ಸಮಗ್ರ ಸುದ್ದಿ

ಹೊಸ ವರ್ಷ ಆಚರಣೆಗೆ ಅದ್ದೂರಿ ಸಿದ್ದತೆ : ಸರ್ಕಾರದಿಂದ ಹಲವು ಕ್ರಮ | ಹೊಸ ವರ್ಷವನ್ನು ಜವಾಬ್ದಾರಿಯುತವಾಗಿ ಆಚರಿಸಲು ಜಿ.ಪರಮೇಶ್ವರ ಕರೆ

Share

ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ರಾಜ್ಯದ ಜನತೆ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಜನದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಪ್ರಮುಖವಾಗಿ ಮಹಾತ್ಮಾಗಾಂಧಿ ರಸ್ತೆಯ ಮೆಟ್ರೋ ನಿಲ್ದಾಣವನ್ನು ರಾತ್ರಿ 10ಗಂಟೆಯ ಬಳಿಕ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಾದ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಜನದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರದಲ್ಲಿ 166 ಕಡೆಗಳಲ್ಲಿ ಡ್ರಿಂಕ್ ಡ್ರೈವ್ ತಪಾಸಣೆ, ಅಪಾಯಕಾರಿ ಸ್ಟಂಟ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 92 ಸ್ಥಳಗಳನ್ನು ಗುರುತಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಾರ್ವಜನಿಕರು ಹೊಸ ವರ್ಷವನ್ನು ಜವಾಬ್ದಾರಿಯುತವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಬಾಡಿ ಕ್ಯಾಮೆರಾಗಳನ್ನು ಧರಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿದ್ದಾರೆ.

ಬೆಂಗಳೂರು ನಗರದಲ್ಲಿ ಭದ್ರತೆಗಾಗಿ 20 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಅದರಲ್ಲಿ ಕೆ.ಎಸ್.ಆರ್. ಪಿ ಹಾಗೂ ಸಿಎಆರ್ ತುಕಡಿಗಳು ಸಹ ಸೇರಿವೆ.
ಆಯಕಟ್ಟಿನ ಸ್ಥಳಗಳಲ್ಲಿ ಸಾವಿರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕವೂ ನಿಗಾ ಇರಿಸಲಾಗುತ್ತದೆ.

ಜನದಟ್ಟಣೆ ನಿಯಂತ್ರಿಸಲು ಎಂ.ಜಿ. ರಸ್ತೆಯಲ್ಲಿ ವಿಶೇಷ ವಾಚ್ ಟವರ್‌ಗಳನ್ನು ನಿರ್ಮಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಇಂದು ರಾತ್ರಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಅಪಘಾತಗಳನ್ನು ತಡೆಯಲು ನಗರದ ಪ್ರಮುಖ ಫ್ಲೈಓವರ್‌ಗಳನ್ನು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವದವರೆಗೆ ಮುಚ್ಚಲಾಗುವುದು. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಗರದಾದ್ಯಂತ ನೂರಾರು ಕಡೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಜನದಟ್ಟಣೆಯ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ‘ಸೇಫ್ಟಿ ಐಲ್ಯಾಂಡ್’ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ‘112’ ಸಹಾಯವಾಣಿಗೆ ಕರೆ ಮಾಡಬಹುದು.

ನಗರದ ಮೆಟ್ರೋ ಮತ್ತು ಬಿಎಂಟಿಸಿ ಬಸ್‌ಗಳು ಕೂಡ ಹೊಸ ವರ್ಷದ ಸಂಭ್ರಮಕ್ಕಾಗಿ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ರೈಲು ಸಂಚಾರದ ಸಮಯವನ್ನು ಹೆಚ್ಚಿಸಿದೆ. ಪ್ರಮುಖ ಮಾರ್ಗಗಳಾದ ಹಸಿರು ಮಾರ್ಗದಲ್ಲಿ ಬೆಳಗಿನ ಜಾವ 2 ಗಂಟೆಯವರೆಗೆ ಹಳದಿ ಮಾರ್ಗದಲ್ಲಿ 3.10ರವರೆಗೆ ನೇರಳೆ ಮಾರ್ಗದಲ್ಲಿ ಬೆಳಗಿನ ಜಾವ 1.45ರವರೆಗೆ ಮೆಟ್ರೋ ಸೇವೆ ವಿಸ್ತರಿಸಿದೆ.


Share

You cannot copy content of this page