ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೂತನ ಲ್ಯಾಬ್ ಪ್ರಾರಂಭಕ್ಕೆ ಎಲ್ಲ ಉಪಕರಣ ಖರೀದಿಸಲಾಗಿದ್ದು ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ. ಇದರಿಂದ ಸಿರಸಿ, ಸಿದ್ದಾಪುರ ಭಾಗದ ಜನರಿಗೆ ಹೆಚ್ಚು ಉಪಯೋಗ ಆಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಕಾಸಸೌಧದಲ್ಲಿಂದು ಮಂಗನ ಕಾಯಿಲೆ ತಡೆ ಮತ್ತು ಮುನ್ನೆಚ್ಚರಿಕೆ ಕುರಿತು ಆರೋಗ್ಯ ಇಲಾಖೆ ಆಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಸಚಿವರು, ಶಿವಮೊಗ್ಗದಲ್ಲಿ ಒಂದು ಕೆಎಫ್ ಡಿ ಲ್ಯಾಬ್ ಕೆಲಸ ಮಾಡುತ್ತಿದ್ದು, ಒತ್ತಡ ಹೆಚ್ಚಾಗಿರುವುದರಿಂದ ಬೇಗ ರೋಗವನ್ನು ಗುರುತಿಸಲು ಮತ್ತು ಸಾವಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಇನ್ನೊಂದು ಪರೀಕ್ಷಾ ಲ್ಯಾಬ್ ನಿಂದ ಸಹಕಾರಿ ಆಗಲಿದೆ.
ಮಂಗನ ಕಾಯಲೆ ಎಂದು ಕರೆಸಿಕೊಳ್ಳುವ ಈ ಕಾಯಿಲೆ ಪ್ರತಿ ವರ್ಷ ಅಕ್ಟೋಬರ್ ನಿಂದ ಜೂನ್ ವರೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಕಂಡುಬರುವ ಈ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸನ್ನಧ್ದವಾಗಿದೆ. ಸರಿಯಾದ ರೀತಿಯ ತಪಾಸಣೆಯನ್ನು ನಿಯಮಿತವಾಗಿ ಮಾಡಲಾಗುತ್ತಿದೆ.
ಈವರೆಗೆ ಶಿವಮೊಗ್ಗ -1163, ಚಿಕ್ಕಮಗಳೂರು- 124, ಉತ್ತರ ಕನ್ನಡ- 368, ಉಡುಪಿ- 12 ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣೆ ನಡೆಸಿದ್ದು, 13 ಜನರಿಗೆ ಕಾಯಿಲೆ ಪತ್ತೆಯಾಗಿದ್ದು, ಎಲ್ಲರಿಗೂ ಸರಿಯಾದ ಚಿಕಿತ್ಸೆ ನೀಡಿ ಗುಣಮುಖರಾಗಿದ್ದಾರೆ. ಕೆಎಂಸಿ ಮಣಿಪಾಲ್, SIMS ಶಿವಮೊಗ್ಗ, KRIMS ಕಾರವಾರ ಇವುಗಳನ್ನು ರೆಫೆರಲ್ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ.
ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ತರಬೇತಿಗಳನ್ನು ಸಹ ನೀಡಲಾಗಿದ್ದು, ತೀರ್ಥಹಳ್ಳಿ, ಸಾಗರ, ಸಿದ್ದಾಪುರ, ಹೊನ್ನಾವರ, ಕೊಪ್ಪ, ಎನ್ ಆರ್ ಪುರ ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರೋಗದ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದ ಗಣಮುಖರಾದವರನ್ನು ಮುಂದಿನ 21 ದಿನಗಳ ಕಾಲ ಆರೋಗ್ಯ ಇಲಾಖೆ ಸತತ ತಪಾಸಣೆ ಮಾಡುತ್ತದೆ. ಎಲ್ಲ KFD ರೋಗಿಗಳಿಗೆ ಉಚಿತವಾಗಿ ಅಂಬುಲನ್ಸ್ ಮತ್ತು ಸಂಪೂರ್ಣ ಚಿಕಿತ್ಸೆ ನೀಡಲಾಗುವುದು.
ಈ ಬಾರಿ ಒಂದು ಸಾವು ಸಹ ಉಂಟಾಗಬಾರದು ಎನ್ನುವ ಕಾರಣಕ್ಕೆ ಔಷಧ, ವೈದ್ಯಕೀಯ ಸಿದ್ಧತೆ ಎಲ್ಲವನ್ನೂ ಈಗಲೇ ಮಾಡಲಾಗುತ್ತಿದೆ. ICMR ಹೊಸ ವಾಕ್ಸಿನ್ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ. ಇನ್ನೊಂದು ವರ್ಷದಲ್ಲಿ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗಬಹುದು ಎಂದರು.
