ನವದೆಹಲಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಕರ್ನಾಟಕದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿಗೆ ಕೇಂದ್ರ ಸರ್ಕಾರ ಅವಧಿ ವಿಸ್ತರಿಸಿದೆ.
ರಾಜ್ಯದಲ್ಲಿ ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿ ಕಾಲಾವಕಾಶ ವಿಸ್ತರಣೆ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಸಚಿವ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ 2025-26ರ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರುಕಾಳು ಖರೀದಿಗೆ ಬೆಂಬಲ ಬೆಲೆ ಯೋಜನೆಯಡಿ ಮತ್ತಷ್ಟು ಸಮಯ ಹೆಚ್ಚಿಸುವಂತೆ ಅವರು ಕೇಂದ್ರ ಕೃಷಿ ಸಚಿವರ ಗಮನ ಸೆಳೆದಿದ್ದರು. ಕೇಂದ್ರ ಸರ್ಕಾರ ಈ ಮನವಿ ಪುರಸ್ಕರಿಸಿ ಇದೀಗ ಹೆಸರುಕಾಳು ಬೆಂಬಲ ಯೋಜನೆ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಇದಕ್ಕಾಗಿ ಪ್ರಲ್ಹಾದ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಜಿಲ್ಲಾವಾರು ಖರೀದಿ ಕೇಂದ್ರಕ್ಕೆ ಒತ್ತಾಯ:
ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರದಿಂದ ಕೃಷಿಕರ ಉತ್ಪನ್ನಗಳಿಗೆ ನ್ಯಾಯಯುತ ಬೆಂಬಲ ಬೆಲೆಯನ್ನು ಖಚಿತಪಡಿಸಿದೆ ಎಂದಿರುವ ಸಚಿವರು, ರಾಜ್ಯ ಸರ್ಕಾರ ಈ ಕೂಡಲೇ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರಾಜ್ಯಾದ್ಯಂತ ಖರೀದಿ ಕೇಂದ್ರಗಳನ್ನು ಆರಂಭಿಸಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ
ರಾಜ್ಯದ ರೈತರ ಹಿತ ಕಾಪಾಡಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ ಸ್ಪಂದಿಸುತ್ತಲೇ ಬಂದಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ಸಹ ರೈತರಿಗೆ ಇದರ ಲಾಭ ದೊರೆಕಿಸಿಕೊಡಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
