ಸಮಗ್ರ ಸುದ್ದಿ

ರೈತರ ನೆರವಿಗೆ ಕ್ರೆಡಲ್‌ನಿಂದ ‘ಪಿಎಂ ಕುಸುಮ್‌ ಬಿ’ ಸಹಾಯವಾಣಿ ಕೇಂದ್ರ

Share

ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ನಾಗರಬಾವಿಯ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ.

2025ರ ಡಿಸೆಂಬರ್‌ 23ರಿಂದ 2025ರ ಡಿಸೆಂಬರ್‌ 31ರವರೆಗೆ ಸಹಾಯವಾಣಿ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಕುಸುಮ್‌ ಬಿ ಯೋಜನೆ ಕುರಿತಂತೆ ರೈತರು ತಮ್ಮ ಸಮಸ್ಯೆಗಳನ್ನು ದೂರವಾಣಿ ಕರೆಯ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ರಾಜ್ಯದ ಎಲ್ಲ ರೈತರು ಇದರ ನೆರವು ಪಡೆದುಕೊಳ್ಳ ಬಹುದಾಗಿದ್ದು, ಇದಕ್ಕಾಗಿ ಕ್ರೆಡಲ್‌ ಸಿಬ್ಬಂದಿ, ಪ್ರತಿದಿನ ಬೆಳಿಗ್ಗೆ 6.00 ರಿಂದ ರಾತ್ರಿ 9.00ರವರೆಗೆ ರಜೆ ಇಲ್ಲದೆ ಎರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಸಹಾಯವಾಣಿಯಲ್ಲಿ ಕುಸುಮ್ ಯೋಜನೆಯ ಕಾಂಪೊನೆಂಟ್ ಬಿ ಅಡಿ ಸೋಲಾರ್‌ ಪಂಪ್‌ಸೆಟ್‌ ಹಾಕಿಸಿಕೊಳ್ಳುವ ಕುರಿತು ಮಾಹಿತಿ, ಆನ್‌ಲೈನ್ ಪಾವತಿ ಮತ್ತು ಇತರ ಸಂಬಂಧಿತ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ರೈತರು ಮಧ್ಯವರ್ತಿಗಳನ್ನು ಸಂಪರ್ಕಿಸದೆ ಸಹಾಯವಾಣಿಯ ಅಧಿಕೃತ ಫೋನ್ ಸಂಖ್ಯೆ 080-22202100 ಮತ್ತು 8095132100ಅನ್ನು ನೇರವಾಗಿ ಸಂಪರ್ಕಿಸಬಹುದು. ಸೋಲಾರ್‌ ವಿದ್ಯುತ್‌ ಚಾಲಿತ ನೀರಾವರಿ ಪಂಪ್‌ ಸೆಟ್‌ಗಾಗಿ ರೈತರು ತಮ್ಮ ಪಾಲಿನ ವಂತಿಗೆ ಹೊರತುಪಡಿಸಿ ಯಾರಿಗೂ ಹಣ ಪಾವತಿಸಬೇಕಾಗಿಲ್ಲ ಎಂದು ಕ್ರೆಡಲ್‌ ಪ್ರಕಟಣೆ ತಿಳಿಸಿದೆ.

ಪಿಎಂ ಕುಸುಮ್‌ ಬಿ ಯೋಜನೆಗೆ ರೈತ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, www.souramitra.com ಪೋರ್ಟಲ್‌ ಮೂಲಕ ಈವರೆಗೆ 83,204 ರೈತರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರು ಲಭ್ಯವಿರುವ ಆಯ್ಕೆಗಳಿಂದ ತಮ್ಮ ಆದ್ಯತೆಯ ಮಾರಾಟಗಾರರು ಅಥವಾ ಏಜೆನ್ಸಿಯನ್ನು ಆಯ್ಕೆ ಮಾಡಿಕೊಡು ತಮ್ಮ ಪಾಲಿನ ವಂತಿಗೆಯನ್ನು ಆನ್‌ಲೈನ್‌ ಮೂಲಕ ಪಾವತಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

ವಂತಿಗೆ ಪಾವತಿಗೆ 2025ರ ಡಿಸೆಂಬರ್‌ 31 ಕೊನೆಯ ದಿನಾಂಕ ಆಗಿದ್ದು, ಪ್ರಮುಖ ಪತ್ರಿಕೆಗಳಲ್ಲಿ ಜಾಹಿರಾತಿನ ಮೂಲಕ ಕ್ರೆಡಲ್‌ ಈ ವಿಷಯವನ್ನು ರೈತರ ಗಮನಕ್ಕೆ ತಂದಿದೆ. ಅಂತಿಮ ದಿನಾಂಕದೊಳಗೆ ಪಾವತಿ ಮಾಡಲು ವಿಫಲವಾದರೆ ಯೋಜನೆಗೆ ಅನರ್ಹರಾಗುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಕುಸುಮ್ ಯೋಜನೆಯ ಕಾಂಪೊನೆಂಟ್ ಬಿ:

ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್‌ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಈ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ (ಕುಸುಮ್‌) ರೂಪಿಸಲಾಗಿದೆ.

ಕುಸುಮ್‌ ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್‌ಸೆಟ್‌ ಅಳವಡಿಸಲು ಒತ್ತು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು ಸಬ್ಸಿಡಿ ಮೊತ್ತವನ್ನು ಶೇ.30ರಿಂದ 50ಕ್ಕೆ ಏರಿಸಿದೆ. ಕೇಂದ್ರ ಸರ್ಕಾರ ಶೇ.30ರಷ್ಟು ಸಬ್ಸಿಡಿ ಒದಗಿಸುತ್ತಿದ್ದು,ರೈತರು ಪಾವತಿಸಬೇಕಿರುವುದು ಶೇ.20ರಷ್ಟು ಮಾತ್ರ. ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್‌ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್‌ ಸ್ಟ್ರಕ್ಚರ್‌, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಸರಬರಾಜು ಮಾಡಲಾಗುತ್ತದೆ. ಸೋಲಾರ್ ಪಂಪ್‌ಗಳನ್ನು 5 ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ.

ಸೌರ ಪಂಪ್‌ಸೆಟ್‌ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿಯವಾಗುತ್ತಿದೆ. ಸೌರ ಪಂಪ್‌ಸೆಟ್‌ ಬಳಕೆಯಿಂದ 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಕೆಯಾಗಲಿದೆ.

*ಇಂಧನ ಸಚಿವ ಕೆ.ಜೆ.ಜಾರ್ಜ್*, ನೀರಾವರಿ ಪಂಪ್‌ಸೆಟ್‌ಗಳಿಗೆ ಸೌರಶಕ್ತಿಯನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಮೂಲಕ ರೈತರ ಸಬಲೀಕರಣಗೊಳಿಸುವುದು ಕುಸುಮ್‌ ಬಿ ಯೋಜನೆಯ ಮೂಲ ಉದ್ದೇಶವಾಗಿದೆ. ಸಹಾಯವಾಣಿಯನ್ನು ಸ್ಥಾಪಿಸುವ ಮೂಲಕ, ಅರ್ಜಿ ಸಲ್ಲಿಸಿರುವ ಅರ್ಹ ರೈತರಿಗೆ ಸಕಾಲಿಕ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸಲಾಗುತ್ತದೆ. ಆನ್‌ಲೈನ್‌ ಅರ್ಜಿ ಸಲ್ಲಿಕೆ ವೇಳೆ ರೈತರು ಎದುರಿಸಬಹುದಾದ ಗೊಂದಲವನ್ನು ನೇರ ಸಂಪರ್ಕದಿಂದ ನಿವಾರಿಸಲಾಗುತ್ತದೆ. ಮಧ್ಯವರ್ತಿಗಳಿಲ್ಲದೆ ಯೋಜನೆ ಪ್ರಯೋಜನಗಳನ್ನು ಪಡೆಯಬಹುದು. ರೈತರ ಕಲ್ಯಾಣದ ಜತೆಗೆ ಕೃಷಿ ಕ್ಷೇತ್ರದಲ್ಲೂ ನವೀಕರಿಸಬಹುದಾದ ಇಂಧನದ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ.

*ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ*, ರೈತರಿಗಾಗಿಯೇ ತೆರೆದಿರುವ ಈ ಸಹಾಯವಾಣಿ ಸ್ಥಾಪನೆಯು ಪಿಎಂ ಕುಸುಮ್‌ ಬಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಇಂಧನ ಇಲಾಖೆಯ ಬದ್ಧತೆಗೆ ಸಾಕ್ಷಿಯಾಗಿದೆ. ರೈತರ ಗೊಂದಲ ಪರಿಹರಿಸಿ, ವ್ಯವಸ್ಥೆಯಲ್ಲಿ ವಿಶ್ವಾಸವನ್ನು ಬಲಪಡಿಸುತ್ತದೆ. ಸುಸ್ಥಿರ ಇಂಧನ ಬಳಕೆ ಮತ್ತು ರೈತ ಕೇಂದ್ರಿತ ಯೋಜನೆಗಳನ್ನು ಸಾಕಾರಗೊಳಿಸಲು ಸಿಬ್ಬಂದಿ ಜತೆ ಕೃಷಿಕರು ಸಹಕರಿಸಬೇಕು.

*ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ*,
ಪಿಎಂ ಕುಸುಮ್‌ ಬಿ ಯೋಜನೆಯ ಅನುಷ್ಠಾನದ ಈ ನಿರ್ಣಾಯಕ ಹಂತದಲ್ಲಿ ರೈತರ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ನಮ್ಮ ಸಮರ್ಪಿತ ತಂಡವು ತಾಂತ್ರಿಕ ಸಮಸ್ಯೆಗಳು, ಪಾವತಿ-ಸಂಬಂಧಿತ ಗೊಂದಲಗಳು ಮತ್ತು ಅರ್ಜಿ ಕುರಿತ ಯಾವುದೇ ಅನುಮಾನಗಳನ್ನು ಪರಿಹರಿಸಲು ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ರೈತರು ಮಾಹಿತಿ ಕೊರತೆ ಅಥವಾ ಕಾರ್ಯವಿಧಾನದ ತೊಡಕಿನಿಂದ ಯೋಜನೆಯ ಲಾಭದಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುವುದು.


Share

You cannot copy content of this page