ಕೃಷಿಕರು ಕೇವಲ ಆಹಾರ ಉತ್ಪಾದಕರಲ್ಲ ಅವರು ಉದ್ಯೋಗ ಸೃಷ್ಟಿಸುವ ಶಕ್ತಿಯುಳ್ಳವರು. ಇದನ್ನು ಮತ್ತಷ್ಟು ಬಲಪಡಿಸಲು ನಮ್ಮ ಸರ್ಕಾರ ಅನೇಕ ಹೊಸ ಯೋಜನೆಗಳನ್ನು ಕೈಗೊಂಡಿದೆ ಎಂದು ಕೃಷಿ ಸಚಿವ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ *ಎನ್.ಚಲುವರಾಯಸ್ವಾಮಿ* ಹೇಳಿದರು.
ಕೃಷಿಮೇಳದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು,
ಈ ಬೃಹತ್ತಾದ ಕೃಷಿಮೇಳದಲ್ಲಿ ರೈತರು ತಮ್ಮ ನೂರಾರು ಅನುಮಾನಗಳಿಗೆ ವಿಜ್ಞಾನಿಗಳೊಂದಿಗೆ ನೇರವಾಗಿ ಮಾತನಾಡಿ ಪರಿಹಾರ ಪಡೆದಿದ್ದಾರೆ. ನಾವು ಪ್ರಕೃತಿಯೊಂದಿಗೆ ಹೊಂದಿಕೊಂಡು ಕೃಷಿಮಾಡಬೇಕು ಎಂದರು.
ಶತಾಯುಷಿ ಸಾಲುಮದ ತಿಮ್ಮಕ್ಕರವರ ಜೀವನದ ಹಾದಿ ಇಂದಿನ ಪೀಳಿಗೆಗೆ ಮಾದರಿಯಾಗಬೇಕು. ಮಣ್ಣನ್ನು ಕಾಪಾಡಿ, ನೀರನ್ನು ಉಳಿಸಿ, ಪರಿಸರ ಸ್ನೇಹಿ ಕೃಷಿ ಮಾಡಿ ಮುಂದಿನ ಪೀಳಿಗೆಗೆ ಸಮೃದ್ಧ ನೆಲವನ್ನು ಬಿಟ್ಟುಹೋಗೋಣ ಎಂದು ತಿಳಿಸಿದರು.
*ಕಂದಾಯ ಸಚಿವ ಕೃಷ್ಣ ಬೈರೇಗೌಡ*, ಕೃಷಿಮೆಳ ಕೇವಲ ಒಂದು ಕಾರ್ಯಕ್ರಮವಾಗಿರದೆ – ಇದು ಒಂದು ವಿಜ್ಞಾನದ ಜಾತ್ರೆಯಾಗಿದೆ. ರೈತರ ನಗು, ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ, ವಿಜ್ಞಾನಿಗಳ ಮಾರ್ಗದರ್ಶನ – ಇವೆಲ್ಲವೂ ಕೃಷಿಮೇಳಕ್ಕೆ ಜೀವ ತುಂಬಿದೆ. ಈ ನಾಲ್ಕು ದಿನಗಳಲ್ಲಿ ನಮ್ಮ ಕೃಷಿಮೇಳದಲ್ಲಿ 750ಕ್ಕೂ ಹೆಚ್ಚು ಮಳಿಗೆಗಳು ಸ್ಥಾಪನೆಯಾಗಿದ್ದು, ಇದನ್ನು ನೋಡಲು ಲಕ್ಷಾಂತರ ಜನರು ಆಗಮಿಸಿರುವುದು ನಮ್ಮ ಕೃಷಿ ಕ್ಷೇತ್ರದ ಬಲ, ಸಾಮರ್ಥ್ಯ ಮತ್ತು ಭವಿಷ್ಯದ ಸೂಚಕವಾಗಿದೆ ಎಂದರು.
ಪ್ರಶಸ್ತಿ ಪಡೆದ ರೈತರು ಇಂದಿನ ಯುವರೈತರಿಗೆ ಮಾದರಿಯಾಗಲಿದ್ದಾರೆ. ಈ ಮೇಳದಲ್ಲಿ ಪ್ರದರ್ಶಿಸಲಾದ ಹೊಸ ತಂತ್ರಜ್ಞಾನಗಳು ಮತ್ತು ತಾಂತ್ರಿಕತೆಗಳನ್ನು ರೈತರು ಅಳವಡಿಸಿ ಸಮೃದ್ಧರಾಗಬೇಕೆಂದು ನಮ್ಮೆಲ್ಲರ ಆಶಯ. ಇಂತಹ ಕೃಷಿ ಮೇಳಗಳು ಇಂದಿನ ರೈತರಿಗೆ ಸ್ಫೂರ್ತಿದಾಯಕವಾಗಿ ಹೊರಹೊಮ್ಮಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ “ದೇಸೀಯ ತಳಿಗಳು ಮತ್ತು ಕೃಷಿ ಪದ್ಧತಿಗಳು” ಕುರಿತು ರೈತರಿಂದ ರೈತರಿಗಾಗಿ ಚರ್ಚಾ ಗೋಷ್ಠಿಗಳು ಜರುಗಿದವು.
ವಿದ್ಯಾರ್ಥಿಗಳಿಂದ ರೈತಗೀತೆ ಪ್ರಸ್ತುತ ಪಡಿಸಲಾಯಿತು. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿದರು.
ಸಮಾರಂಭದಲ್ಲಿ ರಾಜ್ಯ ಮಟ್ಟದ ಡಾ. ಎಂ.ಹೆಚ್. ಮರೀಗೌಡ ರಾಷ್ಟ್ರೀಯ ದತ್ತಿ ಅತ್ಯುತ್ತಮ ತೋಟಗಾರಿಕಾ ಸಂಶೋಧನಾ ಪ್ರಶಸ್ತಿ, ಡಾ. ಎಂ.ಹೆಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ಮತ್ತು ಡಾ. ಆರ್. ದ್ವಾರಕೀನಾಥ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
*ಕೃಷಿ ಮೇಳದಲ್ಲಿ 54.16 ಲಕ್ಷ ಜನ ಭಾಗಿ*:
ನವೆಂಬರ್ 13 ರಿಂದ 16 ರವರೆಗೆ ನಡೆದ ಕೃಷಿಮೇಳದಲ್ಲಿ 54.16 ಲಕ್ಷ ಜನ ಭಾಗವಹಿಸಿದ್ದಾರೆ. ಭೋಜನಾಲಯದಲ್ಲಿ 55,498 ಜನ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ ಸವಿದಿದ್ದಾರೆ. ಒಟ್ಟು 4.77ಕೋಟಿ ವಹಿವಾಟು ನಡೆದಿದೆ.
ಸಮಾರಂಭದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ. ಸುರೇಶ, ವಿಸ್ತರಣಾ ನಿರ್ದೇಶಕ
ಡಾ. ವೈ.ಎನ್. ಶಿವಲಿಂಗಯ್ಯ, ಕುಲಸಚಿವ ಡಾ: ಕೆ.ಸಿ. ನಾರಾಯಣಸ್ವಾಮಿ, ಪ್ರಶಸ್ತ ಪುರಸ್ಕೃತರು, ಪ್ರಗತಿಪರ ರೈತರು ಉಪಸ್ಥಿತರಿದ್ದರು.
