ಸಮಗ್ರ ಸುದ್ದಿ

ಪಾಲಿಕೆಯ ಆಯುಕ್ತರಿಂದ 3 ಕಿ.ಮೀ ಪಾದಯಾತ್ರೆ: ಸ್ಥಳದಲ್ಲೇ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರಕ್ಕೆ ಸೂಚನೆ​

Share


ಬೆಂಗಳೂರು: ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಮತ್ತು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರು, ನಾಗರೀಕರೊಡನೆ ಇಂದು ಬ್ರಿಗೇಡ್ ಮಿಲೇನಿಯಂನಿಂದ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಸುಮಾರು 3 ಕಿಲೋಮೀಟರ್‌ಗಳ ಸುದೀರ್ಘ ಪಾದಯಾತ್ರೆ ನಡೆಸಿದರು. ಸ್ಥಳೀಯ ಶಾಸಕರಾದ ಎಂ. ಕೃಷ್ಣಪ್ಪ ಅವರು ಪಾದಯಾತ್ರೆಗೆ ಜೊತೆಗೂಡಿದ್ದು ವಿಶೇಷವಾಗಿತ್ತು.

​ಈ ಪಾದಯಾತ್ರೆಯ ಉದ್ದಕ್ಕೂ ಆರ್‌ಬಿಐ ಬಡಾವಣೆ, ಈಶ್ವರ ಬಡಾವಣೆ, ಸದಾನಂದಪ್ಪ ಬಡಾವಣೆ ಹಾಗೂ ಗಣಪತಿಪುರದ ನೂರಾರು ನಿವಾಸಿಗಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಆಯುಕ್ತರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ಪಾದಯಾತ್ರೆಯ ಪ್ರಮುಖ ನಿರ್ಧಾರಗಳು ಮತ್ತು ಕಟ್ಟುನಿಟ್ಟಿನ ಕ್ರಮಗಳು:

ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿದ್ದ ಹೋಟೆಲ್‌ಗಳಿಗೆ ಸ್ಥಳದಲ್ಲೇ ₹5,000 ದಂಡ ವಿಧಿಸಲಾಯಿತು. ಫುಟ್‌ಪಾತ್ ಮೇಲೆ ಕಟ್ಟಡ ಸಾಮಗ್ರಿ ಸುರಿದವರ ವಿರುದ್ಧ ದಂಡ ವಿಧಿಸಲು ಮತ್ತು ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಆಯುಕ್ತರು ಆದೇಶಿಸಿದರು.

​ರಸ್ತೆ ಮತ್ತು ಫುಟ್‌ಪಾತ್ ಅಭಿವೃದ್ಧಿ:
​2015 ರಿಂದ ಡಾಂಬರೀಕರಣವಾಗದ ಈಶ್ವರ ಬಡಾವಣೆ ಹಾಗೂ ಆರ್‌ಬಿಐ ಬಡಾವಣೆಗಳಲ್ಲಿ ತಕ್ಷಣವೇ ಅಸ್ಫಾಲ್ಟಿಂಗ್ (ಡಾಂಬರೀಕರಣ) ಮಾಡಲು ಸೂಚಿಸಲಾಯಿತು.

​ಧೂಳು ನಿಯಂತ್ರಿಸಲು ಕಾಮಗಾರಿ ನಡೆದಿರುವ ರಸ್ತೆಗಳಿಗೆ ನೀರು ಸಿಂಪಡಿಸಲು ನಿರ್ದೇಶನ ನೀಡಿದರು.ಟ್ರಾಫಿಕ್ ಸಮಸ್ಯೆ ನಿವಾರಿಸಲು ಚುಂಚಘಟ್ಟ ರಸ್ತೆ ಮತ್ತು 5ನೇ ಮುಖ್ಯ ರಸ್ತೆಯ ಅಗಲೀಕರಣಕ್ಕೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

​ನೈರ್ಮಲ್ಯ ಮತ್ತು ಮೂಲಭೂತ ಸೌಕರ್ಯ:

ಸದಾನಂದಪ್ಪ ಬಡಾವಣೆಯಲ್ಲಿ ಚರಂಡಿ ಹೂಳೆತ್ತುವುದು, ಬೀರೇಶ್ವರ ನಗರದ ಒಳಚರಂಡಿ ಸಮಸ್ಯೆ ಮತ್ತು ಬಿಡಬ್ಲ್ಯೂಎಸ್ಎಸ್‌ಬಿ (BWSSB) ಪೈಪ್‌ಲೈನ್ ದುರಸ್ತಿಗೆ ಅಧಿಕಾರಿಗಳಿಗೆ ಗಡುವು ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೌರಕಾರ್ಮಿಕರು, ಕಸದ ಆಟೋ ಮತ್ತು ಲಾರಿಗಳನ್ನು ನಿಯೋಜಿಸಲು ಸೂಚಿಸಿದರು.

ಕೆರೆ ಮತ್ತು ಜಾಗದ ಅತಿಕ್ರಮಣ ತೆರವು:

ಗಣಪತಿಪುರ ಕೆರೆ ಅತಿಕ್ರಮಣ ಮತ್ತು ಕನಕಪುರ ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿ ಇರುವ ಅತಿಕ್ರಮಣಗಳನ್ನು ಗುರುತಿಸಲು ಸರ್ವೇ ನಡೆಸಲು ಆದೇಶಿಸಲಾಯಿತು. ಮಾರುತಿ ಮತ್ತು ಹುಂಡೈ ಶೋರೂಂಗಳು ಸೆಟ್‌ಬ್ಯಾಕ್ ನಿಯಮ ಉಲ್ಲಂಘಿಸಿರುವುದನ್ನು ಪರಿಶೀಲಿಸಲು ಸೂಚಿಸಲಾಯಿತು.

ರಸ್ತೆ ವಿಭಜಕಗಳಲ್ಲಿ ಹೂವಿನ ಗಿಡಗಳನ್ನು ನೆಡುವುದು ಮತ್ತು ಅಪಾಯಕಾರಿ ಒಣಗಿದ ಮರದ ಕೊಂಬೆಗಳನ್ನು ಗುರುತಿಸಿ ಕತ್ತರಿಸಲು ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

​ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕರಾದ ಎಂ. ಕೃಷ್ಣಪ್ಪ ಅವರು ಮಾತನಾಡಿ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಾಗಿ ಜನರ ಮನೆ ಬಾಗಿಲಿಗೆ ಬಂದಾಗ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಯುತ್ತವೆ ಎಂದರು. ನೀಡಲಾದ ಎಲ್ಲಾ ಸೂಚನೆಗಳ ಪ್ರಗತಿಯನ್ನು 15 ದಿನಗಳ ನಂತರ ಮರುಪರಿಶೀಲಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಪಾಲಿಕೆ ವತಿಯಿಂದ ಆಸ್ತಿ ತೆರಿಗೆ ಪರಿಷ್ಕರಣೆ ಮತ್ತು ಬಾಕಿ ವಸೂಲಾತಿ ಅಭಿಯಾನ:

ಪಾಲಿಕೆ ವತಿಯಿಂದ ಆಸ್ತಿ ತೆರಿಗೆ ಪರಿಷ್ಕರಣೆ ಮತ್ತು ಬಾಕಿ ವಸೂಲಾತಿ ಅಭಿಯಾನದ ಅಂಗವಾಗಿ ಇಂದು ಜಯನಗರದ 4ನೇ ಬ್ಲಾಕ್, 11ನೇ ಮುಖ್ಯರಸ್ತೆಯಲ್ಲಿ ಪರಿಷ್ಕೃತ ಆಸ್ತಿ ತೆರಿಗೆ ಹಾಗೂ ತೆರಿಗೆ ಪಾವತಿಸದವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ತೆರಿಗೆ ಪರಿಷ್ಕರಣೆ: ಆಸ್ತಿ ತೆರಿಗೆಯನ್ನು ನಿಯಮಾನುಸಾರ ಮರುಪರಿಶೀಲಿಸಿ, ನಿಖರವಾದ ತೆರಿಗೆಯನ್ನು ನಿಗದಿಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು.

ಬಾಕಿ ವಸೂಲಾತಿ: ದೀರ್ಘಕಾಲದಿಂದ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಂದ ತೆರಿಗೆ ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಯಿತು.

ಕಾರ್ಯಾಚರಣೆ ವೇಳೆ ಜಂಟಿ ಆಯುಕ್ತರಾದ ಶ್ರೀಮತಿ ಮಧು, ಉಪ ಆಯುಕ್ತರಾದ ಶ್ರೀಮತಿ ಗಗನ ಹಾಗೂ ಕಂದಾಯ ಅಧಿಕಾರಿಗಳ ನೇತೃತ್ವದ ತಂಡವು ಜಯನಗರದಲ್ಲಿ ಖುದ್ದು ಭೇಟಿ ನೀಡಿ ಆಸ್ತಿಗಳ ಪರಿಶೀಲನೆ ನಡೆಸಿದರು.


Share

You cannot copy content of this page