ಸಮಗ್ರ ಸುದ್ದಿ

ಮದ್ಯದ ಅಂಗಡಿಗಳಿಗೆ ಪರವಾನಗಿ ನೆಪದಲ್ಲಿ ಕೋಟಿ ಕೋಟಿ ಸುಲಿಗೆ! ಹೆಚ್.ಡಿ. ಕುಮಾರಸ್ವಾಮಿ ನೇರ ಆರೋಪ |ದಾವಣಗೆರೆಯಲ್ಲಿ ಶ್ರೀ ಶಾಮನೂರು ಶಿವಶಂಕರಪ್ಪ ಅವರ ಸಮಾಧಿ ಸ್ಥಳಕ್ಕೆ ಭೇಟಿ

Share

ದಾವಣಗೆರೆ : ರಾಜ್ಯ ಸರ್ಕಾರವು ಗ್ಯಾರಂಟಿಗಳಿಗೆ ಹಣ ಹೊಂದಿಸಿಕೊಳ್ಳಲು, ಖಾಲಿ ಆಗಿರುವ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ನೆಪದಲ್ಲಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪಿಸಿದರು.

ದಾವಣಗೆರೆಯಲ್ಲಿ ಗುರುವಾರ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಸ್ಮೃತಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಮದ್ಯದಂಗಡಿ ಪರವಾನಗಿ ಒಂದಕ್ಕೆ ₹ 1.95 ಕೋಟಿ ದರವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಇದು ಲೂಟಿ ಅಲ್ಲದೇ ಮತ್ತೇನು? ಜನರಿಗೆ ಇನ್ನು ದೊಡ್ಡ ಪ್ರಮಾಣದಲ್ಲಿ ಕುಡಿತದ ಚಟ ಹತ್ತಿಸಲು ಸರ್ಕಾರವೇ ಉತ್ತೇಜನ ನೀಡುತ್ತಿದೆ. ಇದೇ ರೀತಿ ಪ್ರತಿಯೊಂದು ಇಲಾಖೆಯನ್ನು ಲೂಟಿ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ (ಟಿಎಸ್‌ಪಿ) ಸೇರಿದಂತೆ ವಿವಿಧ ಯೋಜನೆಗಳ ಹಣ, ಅನುದಾನವನ್ನು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ರಾಜ್ಯದ ಖಾಜಾನೆಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಮದ್ಯದಂಗಡಿ ಹರಾಜು ಮೂಲಕ ಸುಳಿಗೆಬಿಡೆಯುವುದು ರಾಜ್ಯ ಸರ್ಕಾರವು ಜನತೆಗೆ ನೀಡುತ್ತಿರುವ ಹೊಸ ವರ್ಷದ ಕೊಡುಗೆ’ ಎಂದು ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ಗೃಹಲಕ್ಷ್ಮೀ ಯೋಜನೆಯಲ್ಲಿ ಮಹಿಳೆಯರ ಖಾತೆಗೆ ಜಮಾ ಆಗಬೇಕಾದ ₹5000 ಕೋಟಿ ಎಲ್ಲಿ ಹೋಯಿತು ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ಜನತೆಗೆ ಮಾಹಿತಿ ಕೊಟ್ಟಿಲ್ಲ. ನನಗೆ ಈ ವಿಷಯವೇ ಗೊತ್ತಿಲ್ಲ ಎಂದು ಸಿಎಂ ಅವರೇ ಹೇಳುತ್ತಾರೆ. ದಾಖಲೆಯ ಬಜೆಟ್ ಗಳನ್ನು ಮಂಡಿಸಿರುವ ಆವರೆಗೆ ತಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ? ಹಣ ಏನಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಇವರಂತಹ ಆರ್ಥಿಕ ತಜ್ಞರವನ್ನು ಪ್ರಪಂಚದಲ್ಲಿಯೇ ಕಾಣಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಅಭಿವೃದ್ಧಿ ಪಾತಾಳಕ್ಕೆ ಬಿದ್ದಿದೆ. ಕೇವಲ ಗ್ಯಾರಂಟಿ ಅಂತ ಹೇಳಿಕೊಂಡು ಎರಡೂವರೆ ವರ್ಷ ಆಡಳಿತ ನಡೆಸಿದ್ದಾರೆ. ರಾಜ್ಯದ ರಸ್ತೆಗಳನ್ನು ನೋಡಿದರೆ ಇವರ ಆಡಳಿತದ ಹಣೆಬರಹ ಗೊತ್ತಾಗುತ್ತದೆ. ಅಧಿಕಾರ ಹಂಚಿಕೆ ಕಿತ್ತಾಟದಲ್ಲಿಯೇ ಸಿಎಂ, ಡಿಸಿಎಂ ಇಷ್ಟು ದಿನ ಕಾಲಹರಣ ಮಾಡಿದ್ದಾರೆ. ಇವರನ್ನು ಜನರು ಕ್ಷಮಿಸುವುದಿಲ್ಲ ಎಂದು ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು.

ಶಾಮನೂರು ಶಿವಶಂಕರಪ್ಪ ಅವರಿಗೆ ನಮನ:

ಇದಕ್ಕೂ ಮುನ್ನ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇತ್ತೀಚಿಗೆ ಅಗಲಿದ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು.

ಬಳಿಕ ಶಾಮನೂರು ಅವರ ನಿವಾಸಕ್ಕೆ ತೆರಳಿ ಅವರ ಪುತ್ರ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರೆಲ್ಲರೂ ಹಾಜರಿದ್ದರು.

ತದನಂತರ ಕೇಂದ್ರ ಸಚಿವರು ಮಾಜಿ ಶಾಸಕ ಶಿವಶಂಕರ್ ಅವರ ನಿವಾಸಕ್ಕೆ ಭೇಟಿ ನೀಡಿದರು.

ಮಾಜಿ ಮಂತ್ರಿ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡರು, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ. ರಮೇಶ್ ಗೌಡ ಮುಂತಾದವರು ಕೇಂದ್ರ ಸಚಿವರ ಜತೆಯಲ್ಲಿದ್ದರು.


Share

You cannot copy content of this page