ಬೆಂಗಳೂರು: ಗ್ರಾಹಕರನ್ನು ವಂಚನೆ ಮಾಡುವವರಿಗೆ ಪರಿವರ್ತನೆಗೆ ಅವಕಾಶ ನೀಡಬೇಕು. ಅವರು ಬದಲಾಗದಿದ್ದರೆ ಕಠಿಣ ಶಿಕ್ಷೆ ವಿಧಿಸಬೇಕು. ಇದರಿಂದ ಮೋಸ ಹೋಗುವ ಗ್ರಾಹಕರನ್ನು ರಕ್ಷಣೆ ಮಾಡಲು ಸಾಧ್ಯ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವರಾದ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಇಂದು ಕಬ್ಬನ್ ಉದ್ಯಾನವನದ ಸರ್ಕಾರಿ ನೌಕರರ ಸಂಘದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025ರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು, ಗ್ರಾಹಕರಿಗೆ ಸಂಬಂಧಿಸಿದ ಬೇರೆ ಬೇರೆ ವಿಷಯಗಳ ಕುರಿತು ರಾಜ್ಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಿ ಗ್ರಾಹಕರ ಹಕ್ಕುಗಳ ಸಂರಕ್ಷಣೆ ಕುರಿತು, ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಹಾಗೂ ಬಿಲ್ಲು ಮತ್ತು ರಸೀದಿಗಳನ್ನು ಕಡ್ಡಾಯವಾಗಿ ಪಡೆಯುವ ಬಗ್ಗೆ ಅರಿವು ಮೂಡಿಸಬೇಕು ಎಂದರು.
ರಾಜ್ಯದಲ್ಲಿ ಇತ್ತೀಚೆಗೆ ಸೈಬರ್ ಅಪರಾದಗಳು ಹೆಚ್ಚಾಗಿದ್ದು, ಇದ್ದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಹಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು. ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು 2,55,466 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, 7,394 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಇದು ಸಂತೋಷದ ವಿಷಯವಾಗಿದೆ. ಗ್ರಾಹಕರು ಮೊದಲು ಕೋರ್ಟಿಗೆ ಅಲೆದು ಅಲೆದು ಕಷ್ಟಪಡುತ್ತಿದ್ದರು. ಆದಷ್ಟು ಶೀಘ್ರವಾಗಿ 34 ಮುಖ್ಯ ನ್ಯಾಯಾಧೀಶರುಗಳ ಆಯ್ಕೆ ಪ್ರಕ್ರಿಯೆ ಮುಗಿದರೆ ಗ್ರಾಹಕರಿಗೆ ನ್ಯಾಯ ದೊರಕಿಸಲು ಅನಕೂಲವಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಹಾಗೂ ನ್ಯಾಯಾಧೀಶರಾದ ಟಿ.ಜಿ.ಶಿವಶಂಕರೇಗೌಡ ಅವರು ಮಾತನಾಡಿ, ಈ ವರ್ಷ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು “ಡಿಜಿಟಲ್ ನ್ಯಾಯದ ಮೂಲಕ ಪರಿಣಾಮಕಾರಿ ಮತ್ತು ತ್ವರಿತ ವಿಲೇವಾರಿ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.
ನಾವು ಇಂದು ಡಿಜಿಟಲ್ ಯುಗದಲ್ಲಿದ್ದೇವೆ.
ಪತ್ರಿಯೊಬ್ಬರು ಆನ್‍ಲೈನ್‍ನಲ್ಲಿ ಪರಿಣಿತಿ ಹೊಂದಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್ ಬಳಸುವ ದೇಶ ಭಾರತ ದೇಶ ಎಂದರು.1986ರ ಹಿಂದಿನ ಕಾಲದಿಂದಲೂ ಗ್ರಾಹಕರ ಬಗ್ಗೆ ಯೋಜನೆ ಇದ್ದವು. ಆಗ ಮೋಸ ಮಾಡುವ ಜನರು ಕಡಿಮೆ ಇದ್ದರು. ಆದರೆ ಈಗ ಗ್ರಾಹಕರಿಗೆ ಮೋಸ ಮಾಡುವುದೇ ಆಜನ್ಮಸಿದ್ದ ಹಕ್ಕು ಎಂದು ಅಂದು ಕೊಂಡಿದ್ದಾರೆ. ಕೊಟ್ಟ ಹಣಕ್ಕೆ ಮೌಲ್ಯಯುತ ವಸ್ತು ಸಿಗದಿದ್ದಾಗ ಪರಿಹಾರ ಒದಗಿಸುವುದು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಉದ್ದೇಶವಾಗಿದೆ. ಇತ್ತೀಚೆಗೆ ಆರೋಗ್ಯ ವಿಷಯದಲ್ಲಿಯೂ ವೈದ್ಯರು ನಿರ್ಲಕ್ಷವಹಿಸುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಅವರು ಮಾತನಾಡಿ, ಗ್ರಾಹಕ ಎಂದರೆ ಅನಪೇಕ್ಷಿತ ವ್ಯಕ್ತಿ ಅಲ್ಲ. ಆತ ನಮ್ಮಲ್ಲಿಗೆ ಬರುವ ಗೌರವಾನ್ವಿತ ವ್ಯಕ್ತಿ. ಆತ ನಮ್ಮಿಂದ ಉಪಕಾರ ಬಯಸುವುದಿಲ್ಲ. ಆತನ ಭೇಟಿ ನಮಗೆ ಸೇವೆಯ ಅವಕಾಶ ಕೊಡುತ್ತದೆ” ಎಂದು ಗ್ರಾಹಕರ ಕುರಿತು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ಗ್ರಾಹಕರು ಅನ್ಯಾಯವಾದಾಗ ಕೇಳಬೇಕು. ಪ್ರತಿಯೊಬ್ಬರು ಪ್ರಶ್ನೆ ಮಾಡಬೇಕು. ಜನರ ಅನ್ನ ಜನರಿಗೆ ತಲುಪಿಸುವುದು ನಮ್ಮ ಹಕ್ಕು. ಗ್ರಾಹಕರು ಅವರ ಹಕ್ಕಿನ ಬಗ್ಗೆ ತಿಳಿದುಕೊಳ್ಳಬೇಕು. ಗ್ರಾಹಕರು ಜಾಗ್ರತೆ ವಹಿಸಿದಾಗ ವಂಚನೆಗೆ ಅವಕಾಶವಿರುವುದಿಲ್ಲ. ಗ್ರಾಹಕರ ಹಕ್ಕುಗಳ ಜೊತೆಗೆ ಕರ್ತವ್ಯವನ್ನು ಅರಿತಿರಬೇಕು ಎಂದರು.
ಅಪರ ಉಪನಿರ್ದೇಶಕ ಪಾರ್ಥರಾಜು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಗ್ರಾಹಕರ ಹಕ್ಕುಗಳು, ಕರ್ತವ್ಯಗಳು ಮತ್ತು ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ. 1986 ಡಿಸೆಂಬರ್ 24 ರಂದು ಭಾರತ ಸರ್ಕಾರವು ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ದಿನವನ್ನು ರಾಷ್ಟ್ರೀಯ ಗ್ರಾಹಕ ದಿನವೆಂದು ಆಚರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಲ್ಲಿ ಗ್ರಾಹಕ ಅರಿವು ಮೂಡಿಸಲು ಆಯೋಜಿಸಲಾಗಿದ್ದ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಭಾರ ಆಯುಕ್ತರಾದ ಶ್ರೀಮತಿ ಎಂ.ಕನಗವಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ.ಜಗದೀಶ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕ ಎಂ.ಎಸ್.ಎನ್.ಬಾಬು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
