ನವದೆಹಲಿ : ಮೆಟ್ರೋ 2ನೇ ಹಂತದ ಪರಿಷ್ಕೃತ ದರಕ್ಕೆ ಒಪ್ಪಿಗೆ, ಮೆಟ್ರೋ 3ಎ ಹಂತಕ್ಕೆ ಅನುಮೋದನೆ, RRTS ಯೋಜನೆಗೆ ಬೆಂಬಲ, ಮಿಟ್ಟಗಾನಹಳ್ಳಿ ಕೆರೆ ಬಳಿ ವಿವಿಧಹಂತದ ತ್ಯಾಜ್ಯ ವಿಲೇವಾರಿಗೆ ಅನುಮತಿ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳಿಗೆ ಅನುಮತಿ ಹಾಗೂ ಬೆಂಬಲ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವರಾದ ಮನೋಹರ್ ಲಾಲ್ ಅವರನ್ನು ಭೇಟಿ ಮಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ರಾಜ್ಯ ರಾಜಧಾನಿಗೆ ಅಗತ್ಯವಾಗಿರುವ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿದರು.
ಬೆಂಗಳೂರು ದೇಶದ ಮಹಾನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಅನೇಕ ನಗರಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಬಾಕಿ ಉಳಿದಿರುವ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೆಟ್ರೋ 2ನೇ ಹಂತದ ಯೋಜನೆ ಪೂರ್ಣಗೊಳಿಸುವ ಪರಿಷ್ಕೃತ ವೆಚ್ಚ 26,405 ಕೋಟಿ ರೂ.ನಿಂದ 40,425 ಕೋಟಿ ರೂ.ವರೆಗೆ ಏರಿಕೆಯಾಗಿದ್ದು, ರಾಜ್ಯ ಸರ್ಕಾರ ದಿನಾಂಕ 05.06.2025ರಂದು ಅನುಮೋದನೆ ನೀಡಿದೆ. ಈ ಪ್ರಸ್ತಾವನೆಯನ್ನು ಕೇಂದ್ರ ಸಚಿವಾಲಯಕ್ಕೆ 09.06.2025ರಂದು ಕಳುಹಿಸಲಾಗಿದ್ದು, ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಬೇಕು ಎಂದು ಹೇಳಿದ್ದಾರೆ.
ಮೆಟ್ರೋ 3ಎ ಹಂತದ ಯೋಜನೆ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದದ ಮಾರ್ಗದಲ್ಲಿ 28 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 22.14 ಕಿ.ಮೀ ಮೇಲ್ಸೇತುವೆ ಹಾಗೂ 14.45 ಕಿ.ಮೀ ಸುರಂಗ ಪಥದಲ್ಲಿ ಸಾಗಲಿದ್ದು, ಈ ಯೋಜನೆಗೆ ಒಟ್ಟು 28,405 ಕೋಟಿ ರೂ. ಅಂದಾಜು ಮಾಡಲಾಗಿದೆ. ಈ ಯೋಜನೆಗೆ 10.01.2025ರಂದು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದ್ದು, 15.01.2025ರಂದು ಕೇಂದ್ರ ಸಚಿವಾಲಯದ ಒಪ್ಪಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸಚಿವಾಲಯದ ಒಪ್ಪಿಗೆ ಬಾಕಿ ಇದ್ದು, ಆದಷ್ಟು ಬೇಗ ಒಪ್ಪಿಗೆ ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
