ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ 31 ರಂದು ರಾತ್ರಿ 6 ಗಂಟೆಯಿಂದ ಉದ್ಯಾನವನಗಳು ಹಾಗೂ ಕೆರೆಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪಶ್ಚಿಮ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಆದೇಶ ಹೊರಡಿಸಿದ್ದಾರೆ.
2026ನೇ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ, ಈ ವರ್ಷದ ಕೊನೆಯ ದಿನವಾದ ಡಿಸೆಂಬರ್ 31ರ ಬುಧವಾರ ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಟ್ಟಾಗಿ ಸೇರುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಯಾವುದೇ ಅಹಿತಕರ ಘಟನೆಗಳು ಹಾಗೂ ಸಾರ್ವಜನಿಕ ಶಾಂತಿ ಭಂಗವಾಗುವ ಸಂಭವವಿರುವುದರಿಂದ, ಸಾರ್ವಜನಿಕ ಸುರಕ್ಷಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 31 ರಂದು ಸಂಜೆ 6:00 ಗಂಟೆಯ ನಂತರ ಪಾಲಿಕೆಗೆ ಸೇರಿದ ಎಲ್ಲಾ ಉದ್ಯಾನವನಗಳು ಮತ್ತು ಕೆರೆಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಮುಂದುವರಿದು, ಎಲ್ಲಾ ಉದ್ಯಾನವನಗಳು ಮತ್ತು ಕೆರೆಗಳಿಗಳ ಬಳಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಿ, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.
ಸಾರ್ವಜನಿಕರು ಅಹಿತಕರ ಘಟನೆಗಳು ನಡೆಯದಂತೆ, ಶಾಂತಿಯುತವಾಗಿ ಹೊಸ ವರ್ಷಾಚರಣೆಯನ್ನು ನಡೆಸಬೇಕಾಗಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
