ಸೇಡಂ: ಬಸವಣ್ಣ ನವರ ಸಾಮಾಜಿಕ ಕ್ರಾಂತಿ ಮತ್ತು ಮಾದಾರ ಚನ್ನಯ್ಯರವರ ಚಿಂತನೆಗಳು, ಜೀವನ ಸಂದೇಶಗಳು, ಇಂದಿನ ಸಮಾಜಕ್ಕೆ ಇನ್ನಷ್ಟು ಪ್ರಸ್ತುತವಾಗಿವೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಹೇಳಿದರು.
ಸೇಡಂನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಶಿವಶರಣ ಮಾದಾರ ಚನ್ನಯ್ಯರ ಪುತ್ಥಳಿ ಅನಾವರಣ ಹಾಗೂ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾತಂಗ ಮುನಿ, ಮಾದಾರ ಚನ್ನಯ್ಯರಂತಹ ಮಹಾನ್ ಶಿವಶರಣರು ಸಮಾಜದ ಶೋಷಿತ ವರ್ಗಗಳಿಗೆ ಆತ್ಮಗೌರವ, ಸಮಾನತೆ ಮತ್ತು ಜ್ಞಾನದ ದಾರಿ ತೋರಿಸಿದ್ದಾರೆ ಎಂದರು.
ಏಳನೇ ಶತಮಾನದಲ್ಲಿಯೇ ಸಂಗೀತ, ಸಾಹಿತ್ಯ ಮತ್ತು ಧಾರ್ಮಿಕ ಚಿಂತನೆಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದ ಮಾದಾರ ಚನ್ನಯ್ಯರ ಕೊಡುಗೆ ಇತಿಹಾಸಾತ್ಮಕವಾಗಿದ್ದು, ಅವರ ಕೀರ್ತನೆಗಳು ಹಾಗೂ ಬಸವಣ್ಣನವರ ಜೊತೆಯಲ್ಲಿನ ಅವರ ಸಾಮಾಜಿಕ ಹೋರಾಟಗಳನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ದಕ್ಷಿಣ ಭಾರತದ ವಿವಿಧ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಮುದಾಯಗಳು ಒಟ್ಟಾಗಿ ಸೇರಿ
ಸಾಮಾಜಿಕ ಸ್ಥಾನಮಾನ, ಇತಿಹಾಸ ಮತ್ತು ನಾಗರಿಕತೆಯಲ್ಲಿನ ಪಾತ್ರವನ್ನು ಅಧ್ಯಯನ ಮಾಡುವ ಕಾರ್ಯ ಶ್ಲಾಘನೀಯವಾಗಿದ್ದು, ಈ ದಿಕ್ಕಿನಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿರುವ ಮಹತ್ವದ ಅಧ್ಯಯನ ಸಮ್ಮೇಳನ ಸಮಾಜದ ಭವಿಷ್ಯಕ್ಕೆ ದಿಕ್ಕು ತೋರಿಸಲಿದೆ ಎಂದು ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು ಹಾಗೂ ಅದರ ನಂತರ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಗಳಾಗಿವೆ ಎಂದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರವು ಜನಸಂಖ್ಯೆ ಆಧಾರಿತ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದೆ ಎಂದು ಪ್ರಶಂಸಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವು ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡುವ ಗುರಿ ಹೊಂದಿದ್ದು,
ಅದನ್ನು ಅಕ್ಷರಶಃ ಅನುಷ್ಠಾನಗೊಳಿಸುವ ಬದ್ಧತೆ ನಮ್ಮ ಸರ್ಕಾರದ್ದಾಗಿದೆ ಎಂದು ಸ್ಪಷ್ಟಪಡಿಸಿದರು.
ಸಮಾಜದ ದಶಕಗಳ ಹೋರಾಟಕ್ಕೆ ಇಂದು ಫಲ ದೊರೆತಿದ್ದು,
ಮುಂದಿನ ದಿನಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರ್ಥಿಕ ಸಬಲೀಕರಣದಲ್ಲಿ ಸಮಾನ ಅವಕಾಶ ಕಲ್ಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಹೇಳಿದರು.
ಒಗ್ಗಟ್ಟು, ಪಕ್ಷಾತೀತ ಚಿಂತನೆ, ಶಿಕ್ಷಣದ ಮಹತ್ವ ಮತ್ತು ಸಹೋದರತ್ವವೇ ಸಮಾಜದ ಬಲ ಎಂದು ತಿಳಿಸಿದ ಅವರು,
ಸಮುದಾಯ ಸಂಘಟನೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಮುಂದಿನ ಪೀಳಿಗೆಯ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ,ಷಡಕ್ಷರಿ ಮುನಿದೇಶಿ ಕೇಂದ್ರ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ್ ಪಾಟೀಲ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮತ್ತಿತರರು ಉಪಸ್ಥಿತರಿದ್ದರು.
