ಶಿಕ್ಷಣ / ಉದ್ಯೋಗ ಸಮಗ್ರ ಸುದ್ದಿ

ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿ.ಎಂ.ಸಿದ್ದರಾಮಯ್ಯ

Share

ಬೆಂಗಳೂರು ನ14:
ದೇಶದ ಭವಿಷ್ಯ ರೂಪಿತ ಆಗುವುದು ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳಿಂದ. ಆದ್ದರಿಂದ ಮಕ್ಕಳು ಪ್ರಾಥಮಿಕ‌ ಶಿಕ್ಷಣದಿಂದಲೇ ಮೌಡ್ಯ, ಕಂದಾಚಾರದಿಂದ ದೂರ ಉಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪಂಡಿತ್ ಜವಾಹರಲಾಲ್ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ರಾಜ್ಯ ಮಟ್ಟದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳೇ ಭಾರತದ ಭವಿಷ್ಯ ಎನ್ನುವ ದೂರದೃಷ್ಟಿ ನೆಹರೂ ಅವರಿಗೆ ಇತ್ತು. ಹೀಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಿದ್ದರು. ನಮ್ಮ ಸರ್ಕಾರ ಕೂಡ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದ್ದು,65000 ಕೋಟಿ ರೂಪಾಯಿಗಳನ್ನು ಶಿಕ್ಷಣಕ್ಕೆ ನಮ್ಮ ಸರ್ಕಾರ ನೀಡುತ್ತಿದೆ ಎಂದರು.

ನೆಹರೂ ತಮ್ಮ ಯೌವ್ವನದ 3200 ಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದ ಹೋರಾಟಗಾರ. ಅತೀ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆಮನೆ ಸೇರಿದರು. ದೇಶದ ಪ್ರಧಾನಿಯಾಗಿ ಕೃಷಿ, ವಿಜ್ಞಾನ, ನೀರಾವರಿ, ತಂತ್ರಜ್ಞಾನ ಸೇರಿ ದೇಶದ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿದರು. IIT, ಏಮ್ಸ್ ಸೇರಿ ಅಣೆಕಟ್ಟು, ಕೈಗಾರಿಕೆಗಳನ್ನೆಲ್ಲಾ ಮಾಡಿದ್ದು ನೆಹರೂ.‌ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಬ್ರಿಟಿಷರ ಜೊತೆ ಕೈಜೋಡಿಸಿದ್ದವರು ನೆಹರೂ ಮತ್ತು ಗಾಂಧಿಯನ್ನು ಟೀಕಿಸುತ್ತಾರೆ. ಇದನ್ನು ಮಕ್ಕಳು ಮತ್ತು ಶಿಕ್ಷಕರು ಹಾಗೂ ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಇರುವ ಮಕ್ಕಳ ಮೇಲೆ ದೇಶದ ಅಭಿವೃದ್ಧಿ ಮತ್ತು ಭವಿಷ್ಯದ ಕನಸನ್ನು ನೆಹರೂ ಕಟ್ಟಿಕೊಂಡಿದ್ದರು. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಈಗ ಈ ವೇದಿಕೆಯಲ್ಲಿ ಸನ್ಮಾನಿತರಾದ ವಿದ್ಯಾರ್ಥಿಗಳೆಲ್ಲರೂ ಬಡ ಕುಟುಂಬದಿಂದ ಬಂದು ಸರ್ಕಾರಿ ಶಾಲೆಗಳಲ್ಲಿ ಓದಿದವರು. ಆದ್ದರಿಂದ ಈ ವರ್ಷ ಒಟ್ಟು 900 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ನಾನೂ ಸರ್ಕಾರಿ ಶಾಲೆಯಲ್ಲಿ ಓದಿಯೇ ಮುಖ್ಯಮಂತ್ರಿ ಆಗಿದ್ದೀನಿ ಎಂದರು.

ಮನುಷ್ಯ ಮನುಷ್ಯನನ್ನು ಜಾತಿ, ಧರ್ಮ, ಭಾಷೆಯ ಮಿತಿ ಇಲ್ಲದೆ ಪ್ರೀತಿಸಬೇಕು. ಜಾತಿ ವ್ಯವಸ್ಥೆಯ ಆಧಾರದ ಮೇಲೆ ತಾರತಮ್ಯ ಮಾಡುವವರನ್ನು ಹತ್ತಿರಕ್ಕೆ ಸೇರಿಸದೆ, ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ಸಹಿಷ್ಣತೆ ಮತ್ತು ಸಹಭಾಳ್ವೆಯನ್ನು ಪಾಲಿಸುವ ಮೂಲಕ ವೈವಿದ್ಯತೆಯಲ್ಲಿ ಏಕತೆಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಕರೆ ನೀಡಿದರು.

ಇಂದಿರಾ ಕಿಟ್-ಶೂ-ಸಮವಸ್ತ್ರ-ಮೊಟ್ಟೆ-ಬಾಳೆಹಣ್ಣು-ಪಠ್ಯ ಪುಸ್ತಕ-ಸ್ಕಾಲರ್ಶಿಪ್ ಸೇರಿ ಬಡವರ ಮಕ್ಕಳಿಗಾಗಿ ಸಕಲ ಸವಲತ್ತು

ಸರ್ಕಾರಿ ಶಾಲೆಗಳ ಮಕ್ಕಳು ಸ್ವಾಭಿಮಾನದಿಂದ ಸಮಾಜಮುಖಿಯಾಗಿ ಬೆಳೆಯಲು ಉತ್ತಮ ಶಿಕ್ಷಣ ಪಡೆಯಲು ನಮ್ಮ ಸರ್ಕಾರ ಸಕಲ ಸವಲತ್ತುಗಳನ್ನೂ ನೀಡುತ್ತಿದೆ. ಇಂದಿರಾ ಕಿಟ್-ಶೂ-ಸಮವಸ್ತ್ರ-ಮೊಟ್ಟೆ-ಬಾಳೆಹಣ್ಣು-ಪಠ್ಯ ಪುಸ್ತಕ-ಸ್ಕಾಲರ್ಶಿಪ್ ಸೇರಿ ಬಡವರ ಮಕ್ಕಳಿಗಾಗಿ ಸರ್ಕಾರ ಒದಗಿಸುತ್ತಿದೆ. ಇದರ ಅನುಕೂಲ ಪಡೆದು ವೈಜ್ಞಾನಿಕ ಮನಸ್ಥಿತಿ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಮಕ್ಕಳು ದೇಶದ ಭವಿಷ್ಯ – ಮಧು ಬಂಗಾರಪ್ಪ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಮಕ್ಕಳು ಈ ದೇಶದ ಭವಿಷ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟರೆ ಅದು ದೇವರ ಪ್ರಸಾದದ ರೀತಿಯಲ್ಲಿ ಹೊರಬರುತ್ತದೆ. ದೇಶ ಅಭಿವೃದ್ಧಿಯಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶಕ್ಕೆ ಹೆಗ್ಗಳಿಕೆ ತರುವ ಕೆಲಸ ಮಾಡಬೇಕು ಎಂದರು.

ಮಕ್ಕಳಲ್ಲಿ ಉತ್ತಮ ಆಲೋಚನೆ, ಚಿಂತನೆ, ಉತ್ತಮ ಭವಿಷ್ಯವನ್ನು ರೂಪಿಸುವಂತಹ ಕೆಲಸವನ್ನು ಶಾಲಾ ಶಿಕ್ಷಣ ಇಲಾಖೆ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ನುರಿತ ಶಿಕ್ಷಕರಿದ್ದಾರೆ. ಇಡೀ ರಾಜ್ಯದಲ್ಲಿ ಇಂದಿನಿಂದ ದಾಖಲಾತಿ ಆಂದೋಲನ ಆರಂಭ ಮಾಡುತ್ತಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ 51000 ಅತಿಥಿ ಶಿಕ್ಷಕರನ್ನು ಒಂದೇ ಬಾರಿಗೆ ನೇಮಕ ಮಾಡಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 18000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟಾರೆ ಶಾಲಾ ಮತ್ತು ಶಿಕ್ಷಣ ಇಲಾಖೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ರಾಜ್ಯದಲ್ಲಿ 900 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿಯೊಂದು ಶಾಲೆಯಲ್ಲಿ 1200 ಮಕ್ಕಳು ಕಲಿಯಲು ಅನುಕೂಲ ಮಾಡಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದರಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಕ್ರಮವಹಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಒಂದರಿಂದ ಹತ್ತನೇ ತರಗತಿಯ ಮೌಲ್ಯ ಶಿಕ್ಷಣದ ಚಟುವಟಿಕೆ ಪುಸ್ತಕದ ಡಿಜಿಟಲ್ ಅವತರಣಿಕೆಯನ್ನು ಬಿಡುಗಡೆ ಮಾಡಿದರು ಹಾಗೂ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರಿಸಲಾಯಿತು.


Share

You cannot copy content of this page