ಸಮಗ್ರ ಸುದ್ದಿ

ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗಬೇಕು: ಸಚಿವ ಎಂ.ಸಿ ಸುಧಾಕರ್

Share

ಬೆಂಗಳೂರು:  ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಒಳ್ಳೆಯ ಆರೋಗ್ಯ ಹಾಗೂ ಗುಣಮಟ್ಟದ ಶಿಕ್ಷಣದ ಅವಶ್ಯವಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಬಡವರ ಮಕ್ಕಳಿಗೂ ಗುಣಮಟ್ಟದ ಉನ್ನತ ಶಿಕ್ಷಣದ ಸೌಲಭ್ಯ ಸಿಗುವಂತಾಗಬೇಕು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ್ ಅವರು ಹೇಳಿದರು.

ಬೆಂಗಳೂರು ನಗರ ಜಿಲ್ಲೆಯ ಬಾಗಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣದ ಕಾಲೇಜು ಸ್ಥಾಪನೆಯಾದರಷ್ಟೆ ಸಾಲದು, ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಜ್ಞಾನಾರ್ಜನೆ ನೀಡುವ ಜತೆಗೆ ಬಲವಾದ ಆತ್ಮಸ್ಥೈರ್ಯ ವೃದ್ದಿಸುವ ಮಹತ್ತರ ಜವಬ್ದಾರಿ ಕಾಲೇಜುಗಳ ಮೇಲಿದೆ ಎಂದರು.

ಸರ್ಕಾರವು ಕೌಶಲ್ಯಭರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಜೀಂ ಪ್ರೇಮ್ ಜೀ ನೇತೃತ್ವದಲ್ಲಿ ಪಿಯು ಶಿಕ್ಷಣ ಮುಗಿಸಿ ಪದವಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರಿಗೆ 30 ಸಾವಿರ ಪ್ರೋತ್ಸಾಹ ಧನ ನೀಡಲು ದೀಪಿಕಾ ಯೋಜನೆ ಆರಂಭಿಸಿದೆ. ನಮ್ಮ ಪ್ರತಿಭಾನ್ವಿತ ಮಕ್ಕಳಿಗೆ ವಿದೇಶಿ ಶಿಕ್ಷಣ ಕೊಡುವ ನಿಟ್ಟಿನಲ್ಲಿ ವಿದೇಶಿ ವಿಶ್ವವಿದ್ಯಾಲಯದ ಜತೆಗೂ ಒಡಂಬಡಿಕೆ ಮಾಡಿಕೊಂಡಿದೆ ಎಂದ ಅವರು ಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯವಿರುವ ಜಾಗವನ್ನು ಆದಷ್ಟು ಬೇಗನೆ ನೀಡುವಂತೆ ಕಂದಾಯ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾತನಾಡಿ, ನೂತನ ಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯವನ್ನು ಶೀಘ್ರದಲ್ಲೇ ಒದಗಿಸುವ ಭರವಸೆ ನೀಡಿದ ಅವರು ಸರ್ಕಾರಿ ಸ್ನಾತಕೋತ್ತರ ಪದವಿ ಕಾಲೇಜಿನಿಂದ ಗ್ರಾಮೀಣ ಭಾಗದ ಮಧ್ಯಮ ವರ್ಗ ಹಾಗೂ ರೈತರ ಮಕ್ಕಳು ಕೂಡ ಉನ್ನತ ಶಿಕ್ಷಣ ಓದಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಬಾಗಲೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಸಕ್ತ ವರ್ಷ ಎಂ.ಕಾಂ ಮತ್ತು ಎಂಸಿಎ ಸ್ನಾತಕೋತ್ತರ ಕೋರ್ಸ್ ಆರಂಭವಾಗಿದ್ದು, ಮುಂದಿನ ವರ್ಷದಿಂದ ಬಿಸಿಎ, ಬಿಬಿಎ, ಬಿ.ಕಾಂ ಕೋರ್ಸ್ ಗಳು ಆರಂಭಗೊಳ್ಳುತ್ತವೆ. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರವೇಶ ಪಡೆದು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕಂದಾಯ ಸಚಿವರು ಹೇಳಿದರು.

ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ರಮೇಶ್. ಬಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ಸ್ನಾತಕೋತ್ತರ ಕೇಂದ್ರ ಮಹತ್ವದ ಹೆಜ್ಜೆಯಾಗಿದೆ. ವಿವಿಯಲ್ಲಿ 85 ವೃತ್ತಿಪರ ಪದವಿಗಳು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕೋರ್ಸ್ ಗಳು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ. ರಮೇಶ್. ಬಿ, ಕುಲಸಚಿವರಾದ ನವೀನ್ ಜೋಸೆಫ್. ಎ, ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೋ. ರಮೇಶ್ ಬಿ. ಕುಡೇನಟ್ಟಿ, ವಿತ್ತಾಧಿಕಾರಿಗಳಾದ ಶ್ರೀಮತಿ ವಿಜಯಲಕ್ಷ್ಮೀ. ಎಂ. ವಿ, ವಿವಿಯ ಬಾಗಲೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ.ರಿತಿಕಾ ಸಿನ್ಹಾ, ಬಾಗಲೂರು ಗ್ರಾ.ಪಂ ಅಧ್ಯಕ್ಷರಾದ ಎ. ಕೆಂಪೇಗೌಡ ಸೇರಿದಂತೆ ವಿವಿಯ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಹಾಗೂ ವಿವಿಯ ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.


Share

You cannot copy content of this page