ಸಮಗ್ರ ಸುದ್ದಿ

ಮೂಲಭೂತ ಸೌಲಭ್ಯಗಳಿಂದ ಯಾರು ವಂಚಿತರಾಗಬಾರದು: ಪಲ್ಲವಿ .ಜಿ

Share

ಬೆಂಗಳೂರು: ಪರಿಶಿಷ್ಟ ಜಾತಿಯ ಅಲೆಮಾರಿ  ಕೊರಚ ಮತ್ತು ಕೊರಮ ಸಮುದಾಯದ ಕುಟುಂಬಗಳು ಸರ್ಕಾರ ನೀಡುವ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ  ಅಧ್ಯಕ್ಷರಾದ ಪಲ್ಲವಿ.ಜಿ ಅವರು  ಹೇಳಿದರು.

ಇಂದು ಯಲಹಂಕ ತಾಲ್ಲೂಕಿನ  ಕೊಂಡಪ್ಪ ಬಡಾವಣೆ ಯಲ್ಲಿರುವ  ಚೌಡೇಶ್ವರಿ, ಮಾರಮ್ಮ ದೇವಸ್ಥಾನದ ವಾರ್ಡ್ ನಂ 02 ರಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಕೊರಚ ಮತ್ತು ಕೊರಮ  ಸಮುದಾಯದ ಕುಟುಂಬಗಳ  ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.

ಈ ಪ್ರದೇಶದಲ್ಲಿ ಸುಮಾರು 60 ಕ್ಕಿಂತ ಹೆಚ್ಚು ಕೊರಚ ಮತ್ತು ಕೊರಮ  ಸಮುದಾಯದ ಕುಟುಂಬಗಳಿದ್ದು, ಇವರು ಸುಮಾರು ವರ್ಷಗಳಿಂದ ಕುಡಿಯುವ  ನೀರಿನ  ಸಮಸ್ಯೆ ಎದುರಿಸುತ್ತಿದ್ದಾರೆ. ಇವರಿಗೆ ಮನೆ, ನಿವೇಶನದ ಹಕ್ಕು ಪತ್ರ, ಅಂಗನವಾಡಿ ಕೇಂದ್ರ, ಪಡಿತರ ಚೀಟಿ ಮುಂತಾದ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಅಕಾರಿಗಳಿಗೆ ಸೂಚಿಸಿದರು.

ಅಲೆಮಾರಿ ಮಕ್ಕಳಿಗೆ ಶಿಕ್ಷಣ ಅಗತ್ಯ: 

ಭವ್ಯ ಭಾರತ ಭವಿಷ್ಯವೇ ಮಕ್ಕಳು, ಅವರ ಬಗ್ಗೆ ಕಾಳಜಿ ವಹಿಸಿ, ರಕ್ಷಣೆ ನೀಡಿ, ಶಿಕ್ಷಣ ಕಲ್ಪಿಸುವ ಜವಾಬ್ದಾರಿ ಪ್ರತಿಯೊಬ್ಬರದು. ಮಕ್ಕಳಿಗೆ ವಿದ್ಯೆ ಕಲ್ಪಿಸಿ ಸನ್ಮಾರ್ಗ ತೋರಿಸಬೇಕೆಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ  ಕುಟುಂಬದ ಮಕ್ಕಳಿಗೆ  ಶೇ 10 ರಷ್ಟು ವಸತಿ ಶಾಲೆಗಳಲ್ಲಿ ಪರೀಕ್ಷೆ ಇಲ್ಲದೇ ಪ್ರವೇಶವನ್ನು ಕಲ್ಪಿಸಲಾಗಿದೆ. ಉಚಿತ ಶಿಕ್ಷಣವನ್ನು ನೀಡಲಾಗುತ್ತಿದ್ದೆ. ಇದರ ಸೌಲಭ್ಯವನ್ನು ಪಡೆಯುವಂತೆ ಸಮುದಾಯದವರಿಗೆ ಮಾಹಿತಿ ನೀಡಿದರು.
ಸಮುದಾಯಗಳಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳ ಮಾಹಿತಿಯ ಕೊರತೆ ಇದೆ. ಅವರಿಗೆ ಈ ಸೌಲಭ್ಯಗಳ ಕುರಿತು ಅರಿವು ಮೂಡಿಸಲು  ಜಾಗೃತಿ ಶಿಬಿರವನ್ನು ಆಯೋಜಿಸುವಂತೆ ಸಂಬಂಧಿಸಿದ  ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ  ಕೊರಚ ಮತ್ತು ಕೊರಮ ಸಮುದಾಯದ ಕುಟುಂಬಗಳು  ಎದುರಿಸುತ್ತಿದ್ದ  ಕುಡಿಯುವ ನೀರಿನ ಸಮಸ್ಯೆಯನ್ನು ಸ್ಥಳದಲ್ಲಿಯೇ ಬಗೆಹರಿಸಿ ಪರಿಹಾರ ಒದಗಿಸಿದರು.

ಸಭೆಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳಾದ ಬಿ.ಎಸ್ ಸುಹಾಸ್, ಬೆಂಗಳೂರು ಉತ್ತರ ನಗರ ಪಾಲಿಕೆಯ (ಉತ್ತರ ವಲಯ) ಜಂಟಿ ಆಯುಕ್ತರಾದ ಪಲ್ಲವಿ, ಯಲಹಂಕ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ  ಸುರೇಶ ಅವರು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


Share

You cannot copy content of this page