ಸಮಗ್ರ ಸುದ್ದಿ

ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ – ಸಿಎಂ ಸಿದ್ದರಾಮಯ್ಯ

Share

ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಗಿಲು ಇಂದ 7 ಕಿ.ಮೀ ವ್ಯಾಪ್ತಿಯಲ್ಲೇ ಬದಲೀ ಮನೆ ಕೊಡಲು ತೀರ್ಮಾನಿಸಲಾಗಿದೆ. ಜನವರಿ 01 ರ ಹೊಸ ವರ್ಷದಂದೇ ಶೆಡ್ ಕಳೆದುಕೊಂಡವರಿಗೆ ಹೊಸ ಮನೆ ನೀಡಲಾಗುವುದು ಎಂದರು.

ಕೋಗಿಲು ಬಡಾವಣೆಯಲ್ಲಿ ಡಿಸೆಂಬರ್ 20ರಂದು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ಗಳನ್ನು ನಿರ್ಮಾಣ ಮಾಡಿದ್ದ ಸುಮಾರು 167 ಶೆಡ್‌ಗಳನ್ನು ತೆರವುಗೊಳಿಸಲಾಗಿತ್ತು. ಅವರೆಲ್ಲರಿಗೂ ನೋಟಿಸ್ ನೀಡಿ, ಸರ್ಕಾರದ ಜಾಗವಾಗಿದ್ದು ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು, ಆದರೂ ಅವರು ಖಾಲಿ ಮಾಡಿರಲಿಲ್ಲ. ನಿನ್ನೆ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ತನ್ನ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹ್ಮದ್ ಅವರನ್ನು ಸ್ಥಳಕ್ಕೆ ಕಳಿಸಿಕೊಟ್ಟಿದ್ದೆ. ಇಂದು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕೂಡ ಅಧಿಕಾರಿಗಳ ಜೊತೆ ಭೇಟಿ ನೀಡಿದ್ದಾರೆ ಎಂದರು.

ಕಸ ವಿಲೇವಾರಿ ಮಾಡುವ ಉದ್ದೇಶಕ್ಕೆ 15 ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದರು. ಬಂಡೆ ಕ್ವಾರಿ ಕೂಡ ಅಲ್ಲಿದೆ. ಪಾಲಿಕೆಯವರು ಕಸ ಹಾಕುತ್ತಿದ್ದು, ಭೂಮಿ‌ ಅವರ ಸ್ವಾಧೀನದಲ್ಲೇ ಇದೆ. ನಾವು ಸುಮಾರು 2020-21 ರಿಂದ ಈ ರೀತಿ ಅಕ್ರಮವಾಗಿ ಶೆಡ್ ಕಟ್ಟಿಕೊಂಡು ವಾಸ ಮಾಡುತ್ತಿದ್ದರು, ಹೀಗಾಗಿ ಅಲ್ಲಿನ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ.

ತಹಶಿಲ್ದಾರರಿಗೆ, ಶಿರಸ್ಥೆದಾರರಿಗೆ ಗೊತ್ತಿಲ್ಲದೆ ಹೀಗೆ ಒತ್ತುವರಿ ಆಗಲು ಸಾಧ್ಯವಿಲ್ಲ. ಇನ್ನು ಮುಂದೆ ಇಂತಹ ಘಟನೆ ಮರುಕಳಿಬಾರದು ಎಂಬ ಕಾರಣಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

*ಮುಂದೆ ಸರ್ಕಾರದ ಜಮೀನು ಅಕ್ರಮ ಒತ್ತುವರಿ ಆದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ ಕ್ರಮ:*

ಇನ್ನುಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ‌ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಒಂದು ವೇಳೆ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ. ಅಕ್ರಮವಾಗಿ ಶೆಡ್‌ಗಳನ್ನು ಕಟ್ಟಿ ವಾಸವಿದ್ದವರಲ್ಲಿ ಮುಂದಿನ ಎರಡು ದಿನಗಳಲ್ಲಿ ಅರ್ಹರನ್ನು ಗುರುತಿಸಿ, ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂದು ಸ್ಪಷ್ಟಪಡಿಸಿದರು.

ಈ ವಿಚಾರದ ಬಗ್ಗೆ ದೆಹಲಿಯಲ್ಲಿ ಕೆ.ಸಿ.ವೇಣುಗೋಪಾಲ್ ಅವರು ನನ್ನೊಂದಿಗೆ ಮತ್ತು ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಊಟ, ವಸತಿ, ತಾತ್ಕಾಲಿಕ ಸೂರಿನ ವ್ಯವಸ್ಥೆ ಮಾಡುವಂತೆ ಹೇಳಿದ್ದೆ, ಅದರಂತೆ ಮೂರು ಕಡೆ ಈ ರೀತಿಯ ವ್ಯವಸ್ಥೆ ಮಾಡಿದ್ದರೂ ಅಲ್ಲಿನ ನಿವಾಸಿಗಳು ಹೋಗಿಲ್ಲ ಎಂದರು

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಸತಿ ಸಚಿವರಾದ ಜಮೀರ್ ಅಹ್ಮದ್, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರ ಜೊತೆ ಮಾತನಾಡಿ, ಪರ್ಯಾಯ ವ್ಯವಸ್ಥೆ ಮಾಡುವ ಸಂಬಂಧ ಚರ್ಚಿಸಿದ್ದೇನೆ. ಅಲ್ಲೇ ಸಮೀಪದ ಬೈಯ್ಯಪ್ಪನಹಳ್ಳಿಯ ಸರ್ವೇ ನಂ‌.23 ರಲ್ಲಿ ಸುಮಾರು 1087 ಮನೆಗಳಿವೆ, ಅಧಿಕಾರಿಗಳಿಂದ ಪಟ್ಟಿ ಬಂದ ನಂತರ ಅವರಿಗೆ ಬೈಯ್ಯಪ್ಪನಹಳ್ಳಿಯ ಬಹುಮಹಡಿ ಕಟ್ಟಡದಲ್ಲಿ ಮನೆಗಳ ಹಂಚಿಕೆ ಮಾಡುತ್ತೇವೆ ಎಂದರು.

ಒಂದು ಮನೆಗೆ ಸುಮಾರು ₹11.20 ಲಕ್ಷ ವೆಚ್ಚವಾಗಿದ್ದು, ಇವನ್ನು ಕೊಡುತ್ತೇವೆ. ಸಾಮಾನ್ಯವರ್ಗ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಬ್ಸಿಡಿ ಲಭ್ಯವಿದೆ, ಜೊತೆಗೆ ಜಿಬಿಎ ಇಂದ ಪ್ರತಿ ಮನೆಗೆ 5 ಲಕ್ಷ ರೂಪಾಯಿ ನೀಡುವಂತೆ ಸೂಚಿಸಿದ್ದೇನೆ. ಸಾಮಾನ್ಯ ವರ್ಗಕ್ಕೆ ಎಲ್ಲಾ ಸಬ್ಸಿಡಿ ಸೇರಿ 8 ಲಕ್ಷದ 70 ಸಾವಿರ ರೂಪಾಯಿ ಬರುತ್ತದೆ. ಎಸ್‌ಸಿಎಸ್‌ಟಿಗಳಾದರೆ 9.50 ಲಕ್ಷ ಬರುತ್ತದೆ. ಆಮೇಲೆ ಜನರಲ್‌ಗೆ 2.5 ಲಕ್ಷವನ್ನು ಸಾಲದ ರೂಪದಲ್ಲಿ ಕೊಡತಕ್ಕಂತದ್ದು. ಎಸ್‌ಸಿಎಸ್‌ಟಿಗೆ 1.70 ಲಕ್ಷ ಸಾಲ. ಅದನ್ನು ಜಮೀರ್‌ ಅಹ್ಮದ್‌ ಖಾನ್‌ ಅವರು ವೆರಿಫೇಷರಿಗೆ ಸಾಲ ಕೊಡಿಸ್ತೀನಿ ಅಂತ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ನಾಳೆ, ನಾಡಿದ್ದು ಎರಡು ದಿನ ವೇರಿಫೈ ಮಾಡುತ್ತಾರೆ. ಜನವರಿ 1ರಂದು ಹೊಸ ವರ್ಷ ಪ್ರಾರಂಭದ ದಿನ ಇವರಿಗೆ ವಾಸಕ್ಕೆ ಮನೆಯನ್ನು ಒದಗಿಸಿಕೊಡುವ ಜವಾಬ್ದಾರಿಯನ್ನು ವಸತಿ ಸಚಿವರಾದ ಜಮೀರ್‌ ಅಹ್ಮದ್‌ ಖಾನ್‌ ಅವರಿಗೆ ವಹಿಸಲಾಗಿದೆ. ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದರೂ, ಮಾನವೀಯತೆ ದೃಷ್ಟಿಯಿಂದ ಅವರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. 1 ಲಕ್ಷ ಮನೆಗಳನ್ನು ನಾವು ಕಟ್ಟಿಸಿರುವುದೇ ಬಡವರಿಗೆ ಸೂರು ಒದಗಿಸಿಕೊಡಲೆಂದು ಎಂದರು.

ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡುವುದು ಇದೊಂದು ಪ್ರಕರಣಕ್ಕೆ ಮಾತ್ರ ಅನ್ವಯವಾಗುತ್ತದೆ. ಅಕ್ರಮವಾಗಿ ಶೆಡ್ ನಿರ್ಮಿಸಲು ಬಿಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಇನ್ನು ಮುಂದೆ ಇಂತಹ ಅಕ್ರಮ ನಡೆದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.


Share

You cannot copy content of this page