ಸಮಗ್ರ ಸುದ್ದಿ

ಸದೃಢ ಸಮಾಜದ ನಿರ್ಮಾಣವೇ ಇಂಟರ್ ಅಪಾರ್ಟ್ ಮೆಂಟ್ ಉತ್ಸವದ ಗುರಿ: ಕೃಷ್ಣ ಬೈರೇಗೌಡ

Share


ಬೆಂಗಳೂರು ನ.16:

ಬ್ಯಾಟರಾಯನಪುರ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಆಯೋಜಿಸಿದ್ದ 3ನೇ ವರ್ಷದ ʼಇಂಟರ್ ಅಪಾರ್ಟ್ಮೆಂಟ್ ಸ್ಪೋರ್ಟ್ಸ್ ಫೆಸ್ಟ್-2025ʼ ಕೊನೆಯ ದಿನ ಗೆಲುವು ಸಾಧಿಸಿದ ಕ್ರೀಡಾಪಟುಗಳು ಹಾಗೂ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಸಮಾಜದಲ್ಲಿನ ಪ್ರತಿಯೊಬ್ಬರನ್ನೂ ಒಂದುಗೂಡಿಸುವ ಹಾಗೂ ದೈಹಿಕವಾಗಿ ಸದೃಢರನ್ನಾಗಿಸುವ ಏಕೈಕ ಮಾರ್ಗ ಕ್ರೀಡೆ. ಆ ಉದ್ದೇಶದಿಂದಲೇ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಪ್ರತಿವರ್ಷ ಅಂತರ ಅಪಾರ್ಟ್ಮೆಂಟ್ ಕ್ರೀಡಾ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಬೆಂಗಳೂರಿನ ಮಟ್ಟಿಗೆ ಸ್ಥಳೀಯರ ಸಂಖ್ಯೆಗಿಂತ ವೃತ್ತಿ ಕಾರಣಕ್ಕಾಗಿ ಹೊರ ಜಿಲ್ಲೆ-ರಾಜ್ಯಗಳಿಂದ ಇಲ್ಲಿಗೆ ಆಗಮಿಸಿ ನೆಲೆಸಿದವರೇ ಹೆಚ್ಚು. ಒಂದೇ ಅಪಾರ್ಟ್ಮೆಂಟ್ ನಲ್ಲಿ ಇದ್ದರೂ ಸಹ ಒಬ್ಬರಿಗೊಬ್ಬರು ಪರಿಚಯವಿಲ್ಲದ ಸ್ಥಿತಿ ಇದೆ. ಇಂತಹ ವ್ಯವಸ್ಥೆಯ ಅಡಿಯಲ್ಲಿ ಸದೃಢ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಪ್ರತಿ ವರ್ಷ ʼಇಂಟರ್ ಅಪಾರ್ಟ್ಮೆಂಟ್ ಸ್ಪೋರ್ಟ್ಸ್ ಫೆಸ್ಟ್ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

“ಸಮಾಜದ ಪ್ರತಿಯೊಬ್ಬರನ್ನೂ ಬೆಸೆಯುವ ಶಕ್ತಿ ಇರುವುದು ಕ್ರೀಡೆಗೆ ಮಾತ್ರ. ಕಳೆದ ಮೂರು ವರ್ಷದಲ್ಲಿ ನಮ್ಮ ಕ್ರೀಡಾ ಉತ್ಸವದಲ್ಲಿ ಪಾಲ್ಗೊಂಡ ಹಲವರು ಈ ಉತ್ಸವದ ಕಾರಣಕ್ಕೆ ತಮಗೆ ಹೊಸ ಗೆಳೆಯರು, ಗೆಳೆತಿಯರ ಪರಿಚಯವಾಗಿದೆ ಎಂದಿದ್ದಾರೆ. ಸಮಾಜದಲ್ಲಿ ಹೀಗೆ ಅಪರಿಚಿತರೆಲ್ಲರೂ ಪರಸ್ಪರ ಹತ್ತಿರವಾದಾಗ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇದ್ದಾಗ ಮಾತ್ರ ಶಕ್ತಿಯುತ ಹಾಗೂ ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈ ಕ್ರೀಡಾ ಉತ್ಸವದಲ್ಲಿ 8 ವಿವಿಧ ಕ್ರೀಡಾಂಗಣದಲ್ಲಿ ಕ್ರಿಕೆಟ್, ವಾಲಿಬಾಲ್, ಫುಟ್ಬಾಲ್, ಚೆಸ್, ಕೇರಮ್, ಟೆಬಲ್ ಟೆನ್ನಿಸ್, ಹಗ್ಗ-ಜಗ್ಗಾಟ, ಸ್ವಿಮ್ಮಿಂಗ್ ಬ್ಯಾಡ್ಮಿಂಟನ್ ಸೇರಿದಂತೆ ಒಟ್ಟು 14 ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, 3600 ಜನರು ಭಾಗವಹಿಸಿದ್ದರು.

ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಂತಹ ವಿನೂತನ ಕ್ರೀಡಾಕೂಟ ಏರ್ಪಡಿಸಿರುವುದು ಬೆಂಗಳೂರಿನಲ್ಲಿಯೇ ಪ್ರಪ್ರಥಮವಾಗಿದ್ದು, ಎಲ್ಲಾ ವಿಜೇತ ಕ್ರೀಡಾಪಟುಗಳು ಹಾಗೂ ವಿಜೇತ ತಂಡಗಳಿಗೆ ಭಾನುವಾರ ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ಸಂಘಟಕಿ ಶ್ರೀಮತಿ ಮೀನಾಕ್ಷಿ ಕೃಷ್ಣ ಬೈರೇಗೌಡ ಅವರು ಟ್ರೋಫಿ, ನಗದು ಬಹುಮಾನ ಹಾಗೂ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಿಸಿ ಗೌರವಿಸಿದರು.


Share

You cannot copy content of this page