ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವು ಯಶಸ್ವಿಯಾಗಿದ್ದು, 3ನೇ ದಿನದವರೆಗೆ ಅಂದಾಜು ಗುರಿಗಿಂತ ಹೆಚ್ಚಿನ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗಿದೆ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ರವರು ತಿಳಿಸಿದ್ದಾರೆ.
4 ದಿನಗಳ ಈ ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 1,85,588 (1.85 ಲಕ್ಷ) ಮಕ್ಕಳಿಗೆ ಲಸಿಕೆ ಹಾಕಲು ಅಂದಾಜಿಸಲಾಗಿತ್ತು.
3 ದಿನಗಳಲ್ಲಿ 1, 86,889 (1.86 ಲಕ್ಷ) ಶೇ.100.54 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ನಿಗದಿಪಡಿಸಿದ ಅಂದಾಜು ಗುರಿಗಿಂತ ಹೆಚ್ಚಿನ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತರುಗಳುಗಳಾದ ಕೆ.ರಂಗನಾಥ್, ಹೇಮಂತ್ ಶರಣ್, ಆರೋಗ್ಯ ಅಧಿಕಾರಿ ಶಿವಕುಮಾರ್ ಸೇರಿದಂತೆ, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಎಲ್ಲಾ ಸ್ವಯಂ ಸೇವಾ ಸಂಘ ಸಂಸ್ಥೆಗಳಿಗೆ ಆಯುಕ್ತರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಉಳಿದ ಮಕ್ಕಳಿಗೆ ಲಸಿಕೆ ಹಾಕಿಸಲು ಮನವಿ:
ಪೋಲಿಯೋ ಹಾಕಿಸದೇ ಉಳಿದಿರುವ ಮಕ್ಕಳನ್ನು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸಲು, ಹಾಗೂ ಮನೆಗಳಿಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿಗಳಿಂದ ಲಸಿಕೆ ಹಾಕಿಸಲು ಆಯುಕ್ತರು ಮನವಿ ಮಾಡಿದ್ದಾರೆ.
