ಸಮಗ್ರ ಸುದ್ದಿ

ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ|ಅಸಮತೋಲನ ನಿವಾರಣೆಗೆ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು- ಸಿ.ಎಂ. ಸಿದ್ದರಾಮಯ್ಯ

Share

ಬೆಳಗಾವಿ : ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ನಡುವೆ ಇರುವ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನಮ್ಮ ಸರ್ಕಾರ ಬದ್ಧವಿದ್ದು, ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಸರ್ಕಾರದ ಪರವಾಗಿ ವಿಧಾನಸಭೆಯಲ್ಲಿ ಶುಕ್ರವಾರದಂದು ಉತ್ತರ ನೀಡಿದರು.

ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪರಿಹಾರ ಕಂಡುಕೊಳ್ಳಲು 2001 ರಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಆರ್ಥಿಕ ತಜ್ಞ ಪ್ರೊ.ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಅವರಿಂದ 2002 ರಲ್ಲಿ ವರದಿ ಪಡೆಯಲಾಗಿತ್ತು. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ 39 ತಾಲ್ಲೂಕು, ಅತಿ ಹಿಂದುಳಿದ 40 ತಾಲ್ಲೂಕು ಹಾಗೂ 35 ಹಿಂದುಳಿದ ತಾಲ್ಲೂಕು ಸೇರಿದಂತೆ ಒಟ್ಟು 114 ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂದು ತಿಳಿಸಿದ್ದರು.

ಈ ಪೈಕಿ 27 ತಾಲ್ಲೂಕುಗಳು ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿವೆ. ಈ ತಾಲ್ಲೂಕುಗಳನ್ನು ಅಭಿವೃದ್ಧಿಪಡಿಸಲು 08 ವರ್ಷಗಳಲ್ಲಿ 31 ಸಾವಿರ ಕೋಟಿ ರೂ. ಒದಗಿಸಿ, ಅಸಮತೋಲನೆ ನಿವಾರಿಸಬೇಕು ಎಂದಿದ್ದರು. ಆದರೆ 31 ಸಾವಿರ ಕೋಟಿ ರೂ. ಗಳಿಗಿಂತಲೂ ಹೆಚ್ಚಿನ ಹಣ ಹಿಂದುಳಿದ ತಾಲ್ಲೂಕುಗಳಲ್ಲಿ ಖರ್ಚಾಗಿದೆ.

ನಂಜುಂಡಪ್ಪ ಅವರ ವರದಿಯಂತೆ ಈಗಾಗಲೆ ಹಿಂದುಳಿದ ತಾಲ್ಲೂಕುಗಳಿಗೆ ಹಣ ನೀಡಿ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, ಇದರ ಬಳಿಕ ಈ ತಾಲ್ಲೂಕುಗಳಲ್ಲಿ ಏನೇನು ಪರಿಣಾಮವಾಗಿವೆ, ಅಭಿವೃದ್ಧಿಯಾಗಿವೆಯೇ ಇಲ್ಲವೆ ಎಂಬುದರ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯವಿದೆ ಎಂದು ತೀರ್ಮಾನಿಸಿ ಉತ್ತರ ಕರ್ನಾಟಕದವರೇ ಆದ ಹಿರಿಯ ಆರ್ಥಿಕ ತಜ್ಞ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇವೆ.

ಜನವರಿ ತಿಂಗಳ ಅಂತ್ಯದೊಳಗೆ ಈ ಸಮಿತಿಯು ವರದಿ ಸಲ್ಲಿಸುವ ನಿರೀಕ್ಷೆ ಇದೆ. ಈ ವರದಿಯನ್ನು ಆಧರಿಸಿ, ಯಾವ ಜಿಲ್ಲೆಗಳು, ತಾಲ್ಲೂಕುಗಳು, ಯಾವ ಕ್ಷೇತ್ರಗಳಲ್ಲಿ ಹಿಂದುಳಿದಿವೆ ಎಂಬುದನ್ನು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು. ಪ್ರಮುಖವಾಗಿ ಪ್ರಾದೇಶಿಕ ಅಸಮತೋಲನ ಮತ್ತು ಅಸಮಾನತೆಯನ್ನು ನಿವಾರಿಸುವುದು ನಮ್ಮ ಸರ್ಕಾರದ ಮುಖ್ಯ ಆಶಯವಾಗಿದೆ.

ಶಿಕ್ಷಣ, ಆರೋಗ್ಯ, ಪೌಷ್ಠಿಕತೆ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ಹಿಂದುಳಿದಿರುವುದು ನಿಜ. ಹೀಗಾಗಿ ನಾವು ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ, ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶೈಕ್ಷಣಿಕ ಪ್ರಗತಿಗೆ ಪ್ರೊ. ಛಾಯಾ ದೇವಣಗಾಂವಕರ್ ಸಮಿತಿ ವರದಿ ಸಲ್ಲಿಕೆ:

ಉತ್ತರ ಕರ್ನಾಟಕದ ಜಿಲ್ಲೆಗಳು ಶೈಕ್ಷಣಿಕವಾಗಿ ಹಿಂದುಳಿದಿವೆ. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗಿ, ಅಸಮತೋಲನೆ ನಿವಾರಣೆ ಆಗಬೇಕು, ಇದಕ್ಕಾಗಿಯೇ ಆರ್ಥಿಕ ತಜ್ಞೆ ಪ್ರೊ. ಛಾಯಾ ದೇವಣಗಾಂವಕರ್ ನೇತೃತ್ವದಲ್ಲಿ ಶಿಕ್ಷಣ ಸಮಿತಿಯನ್ನು ರಚಿಸಿದ್ದು, ಈಗಾಗಲೆ ಡಿ. 16 ರಂದು ವರದಿ ಸಲ್ಲಿಸಿದ್ದಾರೆ. ಸಮಿತಿ ನೀಡಿರುವ ವರದಿಯಲ್ಲಿ ಶಿಫಾರಸು ಮಾಡಿರುವ ಅಂಶಗಳನ್ನು ನಾವು ಜಾರಿಗೊಳಿಸುತ್ತೇವೆ. ಇದರಿಂದ ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರವೂ ಕೂಡ ಅಭಿವೃದ್ಧಿಗೊಂಡು, ಈ ಭಾಗದಲ್ಲಿಯೂ ಸಾಕ್ಷರತೆ ಪ್ರಮಾಣ ಸುಧಾರಣೆಯಾಗುವ ವಿಶ್ವಾಸವಿದೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ 80 ರಷ್ಟು ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಿಕೊಳ್ಳಲು ಸೂಚನೆ ನೀಡಿದ್ದು, ಮಂಜೂರಾತಿ ನೀಡಿರುವ 900 ಕೆ.ಪಿ.ಎಸ್. ಶಾಲೆಗಳ ಪೈಕಿ 300 ಕೆಪಿಎಸ್ ಶಾಲೆಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೇ ನೀಡಲಾಗಿದೆ ಎಂದರು.

ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಮೂಲಕ ಕಲ್ಯಾಣ ಕರ್ನಾಟಕ ಅಭಿವೃದ್ಧಿ :

ಹೈದ್ರಾಬಾದ್ ಕರ್ನಾಟಕ ಪ್ರದೇಶವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಲಾಗುತ್ತಿದ್ದು, ಈ ವರ್ಷ 5 ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದೇವೆ. ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಕರ್ನಾಟಕದಿಂದ ಸಲ್ಲಿಸಿದ ಮನವಿಗೆ ಆಗಿನ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲು ನಿರಾಕರಿಸಿ, ಪತ್ರ ನೀಡಿತ್ತು. ಆದರೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಮಲ್ಲಿಕಾರ್ಜುನ ಖರ್ಗೆ ಅವರ ಸತತ ಪ್ರಯತ್ನದ ಫಲವಾಗಿ ನಮಗೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಮೂಲಕ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿ, ಇದರ ಸಮಗ್ರ ಅಭಿವೃದ್ಧಿಗಾಗಿ ನಾವು ವಿಶೇಷವಾಗಿ ಅನುದಾನ ಒದಗಿಸುತ್ತಿದ್ದೇವೆ.

371 ಜೆ ಅನುಷ್ಠಾನವಾದ ಮೇಲೆ ಆ ಭಾಗದ ಅಭಿವೃದ್ಧಿಗಾಗಿ 24,778 ಕೋಟಿ ರೂ.ಗಳನ್ನು ಒದಗಿಸಿದ್ದೇವೆ. ಇದುವರೆಗೆ ಸುಮಾರು 14,800 ಕೋಟಿ ರೂ ಗಳಿಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಲಾಗಿದೆ ಎಂದರು.

ನೀರಾವರಿ ಯೋಜನೆಗಳ ಅಭಿವೃದ್ಧಿ :

ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ಮಹದಾಯಿ ಯೋಜನೆ ರೂಪಿಸಿದ್ದು, 2018 ರಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಮಾನಿಸಿದಂತೆ 13.42 ಟಿ.ಎಂ.ಸಿ. ನೀರು ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಕ್ಲಿಯರೆನ್ಸ್ ನೀಡದೆ ಅಸಹಕಾರ ತೋರುತ್ತಿದೆ. ನಾವು ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿಕೊಂಡು ಕಾಯುತ್ತಿದ್ದೇವೆ. ಹೀಗಾಗಿ ವಿಪಕ್ಷಗಳು ಕೂಡ ಕೇಂದ್ರ ಸರ್ಕಾರದ ಮನವೊಲಿಸಿ, ಯೋಜನೆಗೆ ಕ್ಲಿಯರೆನ್ಸ್ ಕೊಡುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

ಕೃಷ್ಣ ಮೇಲ್ದಂಡೆ 3 ನೇ ಹಂತದ ಯೋಜನೆಯಲ್ಲಿ ನಮಗೆ 173 ಟಿ.ಎಂ.ಸಿ. ನೀರು ಹಂಚಿಕೆಯಾಗಿದ್ದು, ಆಲಮಟ್ಟಿ ಜಲಾಶಯವನ್ನು 519 ಮೀ. ನಿಂದ 524 ಮೀ. ಗೆ ಹೆಚ್ಚಿಸಲು ಈಗಾಗಲೇ ಅನುಮತಿ ದೊರೆತಿದೆ. ಇದುವರೆಗೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿಲ್ಲ. ಯೋಜನೆಗೆ 75 ಸಾವಿರ ಹೆ. ಭೂಮಿಯನ್ನು ಒಂದೇ ಹಂತದಲ್ಲಿ ಸ್ವಾಧೀನ ಪಡಿಸಿಕೊಂಡು, ತರಿ ಭೂಮಿಗೆ ಪ್ರತಿ ಹೆ. ಗೆ 40 ಲಕ್ಷ ರೂ., ಹಾಗೂ ಖುಷ್ಕಿ ಭೂಮಿಗೆ 30 ಲಕ್ಷ ರೂ. ಕೊಡಲು ನಾವು ಸಿದ್ಧರಿದ್ದು, ಈಗಾಗಲೆ ರೈತರು ಕೂಡ ಒಪ್ಪಿಕೊಂಡಿದ್ದಾರೆ. ಮುಂದಿನ ಬಜೆಟ್‍ನಲ್ಲಿ ಇದಕ್ಕೆ ಅನುದಾನ ಒದಗಿಸಲು ನಾವು ಸಿದ್ಧರಿದ್ದೇವೆ, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ನಮ್ಮದು ಎಂದರು.

ಚಿತ್ರದುರ್ಗ, ತುಮಕೂರು ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಿ, ಆ ಭಾಗದ ರೈತರ ಹಿತ ಕಾಯಲು ಜಾರಿಗೆ ತಂದಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಕಳೆದ 2023-24 ರ ಬಜೆಟ್‍ನಲ್ಲಿ 5300 ಕೋಟಿ ರೂ. ಅನುದಾನ ಒದಗಿಸುವುದಾಗಿ ಘೋಷಿಸಿತ್ತು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇದು ರಾಷ್ಟ್ರೀಯ ಯೋಜನೆಯಾಗಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುವುದು ಎಂದಿದ್ದರು.

ಆದರೆ ಕೇಂದ್ರ ಸರ್ಕಾರ ಇದುವರೆಗೂ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ, ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿಲ್ಲ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಅಸಹಕಾರ ತೋರುತ್ತಿದ್ದು, ಜಲಜೀವನ್ ಮಿಷನ್ ಯೋಜನೆಗೆ ರಾಜ್ಯಕ್ಕೆ ಕೊಡಬೇಕಿದ್ದ 13 ಸಾವಿರ ಕೋಟಿ ರೂ. ಗಳನ್ನು ಕಳೆದ ವರ್ಷವೂ ನೀಡಿಲ್ಲ, ಈ ವರ್ಷವೂ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.


Share

You cannot copy content of this page