ಬೆಂಗಳೂರು: ತಂತ್ರಜ್ಞಾನ, ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಡೆನ್ಮಾರ್ಕ್ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲು, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಅವರು ಇಂದು ಡೆನ್ಮಾರ್ಕ್ನ ವಿದೇಶಾಂಗ ವ್ಯವಹಾರಗಳ ಸಚಿವರಾದ ಗೌರವಾನ್ವಿತ ಶ್ರೀ ಲಾರ್ಸ್ ಲೊಕ್ಕೆ ರಾಸ್ಮುಸ್ಸೆನ್ ಅವರನ್ನು ಭೇಟಿ ಮಾಡಿದರು.
ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಮೂಲಕ ಸಹಕಾರ ವಿಸ್ತರಣೆ, ಕರ್ನಾಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪನ್ನ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಡೆನ್ಮಾರ್ಕ್ನ ಹೂಡಿಕೆಗಳಿಗೆ ಉತ್ತೇಜನ, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಭಾಗಿತ್ವ ಬಲಪಡಿಸುವುದು ಹಾಗೂ ಉಭಯ ದೇಶಗಳ ಸ್ಟಾರ್ಟ್ಅಪ್ಗಳಿಗೆ ಮಾರುಕಟ್ಟೆ ಪ್ರವೇಶದ ಅವಕಾಶಗಳನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕೃತಕ ಬುದ್ಧಿಮತ್ತೆ , ಕ್ವಾಂಟಮ್ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ ಹಾಗೂ ಸುಸ್ಥಿರ ಜಲ ನಿರ್ವಹಣೆಯಲ್ಲಿ ಸಹಕಾರದ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಲಾಯಿತು.
ಕರ್ನಾಟಕದ ಉದ್ಯಮಸ್ನೇಹಿ ವಾತಾವರಣವನ್ನು ಉಲ್ಲೇಖಿಸಿದ ಸಚಿವರು, ಮಂಗಳೂರಿನಲ್ಲಿ ಡೆನ್ಮಾರ್ಕ್ ಮೂಲದ EG A/S ಕಂಪನಿಯ ಬೆಳವಣಿಗೆಯನ್ನು ಪ್ರಸ್ತಾಪಿಸಿದರು. ಸಣ್ಣ ತಂಡದೊಂದಿಗೆ ಕಾರ್ಯಾರಂಭಿಸಿದ ಈ ಕಂಪನಿಯು ಇಂದು ಸುಮಾರು 850 ಉದ್ಯೋಗಿಗಳೊಂದಿಗೆ ಯುರೋಪ್ ಹೊರಗಿನ ತನ್ನ ಅತಿದೊಡ್ಡ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಒಂದನ್ನು ಕರ್ನಾಟಕದಲ್ಲಿ ಸ್ಥಾಪಿಸಿದೆ. ರಾಜ್ಯದ ಪ್ರತಿಭಾವಂತ ಮಾನವ ಸಂಪನ್ಮೂಲ ಮತ್ತು ಬೆಳೆಯುತ್ತಿರುವ ತಂತ್ರಜ್ಞಾನ ಪರಿಸರ ವ್ಯವಸ್ಥೆಯು ಜಾಗತಿಕ ತಂತ್ರಜ್ಞಾನ ಕಂಪನಿಗಳಿಗೆ ಒದಗಿಸುತ್ತಿರುವ ಅವಕಾಶಗಳಿಗೆ ಇದು ಉತ್ತಮ ಉದಾಹರಣೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ, “ತಂತ್ರಜ್ಞಾನ, ಪ್ರತಿಭೆ ಮತ್ತು ನಾವೀನ್ಯತೆಯಲ್ಲಿನ ನಮ್ಮ ಸಾಮರ್ಥ್ಯಗಳನ್ನು ಬಳಸಿಕೊಂಡು ಡೆನ್ಮಾರ್ಕ್ ಜೊತೆಗಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ಉತ್ಸುಕವಾಗಿದೆ. ಕರ್ನಾಟಕದಲ್ಲಿ EG A/S ನಂತಹ ಡೆನ್ಮಾರ್ಕ್ ಮೂಲದ ಕಂಪನಿಗಳ ಬೆಳವಣಿಗೆಯು ಜಾಗತಿಕ ಉದ್ಯಮಗಳಿಗೆ ನಮ್ಮ ಪರಿಸರ ವ್ಯವಸ್ಥೆ ಒದಗಿಸುವ ಅವಕಾಶಗಳಿಗೆ ಸಾಕ್ಷಿಯಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪನ್ನ ಎಂಜಿನಿಯರಿಂಗ್, ಸ್ಟಾರ್ಟ್ಅಪ್ ಸಹಭಾಗಿತ್ವ ಹಾಗೂ ಉನ್ನತ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರಕ್ಕೆ ವಿಫುಲ ಅವಕಾಶಗಳಿವೆ. ಉಭಯ ದೇಶಗಳ ಪರಿಸರ ವ್ಯವಸ್ಥೆಗಳಿಗೆ ದೀರ್ಘಕಾಲೀನ ಮೌಲ್ಯ ಸೃಷ್ಟಿಸುವ ಪಾಲುದಾರಿಕೆಗಳನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ,” ಎಂದು ಹೇಳಿದರು.
ಸಭೆಯ ಸಂದರ್ಭದಲ್ಲಿ ಇನ್ನೋವೇಶನ್ ಸೆಂಟರ್ ಡೆನ್ಮಾರ್ಕ್ (ICDK), ಬೆಂಗಳೂರಿನ ವತಿಯಿಂದ ಸಿದ್ಧಪಡಿಸಲಾದ ‘Access to Tech Talent in India: An ICDK Outlook’ ವರದಿಯನ್ನು ಬಿಡುಗಡೆಗೊಳಿಸಲಾಯಿತು. ಡೆನ್ಮಾರ್ಕ್ನ ಕಂಪನಿಗಳನ್ನು ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಕಾರ್ಯತಂತ್ರದ ಸೇತುವೆಯಾಗಿ ICDK ಬೆಂಗಳೂರು ನಿರ್ವಹಿಸುತ್ತಿರುವ ಪಾತ್ರವನ್ನು ವರದಿ ವಿವರಿಸುತ್ತದೆ. ಕಾರ್ಯತಂತ್ರದ ಪಾಲುದಾರಿಕೆಗಳು, ಮಾರುಕಟ್ಟೆ ಅನ್ವೇಷಣೆ, ಉದ್ಯಮ ನಿಯೋಗಗಳು ಮತ್ತು ವಿನಿಮಯ ಕಾರ್ಯಕ್ರಮಗಳು, ಅಂತರರಾಷ್ಟ್ರೀಕರಣ ಹಾಗೂ ವಿಸ್ತರಣೆಗೆ ನೆರವು ಮತ್ತು ಡೆನ್ಮಾರ್ಕ್ ಹಾಗೂ ಭಾರತದ ಸಂಶೋಧನಾ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯಗಳ ನಡುವಿನ ಜ್ಞಾನ ವಿನಿಮಯವು ಇದರ ಪ್ರಮುಖ ಕಾರ್ಯಕ್ಷೇತ್ರಗಳಾಗಿವೆ.
ಈ ಸಭೆಯು ಭಾರತ–ಡೆನ್ಮಾರ್ಕ್ ಹಸಿರು ಕಾರ್ಯತಂತ್ರದ ಪಾಲುದಾರಿಕೆ ಮತ್ತು ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಮೂಲಕ ನಡೆಯುತ್ತಿರುವ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
