ಸಮಗ್ರ ಸುದ್ದಿ

ಮಡಿವಾಳ ಕೆರೆಯಲ್ಲಿ ಕಳೆ ತೆಗೆಯುವ ಯಂತ್ರದ ಪ್ರಾಯೋಗಿಕ ಚಾಲನೆ | ಪ್ರವಾಸೋದ್ಯಮ ಸ್ಥಳವನ್ನಾಗಿಸಲು ಸಾಧ್ಯತೆ ಬಗ್ಗೆ ಪರಿಶೀಲಿಸಿ ಕ್ರಮವಹಿಸಿ – ಮಹೇಶ್ವರ್ ರಾವ್

Share

ಬೆಂಗಳೂರು: ಮಡಿವಾಳ ಕೆರೆಯಲ್ಲಿ ಕಳೆ ತೆಗೆಯುವ ಯಂತ್ರಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಇತರೆ ಕೆರೆಗಳಲ್ಲಿಯೂ ಬಳಸಿಕೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಮಡಿವಾಳ ಕೆರೆಯಲ್ಲಿ ಕಳೆ ತೆಗೆಯುವ ಯಂತ್ರಕ್ಕೆ ಪ್ರಾಯೋಗಿಕ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಜಲಕಳೆ ತೆರವುಗೊಳಿಸುವ ಉದ್ದೇಶದಿಂದ ಹೊಸದಾಗಿ ಅತ್ಯಾಧುನಿಕ ಕಳೆ ತೆಗೆಯುವ ಯಂತ್ರವನ್ನು ಖರೀದಿಸಲಾಗಿದೆ. ಈ ಯಂತ್ರವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು, ಅವಶ್ಯಕತೆಗನುಗುಣವಾಗಿ ಕೆರೆಗಳಲ್ಲಿ ಕಳೆ ತೆಗೆಯುವ ಮೂಲಕ ಕೆರೆಗಳನ್ನು ಸ್ವಚ್ಛವಾಗಿ ನಿರ್ವಹಿಸಲು ಕ್ರಮವಹಿಸುವಂತೆ ಸೂಚಿಸಿದರು.

ಅತ್ಯಾಧುನಿಕ ಕಳೆ ತೆಗೆಯುವ ಯಂತ್ರ:

ರುದ್ರ ಆಕ್ವಾ ಮ್ಯಾಕ್ಸ್ ಎಂಬ ಅತ್ಯಾಧುನಿಕ ಕಳೆ ತೆಗೆಯುವ ಯಂತ್ರವನ್ನು ರೂ.1.28 ಕೋಟಿ ವೆಚ್ಚದಲ್ಲಿ ಪಾಲಿಕೆಯು ಖರೀದಿಸಿದೆ. ಈ ಯಂತ್ರವು 5 ಟನ್‌ಗಳವರೆಗೆ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, 4 ರಿಂದ 6 ಮೀಟರ್ ಕಾರ್ಯ ಅಗಲವಿದೆ. ಇದರೊಂದಿಗೆ ಲೈವ್ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ, ಸುರಕ್ಷತಾ ಸೆನ್ಸಾರ್‌ಗಳು ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಂತ್ರ ಎಲ್ಲಿ ಮತ್ತು ಎಷ್ಟು ಸಮಯ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನಿಯಂತ್ರಣ ಕೊಠಡಿಯಿಂದ ಮೇಲ್ವಿಚಾರಣೆ ಮಾಡಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

3 ವರ್ಷಗಳ ಕಾಲ ಯಂತ್ರ ನಿರ್ವಹಣೆ:

ಈ ಯಂತ್ರವನ್ನು ಆಟೋಕ್ರಸಿ ಮಿಷಿನರಿ ಸಂಸ್ಥೆಯ ವತಿಯಿಂದ 3 ವರ್ಷಗಳ ಕಾಲ ನಿರ್ವಹಿಸಲಾಗುತ್ತದೆ. ಈ ಅವಧಿಯಲ್ಲಿ ಯಂತ್ರದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೂ ಸಂಸ್ಥೆಯೇ ಸಂಪೂರ್ಣ ನಿರ್ವಹಣೆ ವಹಿಸಿಕೊಳ್ಳಲಿದೆ. ಈ ಯಂತ್ರದ ಬಳಕೆಯಿಂದ ಜಿಬಿಎ ವ್ಯಾಪ್ತಿಯಲ್ಲಿರುವ ಕೆರೆಗಳ ನಿರ್ವಹಣಾ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಾಗಲಿದ್ದು, ಜಲಕಳೆ ತೆರವು ಕಾರ್ಯಕ್ಷಮತೆ, ನೀರಿನ ಹರಿವು ಹಾಗೂ ಕೆರೆಗಳ ಸಮಗ್ರ ಪರಿಸರ ಆರೋಗ್ಯದಲ್ಲಿ ಮಹತ್ವದ ಸುಧಾರಣೆ ಸಾಧ್ಯವಾಗಲಿದೆ.

ಅಭಿವೃದ್ಧಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ:

ಮಡಿವಾಳ ಕೆರೆಯನ್ನು ರೂ.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ವಾಯು ವಿಹಾರ ಮಾರ್ಗ ಅಭಿವೃದ್ಧಿ, ತೂಬುಗಳ ನಿರ್ಮಾಣ, ಮಕ್ಕಳ ಆಟದ ಪ್ರದೇಶ, ಬೀದಿ ದೀಪಗಳ ಅಳವಡಿಕೆ, ಶೌಚಾಲಯ, ಬ್ರಿಡ್ಜ್ ಕಾಮಗಾರಿ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಕಾಮಗಾರಿಗಳಿಗೆ ವೇಗ ನೀಡುವ ಮೂಲಕ ಅವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಸೋದ್ಯಮ ಸ್ಥಳವನ್ನಾಗಿಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸಿ:

ಮಡಿವಾಳ ಕೆರೆಯಲ್ಲಿ ಈ ಹಿಂದೆ ಬೋಟಿಂಗ್ ವ್ಯವಸ್ಥೆ ಇತ್ತು. ಅದು ಈಗ ಸ್ಥಗಿತಗೊಂಡಿದೆ. ಬೋಟಿಂಗ್ ಅನ್ನು ಮರುಪ್ರಾರಂಭಿಸುವುದು ಹಾಗೂ ಮಡಿವಾಳ ಕೆರೆಯನ್ನು ಪ್ರವಾಸೋದ್ಯಮ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವ ಸಾಧ್ಯತೆ ಇರುವುದೇ ಎಂಬುದನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿವಾಳ ಕೆರೆ ಬಂಡ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿ:

ಮಡಿವಾಳ ಕೆರೆ ಬಂಡ್ ರಸ್ತೆಯ ಒಂದು ಭಾಗದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ತೆರೆಯಲಾಗಿದೆ. ಇನ್ನೊಂದು ಭಾಗದಲ್ಲಿ, ಕೆರೆ ಕೋಡಿ ಭಾಗ (ಮಡಿವಾಳ ಬಸ್ ನಿಲ್ದಾಣ) ದಲ್ಲಿ ಬ್ರಿಡ್ಜ್ ನಿರ್ಮಾಣ ಅಗತ್ಯವಿದ್ದು, ಈ ಸಂಬಂಧ ಕೂಡಲೆ ಬ್ರಿಡ್ಜ್ ನಿರ್ಮಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿವಾಳ ಕೆರೆ ದೋಬಿ ಘಾಟ್ ಬಳಿ ರಸ್ತೆಬದಿಯಲ್ಲಿ ಕಸ ಹಾಕುತ್ತಿರುವುದನ್ನು ಗಮನಿಸಿ, ಈ ಪ್ರದೇಶದಲ್ಲಿ ಮತ್ತೆ ಕಸ ಹಾಕದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ರಾಜಕಾಲುವೆಯಿಂದ ಹೂಳೆತ್ತಿ ಸ್ವಚ್ಛವಾಗಿಟ್ಟುಕೊಳ್ಳಲು ನಿರ್ದೇಶಿಸಿದರು.

ಕೆರೆಯಲ್ಲಿ ಹೂಳೆತ್ತುವ ಸಲುವಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ ಅವರು,ಮಡಿವಾಳ ಬಸ್ ನಿಲ್ದಾಣ (ಕೆರೆ ಕೋಡಿ–2) ಪ್ರದೇಶದಲ್ಲಿ ಮಳೆಗಾಲಕ್ಕೂ ಮುಂಚಿತವಾಗಿ ತೂಬು ನಿರ್ಮಾಣ ಮಾಡಲು ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page