ಸಮಗ್ರ ಸುದ್ದಿ

ಮಾರ್ಚ್ ವೇಳೆಗೆ ಕೋರಮಂಗಲದಿಂದ ಸರ್ಜಾಪುರವರೆಗಿನ ಬಫರ್ ರಸ್ತೆ ಕಾಮಗಾರಿ ಪೂರ್ಣ: ಡಿಸಿಎಂ ಡಿ.ಕೆ. ಶಿವಕುಮಾರ್

Share

ಬೆಂಗಳೂರು: ಮುಂದಿನ ವರ್ಷ ಮಾರ್ಚ್ ತಿಂಗಳ ವೇಳೆಗೆ ಕೋರಮಂಗಲದಿಂದ ಸರ್ಜಾಪುರವರೆಗಿನ 5.50 ಕಿ.ಮೀ ಉದ್ದದ ಬಫರ್ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ರಾಜಕಾಲುವೆ ಪಕ್ಕದಲ್ಲಿ ಸಂಚಾರಿಯುಕ್ತ ಬಫರ್ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಶಿವಕುಮಾರ್ ಅವರು ಸೋಮವಾರ ಪರಿಶೀಲನೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದರು.

ಬಫರ್ ರಸ್ತೆಗಳು ಬೆಂಗಳೂರಿನ ಪಾಲಿಗೆ ಇತಿಹಾಸ ಸೃಷ್ಟಿ ಮಾಡಲಿರುವ ರಸ್ತೆಗಳಾಗಲಿವೆ. ಕೆರೆಗಳು ಹಾಗೂ ರಾಜಕಾಲುವೆ ಪಕ್ಕದಲ್ಲಿರುವ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಮುಂದಾಗಿದ್ದೇವೆ. ಮೊದಲ ಹಂತದಲ್ಲಿ 300 ಕಿ.ಮೀ ಉದ್ದದ ರಸ್ತೆ ನಿರ್ಮಿಸಲು ಗುರುತಿಸಲಾಗಿದೆ” ಎಂದು ತಿಳಿಸಿದರು.

ಈ ರಸ್ತೆ ಎಂ.ಜಿ ರಸ್ತೆಯಿಂದ ಬೆಳ್ಳಂದೂರಿನವರೆಗೆ ಸಾಗಲಿದೆ. ಮಿಲಿಟರಿಯವರು ಈ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಜಾಗ ನೀಡಿದ್ದಾರೆ. ಈ ಜಾಗ ಬಿಟ್ಟುಕೊಡುವಂತೆ ನಾವು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದೆವು. ಅವರು ಸಧ್ಯಕ್ಕೆ ಕೆಲಸ ಮಾಡಿಕೊಳ್ಳಿ ಎಂದು ಅನುಮತಿ ನೀಡಿದ್ದಾರೆ. ಇಲ್ಲಿ ಹೊಸ ರಸ್ತೆ ನಿರ್ಮಾಣ ವಾಗುತ್ತಿದ್ದು, ಸಾರ್ವಜನಿಕರು ಸೇನಾ ಪ್ರದೇಶದಿಂದ ಸುತ್ತುವರೆದು ಹೋಗುವುದು ತಪ್ಪಲಿದ್ದು, ಸುಮಾರು 10 ಕಿ.ಮೀ ನಷ್ಟು ಪ್ರಯಾಣ ಕಡಿತವಾಗಲಿದೆ ಎಂದು ತಿಳಿಸಿದರು.

ಈ ಬಫರ್ ರಸ್ತೆಗಳಲ್ಲಿ ಬಸ್, ಲಾರಿಯಂತಹ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಸಾರ್ವಜನಿಕರು, ಬೈಕ್, ಕಾರುಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಭಾರಿ ವಾಹನಗಳಿಂದ ರಸ್ತೆ ಕುಸಿಯುವ ಸಮಸ್ಯೆಯಾಗಬಾರದು ಎಂದು ಈ ತೀರ್ಮಾನ ಮಾಡಿದ್ದೇವೆ ಎಂದರು.

ಮೊದಲ ಹಂತದಲ್ಲಿ ರಾಜರಾಜೇಶ್ವರಿ ನಗರ, ಐಟಿಪಿಎಲ್ ಹಾಗೂ ಈ ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ಕಾಮಗಾರಿ ಮಾಡುತ್ತಿದ್ದೇವೆ. ಈ ಬಫರ್ ವಲಯದಲ್ಲಿ ಯಾರಿಗೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಹೀಗಾಗಿ ಜಾಗ ಕಳೆದುಕೊಳ್ಳುವವರಿಗೆ ಟಿಡಿಆರ್ ನೀಡುತ್ತಿದ್ದೇವೆ. ಇದರಿಂದ ಅವರಿಗೆ ರಕ್ಷಣೆ ಸಿಗಲಿದೆ. ಮುಂದೆ ಯಾವುದೇ ಕೆಐಎಡಿಬಿ ಸೇರಿದಂತೆ ಇತರೆ ಆಸ್ತಿಗಳಿದ್ದರೆ, ಬಫರ್ ವಲಯ ರಸ್ತೆಗೆ ಜಾಗ ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸೂಚಿಸಿದ್ದೇವೆ ಎಂದು ತಿಳಿಸಿದರು.

ಬೊಮ್ಮನಹಳ್ಳಿಯಲ್ಲಿ ದಾಖಲೆಗಳು ಸರಿ ಇದ್ದರೂ ಇ-ಖಾತಾ ಮಾಡದೇ ವಜಾಗೊಳಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದರು.


Share

You cannot copy content of this page