ಹಾವೇರಿ: ಹಾವೇರಿ – ಗದಗ ಲೋಕಸಭಾ ವ್ಯಾಪ್ತಿಯಲ್ಲಿ ಸಂಸದರ ಕ್ರೀಡಾ ಮಹೋತ್ಸವ-2026 ಆಯೋಜನೆಗೊಳ್ಳಲಿದೆ. ಕ್ರೀಡಾ ಸಂಸ್ಕೃತಿಯನ್ನು ಪೋಷಿಸುವುದು, ಸ್ಥಳೀಯ ಮತ್ತು ಮುಖ್ಯವಾಹಿನಿಯ ಕ್ರೀಡೆಗಳನ್ನು ಉತ್ತೇಜಿಸುವುದು, ಯುವಕರು ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಸಚಿವಾಲಯದ ಮಹತ್ವದ ದೃಷ್ಟಿಕೋನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಂಸದರ ಕ್ರೀಡಾಕುಟ – 2026ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಒಳಗೊಂಡಂತೆ ಕ್ರೀಡಾ ಮಹೋತ್ಸವ-2026 ನ್ನು ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಜನವರಿ 11 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನೆ ಮಾಡುವಂತೆ ಹಾಗೂ ಉಳಿದ ಕ್ರೀಡೆಗಳನ್ನು ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟ ಹೀಗೆ ಮೂರು ವಿಭಾಗಗಳಲ್ಲಿ ನಡೆಸಿ, ಹೋಬಳಿ ಮಟ್ಟದಲ್ಲಿ ಆಯ್ಕೆಯಾದವರನ್ನು ತಾಲೂಕು ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಆಯ್ಕೆಯಾದವರನ್ನು ಜಿಲ್ಲಾ ಮಟ್ಟದಲ್ಲಿ ಪರಿಗಣಿಸುವಂತೆ ಸೂಚಿಸಿದರು. ಕ್ರೀಡಾಕೂಟದಲ್ಲಿ ಕಬ್ಬಡಿ, ಖೋಖೊ, ವಾಲಿಬಾಲ್, 100, 200, 400 ಮೀಟರ್ ಓಟ, ರಿಲೇ ಹಾಗೂ ಇನ್ನಿತಿರ ಕ್ರೀಡೆಗಳನ್ನು ನಡೆಸಲು ತೀರ್ಮಾನಿಸಲಾಯಿತು.
ಪೂರ್ವ-ಕಾರ್ಯಕ್ರಮ ಯೋಜನೆ: ಸ್ಥಳ ಆಯ್ಕೆ, ಪಾಲುದಾರಿಕೆಗಳು, ಜಾಗೃತಿ ಅಭಿಯಾನ ಕ್ರೀಡಾ ಮೂಲಸೌಕರ್ಯ, ತರಬೇತುದಾರರು ಮತ್ತು ತೀರ್ಪುಗಾರರು ಮೊದಲಾದವುಗಳನ್ನು ಸಿದ್ದಪಡಿಸಿಕೊಂಡು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕ್ರೀಡಾಪಟು ನೋಂದಣಿ ನಿರ್ವಹಣೆ:
ಪ್ರಮುಖ ಸ್ಥಳಗಳಲ್ಲಿ ಆನ್‌ಲೈನ್ ಮತ್ತು ಆಫ್‌ಲೈನಗಳ ಮೂಲಕ ಕ್ರೀಡಾಪಟುಗಳು ನೊಂದಣಿ ಆರಂಭಿಸಿ ಕ್ರೀಡಾಪಟುಗಳ ನೋಂದಣಿ ಆದಾರದ ಮೇಲೆ ತಂಡಗಳನ್ನು ರಚಿಸಿ ಎಂದು ಸಲಹೆ ನೀಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉಟೋಪಚಾರ ಹಾಗೂ ಟಿ ಶರ್ಟ್ ಪೂರೈಸಲು ಕ್ರಮ ವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ. ಎಲ್ ನಾಗರಾಜ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಾ. ಪುನೀತ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಲತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
