ಸಮಗ್ರ ಸುದ್ದಿ

ಹೊಸ ವರ್ಷದ ಸಿದ್ಧತೆ – ಕೋರಮಂಗಲದಲ್ಲಿ ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರಿಂದ ಜಂಟಿ ಭದ್ರತಾ ಪರಿಶೀಲನೆ

Share

ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್, ಅಭಿವೃದ್ಧಿ ವಿಭಾಗದ ಅಪರ ಆಯುಕ್ತರಾದ ಶ್ರೀ ನವೀನ್ ಕುಮಾರ್ ರಾಜು ಮತ್ತು ಆಗ್ನೇಯ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಶ್ರೀಮತಿ ಸಾರಾ ಫಾತಿಮಾ ಅವರು ಇಂದು ಕೋರಮಂಗಲದ ಪ್ರಮುಖ ರಸ್ತೆಗಳಲ್ಲಿ ಜಂಟಿ ಪಾದಯಾತ್ರೆ ನಡೆಸಿ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿದರು.

​ಕೋರಮಂಗಲದ 5ನೇ ಬ್ಲಾಕ್‌ನ 1ನೇ ಕ್ರಾಸ್ (ಎಂಪೈರ್ ಹೋಟೆಲ್ ರಸ್ತೆ) ಹಾಗೂ ಸುತ್ತಮುತ್ತಲಿನ ಆಯಕಟ್ಟಿನ ಪ್ರದೇಶಗಳಲ್ಲಿ ಅಧಿಕಾರಿಗಳ ತಂಡವು ಭೇಟಿ ನೀಡಿ ಹಲವು ಅಂಶಗಳನ್ನು ಪರಿಶೀಲಿಸಿತು.

​ಮಹಿಳಾ ಸುರಕ್ಷತೆ ಮತ್ತು ಹೈ ಲ್ಯಾಂಡ್ಸ್:

ಮಹಿಳೆಯರ ಸುರಕ್ಷತೆಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ ‘ಸೇಫ್ಟಿ ಹೈ ಲ್ಯಾಂಡ್’ (High Lands) ಕೇಂದ್ರಗಳು ಮತ್ತು ಪೊಲೀಸ್ ಕಣ್ಗಾವಲು ಗೋಪುರಗಳ ಪರಿಶೀಲನೆ ನಡೆಸಿತು.

​ತಾಂತ್ರಿಕ ಕಣ್ಗಾವಲು:

ಇಡೀ ಪ್ರದೇಶವನ್ನು ವ್ಯಾಪಿಸುವಂತೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಜಾಲ ಮತ್ತು ನಿಯಂತ್ರಣ ಕೊಠಡಿಯ ಸಂಪರ್ಕದ ಬಗ್ಗೆ ಮಾಹಿತಿ ಪಡೆಯಲಾಯಿತು.

​ಬ್ಯಾರಿಕೇಡಿಂಗ್ ಮತ್ತು ಸಂಚಾರ ನಿಯಂತ್ರಣ:

ಜನದಟ್ಟಣೆ ಅಧಿಕವಾಗುವ ಸ್ಥಳಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಬ್ಯಾರಿಕೇಡ್‌ಗಳ ಅಳವಡಿಕೆ ಮತ್ತು ಪಾದಚಾರಿ ಮಾರ್ಗಗಳ ಸ್ವಚ್ಛತೆಯನ್ನು ಪರಿಶೀಲಿಸಲಾಯಿತು.

​ಬೆಳಕಿನ ವ್ಯವಸ್ಥೆ:

ರಸ್ತೆಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬೀದಿ ದೀಪಗಳು ಹಾಗೂ ಹೈ-ಮಾಸ್ಟ್ ದೀಪಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ಆಯುಕ್ತ ಕೆ.ಎನ್. ರಮೇಶ್ ಅವರು ಮಾತನಾಡಿ, ಹೊಸ ವರ್ಷದ ಸಂದರ್ಭದಲ್ಲಿ ನಾಗರಿಕರು ಆಚರಿಸಲು ಯಾವುದೇ ತೊಂದರೆ ಉಂಟಾಗದಂತೆ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದೆ ಎಂದರು.

ಡಿಸಿಪಿ ಶ್ರೀಮತಿ ಸಾರಾ ಫಾತಿಮಾ ಅವರು ಮಾತನಾಡಿ, ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಸಂಪೂರ್ಣ ಪ್ರದೇಶವು ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ ಎಂದು ತಿಳಿಸಿದರು.

​ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ಅಧಿಕಾರಿಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ಆಗ್ನೇಯ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.


Share

You cannot copy content of this page