ಬೆಂಗಳೂರು, ನ.14: ಪ್ರಕೃತಿಯ ಮಾತೃಸ್ವರೂಪಿಯಾಗಿ ದೇಶಾದ್ಯಂತ ಹೆಸರುವಾಸಿಯಾಗಿದ್ದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ (114 ವರ್ಷ) ಎಂದು ಖ್ಯಾತಿಯಾದ ಶತಾಯುಷಿ ಇಂದು ವಿಧಿವಶರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ತಿಮ್ಮಕ್ಕ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದೇ ನಿಧನಹೊಂದಿದ್ದಾರೆ.
ಜೀವನವಿಡೀ ಮರಗಳ ನೆರಳಿನಲ್ಲಿ ಹಸಿರನ್ನೇ ಉಸಿರಾಗಿಸುವ ಸಂದೇಶ ನೀಡಿದ ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ 1911 ರಲ್ಲಿ ಜನಿಸಿದರು.
ಪರಿಸರ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾವಿರಾರು ಮರಗಳನ್ನು ಪೋಷಿಸಿ ಸಂರಕ್ಷಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ರಾಮನಗರ ಜಿಲ್ಲೆಯ ಹುಲಿಕಲ್ – ಕುದೂರು ನಡುವಿನ 4.5 ಕಿಲೋಮೀಟರ್ ರಸ್ತೆಯ ಬದಿಯಲ್ಲಿ ತಿಮ್ಮಕ್ಕ ಅವರು ಪತಿ ಚಿಕ್ಕಯ್ಯ ಅವರೊಂದಿಗೆ ನೆಟ್ಟ 385 ಆಲದ ಮರಗಳು, ಇಂದು ಕರ್ನಾಟಕದ ಪರಿಸರ ಪರಂಪರೆಯ ಜೀವಂತ ಚಿಹ್ನೆಯಾಗಿವೆ.
ಮಳೆಗಾಲ ಬಂದಾಗಲೆಲ್ಲಾ ಸಸಿಗಳನ್ನು ನೆಡುವುದು, ದಿನವೂ ನಾಲ್ಕು ಕಿಲೋಮೀಟರ್ ನಡೆದು ಬಕೆಟ್ ಗಳಲ್ಲಿ ನೀರು ತರಿಸಿ ಗಿಡಗಳಿಗೆ ನೀರುಣಿಸುವುದು ಇದೆಲ್ಲವೂ ಅವರ ದಿನಚರಿಯಾಗಿತ್ತು.
ಔಪಚಾರಿಕ ಶಿಕ್ಷಣವಿಲ್ಲದೇ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಿಮ್ಮಕ್ಕ ಸುಮಾರು 8000 ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಮರಗಳನ್ನಾಗಿ ಮಾಡಿ ಪೋಷಿಸಿದ್ದಾರೆ. ಗಿಡಗಳಿಗೆ ಮುಳ್ಳಿನ ಗಿಡಗಳಿಂದ ಬೇಲಿ ಹಾಕಿ ಅವುಗಳನ್ನು ರಕ್ಷಿಸುತ್ತಿದ್ದರು. ಆ ಮೂಲಕ ಅವರು ಮಕ್ಕಳಿಲ್ಲದ ನೋವನ್ನು ಮರೆಯುತ್ತಿದ್ದರು.
ತಿಮ್ಮಕ್ಕ ಅವರ ಸೇವೆಗೆ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರೀಯ ನಾಗರಿಕ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, 2016 ರಲ್ಲಿ ಬಿಬಿಸಿ 100 ಪ್ರಭಾವಶಾಲಿ ಮಹಿಳೆಯರಲ್ಲಿ ಸ್ಥಾನ ಸೇರಿದಂತೆ ನೂರಕ್ಕೂ ಹೆಚ್ಚು ಗೌರವಗಳು ಸಿಕ್ಕಿವೆ. ಅವರ ಹೆಸರಿನಲ್ಲಿ ಅಮೆರಿಕಾದ ಪರಿಸರ ಸಂಸ್ಥೆಗಳು ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಿವೆ. 2020 ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಳಯವು ಗೌರವ ಡಾಕ್ಟರೇಟ್ ನೀಡಿದೆ. ಇದು ಅವರ ಮಹೋನ್ನತ ಸೇವೆಯ ಜಾಗತಿಕ ಮಹತ್ವವನ್ನು ತೋರಿಸುತ್ತದೆ
