ಸಮಗ್ರ ಸುದ್ದಿ

ಸಿಐಐಎಲ್ ನಿಂದ ಕನ್ನಡ ವಿದ್ವಾಂಸರಿಗೆ ಪ್ರಶಸ್ತಿ ನೀಡಲು ವಿಳಂಬ ಕೇಂದ್ರ ಸರ್ಕಾರವು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ- ಪುರುಷೋತ್ತಮ ಬಿಳಿಮಲೆ ವಿಷಾದ

Share

ಕನ್ನಡ ಭಾಷೆಯ ಅಧ್ಯಯನ, ಸಂಶೋಧನೆ ಮತ್ತು ಪ್ರಚಾರಕ್ಕಾಗಿ ಮೈಸೂರಿನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನವು ಪ್ರತಿ ವರ್ಷ ನೀಡಬೇಕಾದ ಪ್ರಶಸ್ತಿಗಳನ್ನು ನಿಯಮಿತವಾಗಿ ನೀಡದೆ ಕನ್ನಡ ಭಾಷೆಗೆ ನಿರಂತರವಾಗಿ ಅನ್ಯಾಯವೆಸಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಬಿಳಿಮಲೆ, ಕಳೆದ ವರ್ಷ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ವಿಷಯವನ್ನು ತಾವೇ ಖುದ್ಧಾಗಿ ಚರ್ಚಿಸಿದ್ದು, ಅತಿ ಶೀಘ್ರದಲ್ಲಿ ಈ ಕುರಿತಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂಬ ಭರವಸೆಯನ್ನು ಅವರು ನೀಡಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಫಲಿತಾಂಶ ದೊರಕದಿರುವುದು ಈ ಕೇಂದ್ರದ ನಿಷ್ಕ್ರಿಯತೆಯ ಉದಾಹರಣೆಯಾಗಿದೆ ಎಂದಿದ್ದಾರೆ.

2019ರಲ್ಲಿ ಕಡೆಯದಾಗಿ ಅಧ್ಯಕ್ಷೀಯ, ಮಹರ್ಷಿ ಬಾದರಾಯಣ, ವ್ಯಾಸ ಸಮ್ಮಾನ್ ನಂತಹ ವಿವಿಧ ಪ್ರಶಸ್ತಿಗಳನ್ನು ಸಿಐಐಎಲ್ ನೀಡಿದ್ದು, ಅಲ್ಲಿಂದ ಏಳು ವರ್ಷಗಳು ಕಳೆದರೂ ಇಲ್ಲಿಯವರೆಗೆ ಪ್ರಶಸ್ತಿ ಪ್ರಕ್ರಿಯೆಯನ್ನೇ ಆರಂಭಿಸದಿರುವುದು ಕನ್ನಡ ಸಾಹಿತ್ಯ ಲೋಕದಲ್ಲಿ ಅರ್ಹರಿಲ್ಲವೆನ್ನುವ ತೀರ್ಮಾನಕ್ಕೇನಾದರೂ ಈ ಸಂಸ್ಥೆ ಬಂದಿರಬಹುದೇ ಎನ್ನುವ ಸಂದೇಹವನ್ನು ಮೂಡಿಸುತ್ತಿದೆ.

ಕನ್ನಡ ಸಾಹಿತ್ಯ, ಸಂಶೋಧನಾ ಕ್ಷೇತ್ರವನ್ನು ಈ ರೀತಿ ಅವಗಣಿಸುವ ಮೂಲಕ ಕೇಂದ್ರ ಸರ್ಕಾರವು ಒಕ್ಕೂಟ ತತ್ತ್ವಗಳಿಗೆ ನಿರಂತರವಾಗಿ ಅಗೌರವ ತೋರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ (ಶಿಕ್ಷಣ) ಸಚಿವಾಲಯವು ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.


Share

You cannot copy content of this page