ಸಮಗ್ರ ಸುದ್ದಿ

ವಿಶೇಷ ರೈಲುಗಳಿಂದ ನೈಋತ್ಯ ರೈಲ್ವೆಗೆ ಶೇ. 23ರಷ್ಟು ಆದಾಯ ವೃದ್ಧಿ

Share


ಬೆಂಗಳೂರು, ನ.13:
ನೈಋತ್ಯ ರೈಲ್ವೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ (2025–26) ವಿಶೇಷ ರೈಲುಗಳ ಕಾರ್ಯಾಚರಣೆಯಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷದ (2024–25) ಇದೇ ಅವಧಿಗೆ ಹೋಲಿಸಿದರೆ ಈ ಬಾರಿಯ ಆದಾಯದಲ್ಲಿ ಶೇ.23ರಷ್ಟು ಹೆಚ್ಚಳ ಹೆಚ್ಚಳವಾಗಿದೆ.

ಏಪ್ರಿಲ್ ನಿಂದ ಅಕ್ಟೋಬರ್ 2025ರ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆ 355 ವಿಶೇಷ ರೈಲುಗಳನ್ನು ಓಡಿಸಿದೆ. ಇದರಿಂದ ಒಟ್ಟು ₹171.47 ಕೋಟಿ ಆದಾಯ ಗಳಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 351 ವಿಶೇಷ ರೈಲುಗಳ ಕಾರ್ಯಾಚರಣೆಯಿಂದ ₹ 138.83 ಕೋಟಿ ಆದಾಯ ಬಂದಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ₹ 32.64 ಕೋಟಿ (ಶೇ.23ರಷ್ಟು) ಹೆಚ್ಚುವರಿ ಆದಾಯ ಬಂದಿದ್ದು, ವಿಶೇಷ ರೈಲು ಸೇವೆಗಳನ್ನು ಪರಿಣಾಮಕಾರಿಯಾಗಿ ಅತ್ಯುತ್ತಮಗೊಳಿಸಿರುವುದನ್ನು ಸೂಚಿಸುತ್ತದೆ.

ಈ ಅವಧಿಯಲ್ಲಿ ಬರೋಬ್ಬರಿ 19.55 ಲಕ್ಷ ಪ್ರಯಾಣಿಕರು ವಿಶೇಷ ರೈಲು ಸೇವೆಗಳನ್ನು ಪಡೆದುಕೊಂಡಿದ್ದಾರೆ, ಇದು ಬಲವಾದ ಪ್ರಯಾಣಿಕರ ಬೇಡಿಕೆಯನ್ನು ಸೂಚಿಸುತ್ತದೆ. ನಿಗದಿತ ಬರ್ತ್ ಸಾಮರ್ಥ್ಯವಾದ 17.15 ಲಕ್ಷಕ್ಕೆ ಹೋಲಿಸಿದರೆ, ಶೇ.114ರಷ್ಟು ಬುಕಿಂಗ್ ದರ ದಾಖಲಾಗಿರುವುದು ಮತ್ತು ₹161.26 ಕೋಟಿ ಗಳಿಕೆಯ ಸಾಮರ್ಥ್ಯಕ್ಕೆ ವಿರುದ್ಧವಾಗಿ ಶೇ.106.34ರಷ್ಟು ಗಳಿಕೆಯ ದಕ್ಷತೆ ಸಾಧಿಸಿರುವುದು ಅತ್ಯುತ್ತಮ ಕಾರ್ಯಾಚರಣೆಯ ದಕ್ಷತೆಯನ್ನು ಸೂಚಿಸುತ್ತದೆ.

ವಿಶೇಷ ರೈಲುಗಳ ಜೊತೆಗೆ, ನೈರುತ್ಯ ರೈಲ್ವೆ ತನ್ನ ನಿಯಮಿತ ರೈಲು ಸೇವೆಗಳ ಬಲವರ್ಧನೆಗೂ ಒತ್ತು ನೀಡಿದೆ. ಏಪ್ರಿಲ್ ನಿಂದ ಅಕ್ಟೋಬರ್ 2025ರ ನಡುವೆ 521 ಹೆಚ್ಚುವರಿ ಬೋಗಿಗಳನ್ನು ಜೋಡಿಸಿ 35,524 ಹೆಚ್ಚುವರಿ ಬರ್ತ್ ಗಳನ್ನು ಒದಗಿಸಲಾಗಿದೆ. ಇದರಿಂದ 24,530 ಹೆಚ್ಚುವರಿ ಪ್ರಯಾಣಿಕರ ಓಡಾಟಕ್ಕೆ ಅನುಕೂಲವಾಗಿದೆ. ಇದರಿಂದಾಗಿ ₹2.09 ಕೋಟಿ ಹೆಚ್ಚುವರಿ ಆದಾಯ ಬಂದಿದೆ. ಜೂನ್ ಮತ್ತು ಅಕ್ಟೋಬರ್ 2025ರ ಪೀಕ್ ಟ್ರಾವೆಲ್ ಮತ್ತು ಹಬ್ಬದ ಋತುಗಳಲ್ಲಿ ಅತ್ಯಧಿಕ ಹೆಚ್ಚುವರಿ ಆದಾಯ ಗಳಿಕೆ ದಾಖಲಾಗಿದೆ.

ಈ ಗಮನಾರ್ಹ ಸಾಧನೆಯು ಪ್ರಯಾಣಿಕರ ಬೇಡಿಕೆಯನ್ನು ದಕ್ಷತೆಯಿಂದ ನಿರ್ವಹಿಸಲು ನೈಋತ್ಯ ರೈಲ್ವೆ ಕೈಗೊಂಡ ಸಕ್ರಿಯ ಕ್ರಮಗಳನ್ನು ಎತ್ತಿ ತೋರಿಸುತ್ತದೆ. ವಿಶೇಷ ರೈಲುಗಳ ಸಕಾಲಿಕ ಕಾರ್ಯಾಚರಣೆ ಮತ್ತು ನಿಯಮಿತ ಸೇವೆಗಳಿಗೆ ಬೋಗಿಗಳನ್ನು ಹೆಚ್ಚಿಸುವ ಮೂಲಕ, ಹಬ್ಬದ ಮತ್ತು ಹೆಚ್ಚು ಬೇಡಿಕೆಯಿರುವ ಋತುಗಳಲ್ಲಿ ಪ್ರಯಾಣಿಕರಿಗೆ ಅನುಕೂಲತೆ, ಸೌಕರ್ಯ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ನೈರುತ್ಯ ರೈಲ್ವೆ ತನ್ನ ಬದ್ಧತೆಯನ್ನು ಮುಂದುವರೆಸಿದೆ.


Share

You cannot copy content of this page