸಂಶೋಧನಾ ಸೌಲಭ್ಯ ಹಾಗೂ ನವೋದ್ಯಮಗಳ ಸಹಕಾರವನ್ನು ಒದಗಿಸಲಿದೆ. ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಯುವ ಸಂಶೋಧಕರು ಮತ್ತು ನವೋದ್ಯಮಿಗಳಿಗೆ ಇದರಿಂದ ಅವಕಾಶ ದೊರೆಯಲಿದೆ.

ಬೆಂಗಳೂರು ಬಯೋಇನ್ನೋವೇಶನ್ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹಮ್ಮದ್ ಆದಿಲ್ ಮಾತನಾಡಿ, ಸುಸ್ಥಿರ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಭಾರತ–ಬ್ರಿಟನ್ ನಡುವಿನ ಜೈವಿಕ ತಂತ್ರಜ್ಞಾನ ಸಂಶೋಧನಾ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಒಡಂಬಡಿಕೆ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರದ ಜಾಗತಿಕ ನಾವೀನ್ಯತಾ ಮೈತ್ರಿಯಡಿ ರೂಪುಗೊಂಡಿರುವ ಈ ಸಹಭಾಗಿತ್ವವು ಜಂಟಿ ಸಂಶೋಧನೆ, ಸಂಶೋಧಕರ ವಿನಿಮಯ, ಪಿಎಚ್‌ಡಿ ಕಾರ್ಯಕ್ರಮಗಳು ಹಾಗೂ ನವೋದ್ಯಮಗಳ ಬೆಳವಣಿಗೆಗೂ ಅವಕಾಶ ಕಲ್ಪಿಸಲಿದೆ.

ಈ ಸಂಶೋಧನೆಯ ಮೂಲಕ ಬೆಂಗಳೂರಿನ ತ್ಯಾಜ್ಯ ನಿರ್ವಹಣೆಯ ಹೊರೆ ತಗ್ಗಿಸುವುದರ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣ, ಹಸಿರು ಇಂಧನ ಉತ್ಪಾದನೆ ಹಾಗೂ ಹೊಸ ಉದ್ಯಮಗಳ ಸೃಷ್ಟಿಗೆ ದಾರಿ ಮಾಡಿಕೊಡಲಿದೆ.


Share

You cannot copy content of this page