ಸಮಗ್ರ ಸುದ್ದಿ

ರಸ್ತೆ ಗುಂಡಿಗಳ ಸಮಸ್ಯೆ ಬಂದಲ್ಲಿ ಅಧಿಕಾರಿಗಳ ಮೇಲೆ ಕ್ರಮ: ದಲ್ಜಿತ್ ಕುಮಾರ್

Share

ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ನಾಗರೀಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಇಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ದಲ್ಜಿತ್ ಕುಮಾರ್ ರವರಿಂದ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 22 ನಾಗರಿಕರಿಂದ ದೂರವಾಣಿ ಮೂಲಕ ವಿವಿಧ 30 ಸಮಸ್ಯೆಗಳ ಅಹವಾಲು ಆಲಿಸಿದರು.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿ ಸಾಕಷ್ಟು ರಸ್ತೆ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದಾಗ್ಯೂ ರಸ್ತೆ ಗುಂಡಿಗಳ ಸಮಸ್ಯೆಗಳ ದೂರುಗಳನ್ನು ಸ್ವೀಕರಿಸುತ್ತಿರುವುದರಿಂದ ರಸ್ತೆ ಗುಂಡಿಗಳ ಸಮಸ್ಯೆ ಪುನರಾವರ್ತನೆಯಾಗದಂತೆ ಕ್ರಮ ವಹಿಸಲು ಇಂಜಿನೀಯರಿಂಗ್ ಅಧಿಕಾರಿಗಳಿಗೆ ಸೂಚಿಸಿದರು. ಒಂದು ವೇಳೆ ರಸ್ತೆ ಗುಂಡಿ ಸಮಸ್ಯೆ ಬಂದಲ್ಲಿ ಆ ಪ್ರದೇಶದ ಇಂಜಿನೀಯರ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವುದಾಗಿ ಅಪರ ಆಯುಕ್ತರು ಸೂಚಿಸಿದರು.

ಒಣಗಿದ ಮರಗಳ / ರೆಂಬೆ ಕೊಂಬೆ ತೆರವಿಗೆ ಅಭಿಯಾನ ನಡೆಸಿ:

ಒಣಗಿದ ಮರಗಳು ಹಾಗೂ ರೆಂಬೆ ಕೊಂಬೆ ತೆರವುಗೊಳಿಸುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಕೇಂದ್ರ ನಗರಪಾಲಿಕೆ ವ್ಯಾಪ್ತಿ ಒಣಗಿದ ಮರಗಳ / ರೆಂಬೆ ಕೊಂಬೆ ತೆರವಿಗೆ ತೆರವುಗೊಳಿಸುವ ಅಭಿಯಾನ ನಡೆಸಲು ಸೂಚಿಸಿದರು.

ಉದ್ಯಾನವನ ಸಮಯ ಬದಲಾವಣೆಗೆ ಕ್ರಮ:

ತಡರಾತ್ರಿಯವರೆಗೆ ಉದ್ಯಾನವನಗಳನ್ನು ತೆಗೆಯುವುದರಿಂದ ಕಿಡಿಗೇಡಿಗಳಿಂದ ಅನಧಿಕೃತ ಚಟುವಟಿಕೆಗಳು ನಡೆಯುತ್ತಿದ್ದು, ಈ ಕಾರಣ ಉದ್ಯಾನವನಗಳ ಸಮಯ ಬದಲಾವಣೆ ಮಾಡಲು ಮಹಿಳೆಯೊಬ್ಬರು ದೂರು ಹೇಳಿದರು. ಅಪರ ಆಯುಕ್ತರು ಸಮಯ ಬದಲಾವಣೆಗೆ ಕ್ರಮ ವಹಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.

ಮೆಟ್ರೋ ಮಾರ್ಗಗಳ ಕಟ್ಟಡ ತ್ಯಾಜ್ಯ ತೆರವುಗೊಳಿಸಲು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಪ್ರದೇಶದ ಮೆಟ್ರೋ ಅಧಿಕಾರಿಗಳೊಂದಿಗೆ ಸಭೆ* ಆಯೋಜಿಸಿ ಕ್ರಮ ವಹಿಸುವುದಾಗಿ ಅಪರ ಆಯುಕ್ತರು ತಿಳಿಸಿದರು.

ನಾಗರಿಕರಿಂದ ಸ್ವೀಕೃತವಾಗುವ ಅಹವಾಲುಗಳನ್ನು ಅಪರ ಆಯುಕ್ತರು ಖುದ್ದಾಗಿ ಆಲಿಸಿ, ಸಂಬಂಧಿಸಿದ ದೂರು/ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸ್ಥಳದಲ್ಲಿಯೇ ಹಾಜರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಕಾಲಮಿತಿಯೊಳಗಾಗಿ ಸಮಸ್ಯೆಗಳನ್ನು ಪರಿಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಫೋನ್ ಇನ್ ಕಾರ್ಯಕ್ರಮದಲ್ಲಿ ಜಂಟಿ ಆಯುಕ್ತರುಗಳಾದ ರಂಗನಾಥ್, ಹೇಮಂತ್ ಶರಣ್ , ಮುಖ್ಯ ಅಭಿಯಂತರರುಗಳಾದ ವಿಜಯಕುಮಾರ್ ಹರಿದಾಸ್, ಸುಗುಣ, ಅಧೀಕ್ಷಕ ಅಭಿಯಂತರರಾದ ಪುನೀತ್, ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರರು, ತೋಟಗಾರಿಕೆ, ಅರಣ್ಯ, ನಗರಯೋಜನೆ ಇತರೆ ವಿಭಾಗಗಳ ಅಧಿಕಾರಿಗಳು ಹಾಜರಿದ್ದರು.


Share

You cannot copy content of this page