ಸಮಗ್ರ ಸುದ್ದಿ

ತಿರುಪತಿ ತಿರುಮಲಕ್ಕೆ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಭೇಟಿ | 2026 ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ

Share

ತಿರುಪತಿ: ರಾಜ್ಯದಿಂದ ಇಲ್ಲಿಗೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮುಂದಿನ ವರ್ಷದ 2026 ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬುಧವಾರ ಶ್ರೀ ಕ್ಷೇತ್ರ ತಿರುಪತಿ ತಿರುಮಲಕ್ಜೆ ಅಧಿಕಾರಿಗಳ ಜೊತೆ ಖುದ್ದು ಭೇಟಿ ನೀಡಿ ಇಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಎಷ್ಟು ಸಾಧ್ಯವೊ ಅಷ್ಟು ಬೇಗ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಯಾತ್ರೆಗಳಿಗೆ ಅನುಕೂಲ ಕಲ್ಪಿಸಿ ಕೊಡಬೇಕೆಂದು ನಿರ್ದೇಶನ ನೀಡಿದರು.

ತಿರುಮಲದಲ್ಲಿ ಕರ್ನಾಟಕ ಸರ್ಕಾರ ನಿರ್ಮಾಣ ಮಾಡುತ್ತಿರುವ ಮೂರು ಅತಿಥಿ ಗೃಹಗಳು ಹಾಗೂ ಛತ್ರದ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಅವರು, ಕೂಡಲೇ ಸಣ್ಣ ಲೋಪ ದೋಷಗಳನ್ನು ಸರಿಪಡಿಸಿ ಯಾತ್ರಾರ್ಥಿಗಳ ಬಳಕೆಗೆ ಸಿದ್ಧಪಡಿಸಬೇಕೆಂದು ಸೂಚಿಸಿದರು.

ಈಗಾಗಲೇ ಸಾಕಷ್ಟು ವಿಳಂಬವಾಗಿರುವುದರಿಂದ
ತಿರುಪತಿ ತಿರುಮಲಕ್ಕೆ ಬರುವ ಯಾತ್ರೆಗಳಿಗೆ ಅನಾನುಕೂಲ ಆಗಲಿದೆ ಪ್ರತಿಯೊಬ್ಬರು ಹೆಚ್ಚಿನ ದರದಲ್ಲಿ ಹಣ ನೀಡಿ ಖಾಸಗಿ ಕೊಠಡಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಹೀಗಾಗಿ ಅತಿಥಿಗೃಹಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕೆಂದು ಹೇಳಿದರು.

ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಟಿಟಿಟಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ರಾಮಲಿಂಗ ರೆಡ್ಡಿ ಅವರು ಗುಣಮಟ್ಟದ ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ರಾಮಲಿಂಗಾ ರೆಡ್ಡಿ ಅವರು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ತಿರುಮಲದಲ್ಲಿನ ಭೂಮಿಯ ಲೀಸ್ ಗೆ ಪಡೆಯುವುದು,
ಟಿಟಿಡಿ ವಾಪಸ್ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್ ಪರ್ಯಾಯ ಭೂಮಿ ಒದಗಿಸುವ ಕುರಿತು ಚರ್ಚೆ ನಡೆಸಲಾಯಿತು.

ತಿರುಮಲದಲ್ಲಿ ಟಿಟಿಡಿ ಕೈಗೊಂಡ ನಾಗರಿಕ ಕಾಮಗಾರಿಗಳ ಮೇಲೆ ವಿಧಿಸಲಾಗುವ ಸೆಂಟೇಜ್ ಶುಲ್ಕಕ್ಕೆ ವಿನಾಯಿತಿ ನೀಡುವುದು,ತಿರುಮಲದಲ್ಲಿರುವ ಎಲ್ಲಾ ಅತಿಥಿ ಗೃಹಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸುವುದರ ಬಗ್ಗೆಯೂ ಮಾತುಕತೆ ನಡೆಸಿದರು.

ಪ್ರೀಫ್ಯಾಬ್ರಿಕೇಟೆಡ್ ನಾಗರಿಕ ರಚನೆಗಳಿಂದ ಉಂಟಾಗುವ ನೀರು ಸೋರಿಕೆ ಸಮಸ್ಯೆಯನ್ನು ತಡೆಯುವುದು. ಎಕ್ಸ್ಹಾಸ್ಟ್ ಡಕ್ಟ್‌ಗಳಿಗೆ ಸೂಕ್ತ ವಾತಾಯನ ವ್ಯವಸ್ಥೆ ಒದಗಿಸುವುದಂತೆ ಸೂಚನೆ ನೀಡಿದರು.

ಎಲ್ಲಾ ಸ್ನಾನಗೃಹಗಳಲ್ಲಿ ಇರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಿಸುವುದು,ಛತ್ರಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಿದರು.

HT ಲೈನ್ ಅನುಮತಿ ಪಡೆಯಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು,ಹೊರಾಂಗಣ ಪೋರ್ಟಿಕೋದಲ್ಲಿರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಿಸುವುದು,ಕರ್ನಾಟಕದಿಂದ ಆಗಮಿಸುವ ಭಕ್ತರಿಗೆ ದರ್ಶನ ಸೌಲಭ್ಯ ಒದಗಿಸಬೇಕು ಎಂದು ಸಚಿವ ರಾಮಲಿಂಗ ರೆಡ್ಡಿ ಅವರು ಸ್ಪಷ್ಟ ಸೂಚನೆ ನೀಡಿದರು.

ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಪರಿಷತ್ ಸದಸ್ಯ ಶರವಣ ತಿರುಪತಿ ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ನ್ಯೂನತೆಗಳಿರುವುದಾಗಿ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಾವೇ ಖುದ್ದು ಭೇಟಿ ನೀಡಿ ಪರಿವೀಕ್ಷಣೆ ನಡೆಸುವುದಾಗಿ ಸದನದಲ್ಲಿ ಆಶ್ವಾಸನೆ ನೀಡಿದ್ದರು.

ಅದರಂತೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿರುಮಲಕ್ಕೆ ಭೇಟಿ ನೀಡಿ, ಟಿಟಿಡಿ ಅಧಿಕಾರಿಗಳೊಂದಿಗೆ ತಿರುಮಲದಲ್ಲಿರುವ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು ಹಾಗೂ ಛತ್ರದ ಪರಿಶೀಲನೆ ನಡೆಸಿದರು.

ಈ‌ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಆಯುಕ್ತರಾದ ಶರತ್, ಟಿಟಿಡಿ ಟ್ರಸ್ಟ್ ಸದಸ್ಯ ದರ್ಶನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Share

You cannot copy content of this page