ಬೆಂಗಳೂರು : ಆಯುರ್ವೇದ ಮತ್ತು ಯೋಗ ರೋಗ ಬರದಂತೆ ತಡೆಯುವ ಒಂದು ಜೀವನಕ್ರಮವಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ವೈಜ್ಞಾನಿಕ ತಳಹದಿಯಲ್ಲಿ ಇವುಗಳನ್ನು ರೂಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ
Ayurveda World Summit ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಯುರ್ವೇದ ಮತ್ತು ಯೋಗ ಇವೆರಡೂ ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯಕರವಾಗಿ ಬದುಕಲು ಅವಶ್ಯಕವಾಗಿದೆ. ಯಾಕೆಂದರೆ ಇಂದು ನಾವು ಅಸಾಂಕ್ರಾಮಿಕ ರೋಗಗಳಿಂದಲೇ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದೇವೆ. ಅದಕ್ಕೆ ಕಾರಣ ಬದಲಾದ ಆಹಾರದ ಕ್ರಮ, ಒತ್ತಡದ ಜೀವನ ಶೈಲಿ, ದೈಹಿಕ ವ್ಯಾಯಾಮದ ಕೊರತೆ. ಮಾನಸಿಕ ಒತ್ತಡ ನಿರ್ವಹಣೆ ಬಹುದೊಡ್ಡ ತೊಡಕಾಗಿ ಸಮಾಜವನ್ನು ಕಾಡುತ್ತಿದೆ ಎಂದು ಹೇಳಿದರು.
ಆಯುರ್ವೇದ ಒಂದು ಆಹಾರ ಪದ್ಧತಿ, ಬದುಕಿನ ರೀತಿಯಾಗಿದೆ. ಆಯುರ್ವೇದದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಲಿ, ಅದರಲ್ಲಿಯೂ ವಿಶೇಷ ತಜ್ಞ ವೈದ್ಯರು ಬರಲಿ. ಉದಾಹರಣೆಗೆ ಇಂದು ನಾವು ಆದುನಿಕ ಚಿಕಿತ್ಸಾ ವಿಧಾನದಲ್ಲಿ ಕಿಡ್ನಿ ತಜ್ಞರು ಅಂದಾಗ ಸುಲಭವಾಗಿ ನಂಬುತ್ತೇವೆ. ಹಾಗೆಯೇ ಆಯುರ್ವೇದದಲ್ಲಿಯೂ ಸರಿಯಾದ ಮಾನದಂಡದಲ್ಲಿ ವಿಶೇಷ ತಜ್ಞರಿಗೆ ಸರ್ಟಿಫಿಕೇಟ್ ನೀಡುವ ಪದ್ಧತಿ ಬರಬೇಕಾಗಿದೆ. ದೊಡ್ಡಮಟ್ಟದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ದೇಶದ ಬೇರೆ ಬೇರೆ ಭಾಗದಿಂದ ಆಯುರ್ವೇದ ವ್ಯೆದ್ಯರು ಆಗಮಿಸಿದ್ದಾರೆ. ಡಾ.ಕಜೆ ಅವರ ಶ್ರಮ ಸಾರ್ಥಕವಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು, ಶ್ರೀ ವಚನಾನಂದ ಸ್ವಾಮೀಜಿಗಳು, ಪ್ರಜಾವಾಣಿ ಸಂಪಾದಕರಾದ ರವೀಂದ್ರ ಭಟ್ಟ, ಖ್ಯಾತ ಆಯುರ್ವೇದ ವೈದ್ಯರಾದ ಗಿರಿಧರ ಕಜೆ ಹಾಗೂ ಇತರರು ಉಪಸ್ಥಿತರಿದ್ದರು.
