ಸಮಗ್ರ ಸುದ್ದಿ

ಹುಬ್ಬಳ್ಳಿಯ ನೈಋತ್ಯ ರೈಲ್ವೆ ಸೆಂಟ್ರಲ್ ಆಸ್ಪತ್ರೆಯಲ್ಲಿ ಪ್ರಧಾನ ವ್ಯವಸ್ಥಾಪಕರಿಂದ ಮೊಬೈಲ್ ಡಿಜಿಟಲ್ ರೇಡಿಯೋಗ್ರಫಿ ಯಂತ್ರ ಉದ್ಘಾಟನೆ

Share


ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಅವರು ಇಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ಸೆಂಟ್ರಲ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ‘ಮೊಬೈಲ್ ಡಿಜಿಟಲ್ ರೇಡಿಯೋಗ್ರಫಿ ಯಂತ್ರ’ವನ್ನು ಉದ್ಘಾಟಿಸಿದರು. ಈ ಸುಧಾರಿತ ವೈದ್ಯಕೀಯ ಉಪಕರಣಕ್ಕಾಗಿ ₹15,68,000 ವೆಚ್ಚ ಮಾಡಲಾಗಿದೆ.

ಈ ನೂತನ ಮೊಬೈಲ್ ಡಿಜಿಟಲ್ ರೇಡಿಯೋಗ್ರಫಿ ಯಂತ್ರವು ರೋಗಿಯ ಹಾಸಿಗೆಯ ಪಕ್ಕದಲ್ಲಿಯೇ ಹೈ-ಡೆಫಿನಿಷನ್ ಇಮೇಜಿಂಗ್ ಸೌಲಭ್ಯ ಒದಗಿಸುತ್ತದೆ. ಇದರಿಂದಾಗಿ ತೀವ್ರವಾಗಿ ಅಸ್ವಸ್ಥರಾದ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯ ಕಡಿಮೆಯಾಗುತ್ತದೆ. ಇದು ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ರೋಗನಿರ್ಣಯಕ್ಕೆ ಖಚಿತಪಡಿಸುತ್ತದೆ.

ಈ ಸಂದರ್ಭದಲ್ಲಿ, ಜಿಎಂ ಮಾಥುರ್ ಅವರು ಆಸ್ಪತ್ರೆಯಲ್ಲಿ ನವೀಕರಿಸಿದ ವಾರ್ಡ್-IV (Ward-IV) ಮತ್ತು ವೈದ್ಯಕೀಯ ತೀವ್ರ ನಿಗಾ ಘಟಕದ (MICU) ರೋಗಿ ಸಹಾಯಕರಿಗಾಗಿ ನಿರ್ಮಿಸಲಾದ ಸುಸಜ್ಜಿತ ಪ್ರತಿಕ್ಷಾಲಯ (ಕಾಯುವ ಕೋಣೆ) ವನ್ನು ಸಹ ಉದ್ಘಾಟಿಸಿದರು. ಈ ನವೀಕರಣಗಳು ರೋಗಿಗಳ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಸಹಾಯಕರು ಮತ್ತು ಸಂದರ್ಶಕರಿಗೆ ಉತ್ತಮ ವಾತಾವರಣ ಒದಗಿಸುವ ಗುರಿಯನ್ನು ಹೊಂದಿವೆ.

ಉದ್ಘಾಟನಾ ಸಮಾರಂಭದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕರಾದ ಡಾ. ಜಿ. ಎಸ್. ರಾಮಚಂದ್ರ, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕಿ ಶ್ರೀಮತಿ ಬೇಲಾ ಮೀನಾ ಮತ್ತು ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page