ಬೆಂಗಳೂರು : ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂಚೂಣಿ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ಅರಣ್ಯ ಇಲಾಖೆ ದೇಶಕ್ಕೇ ಮಾದರಿಯಾಗಿದೆ ಎಂಬುದು ಅತಿಶಯೋಕ್ತಿಯಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಹೊಸ ವರ್ಷದ ಮೊದಲ ದಿನ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಔಪಚಾರಿಕ ಸಭೆ ನಡೆಸಿದ ಅವರು, ಕೊಡಗಿನಲ್ಲಿ ಇಂದು ಆನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ, ಮಾನವ-ವನ್ಯಜೀವಿ ಸಂಘರ್ಷ ದೊಡ್ಡ ಸವಾಲಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ತಜ್ಞರ ಸಲಹೆ ಪಡೆದು ಎಲ್ಲರೂ ಪ್ರಾಮಾಣಿಕವಾಗಿ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಅಮೂಲ್ಯವಾದ ಮಾನವ ಜೀವಕ್ಕೂ ತೊಂದರೆ ಆಗದಂತೆ ಹಾಗೂ ವನ್ಯಜೀವಿಗಳಿಗೂ ಹಾನಿ ಆಗದಂತೆ ಮತ್ತು ವನ್ಯಜೀವಿಗಳಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾನಿ ಆಗದಂತೆ ಅಧಿಕಾರಿಗಳು ಕಾರ್ಯಯೋಜನೆ ರೂಪಿಸಬೇಕು ಎಂದು ಸೂಚಿಸಿದರು.
ತಾವು ಸಚಿವರಾದ ಬಳಿಕ ಅರಣ್ಯ ಒತ್ತುವರಿ ತೆರವಿಗೆ ಹಾಗೂ ಪ್ರಕೃತಿ ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದು, ನಿಮ್ಮೆಲ್ಲರ ಸಹಕಾರದಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ವೃಕ್ಷ ಸಂರಕ್ಷಣೆ, ಸಂವರ್ಧನೆ ಆಗುತ್ತಿದೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರಿಂದ ಪೂರ್ಣ ಬೆಂಬಲ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಲಾಖೆಯ ವತಿಯಿಂದ ಕೈಗೊಳ್ಳುವ ಪ್ರತಿಯೊಂದು ಕಠಿಣ ನಿರ್ಧಾರಕ್ಕೂ ಸಂಪೂರ್ಣ ಬೆಂಬಲ ನೀಡಿದ್ದಾರೆ. ಒತ್ತುವರಿ ತೆರವಿನ ವೇಳೆ ಪೊಲೀಸ್ ಸಹಕಾರ ನೀಡುವಂತೆ ಆದೇಶ ನೀಡಿದ್ದಾರೆ. ಜೊತೆಗೆ ಹೆಚ್ಚುವರಿ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ ಎಂದು ಕೃತಜ್ಞತೆ ಅರ್ಪಿಸಿದರು.
ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯೇ ಇರಲಿ, ಬ್ರಿಟಿಷರ ಕಾಲದಲ್ಲಿ ನೀಡಲಾಗಿರುವ ಅರಣ್ಯ ಭೂಮಿ ಗುತ್ತಿಗೆಯೇ ಇರಲಿ 50 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಅರಣ್ಯ ಭೂಮಿಯ ವಿವಾದ ಹೈಕೋರ್ಟ್, ಸುಪ್ರೀಂಕೋರ್ಟ್ ನಲ್ಲಿದ್ದು ಅಧಿಕಾರಿಗಳು ಇದರ ಬೆನ್ನುಹತ್ತಿ ಅರಣ್ಯ ಉಳಿಸಲು ಶ್ರಮಿಸಬೇಕು ಎಂದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ, ಎ.ಪಿ.ಸಿಸಿ.ಎಫ್ ಕುಮಾರ್ ಪುಷ್ಕರ್ ಮತ್ತು ಮನೋಜ್ ರಂಜನ್ ಮತ್ತಿತರರು ಪಾಲ್ಗೊಂಡಿದ್ದರು.
