ಸಮಗ್ರ ಸುದ್ದಿ

ಸರ್ವೀಸ್ ಅಪಾರ್ಟ್ಮೆಂಟ್, ಹಾಸ್ಟಲ್ ಹಾಗೂ ಪಿಜಿಗಳಲ್ಲಿ ಸುರಕ್ಷತಾ ನಿಯಮಗಳ ಕಟ್ಟುನಿಟ್ಟಿನ ಅನುಸರಣೆ ಕಡ್ಡಾಯ – ಡಿ.ಎಸ್. ರಮೇಶ್

Share

ಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ವೀಸ್ ಅಪಾರ್ಟ್ ಮೆಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳ ಮಾಲೀಕರು/ನಿರ್ವಾಹಕರು/ವ್ಯವಸ್ಥಾಪಕರು, ನಗರ ಪಾಲಿಕೆಯ ವತಿಯಿಂದ ಸೂಚಿಸಲಾದ ಹಾಗೂ ಅನ್ವಯವಾಗುವ ಎಲ್ಲಾ ಸುರಕ್ಷತಾ ನಿಯಮಗಳನ್ನು ನಿಗದಿತ ಅವಧಿಯೊಳಗೆ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಕೈಗೊಂಡು ಕಟ್ಟುನಿಟ್ಟಾಗಿ ಅನುಸರಿಸುವಂತೆ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ತಿಳಿಸಿದರು..

ಇತ್ತೀಚೆಗೆ ಸಂಭವಿಸಿರುವ ಅನಿಲ ಸ್ಫೋಟ ಹಾಗೂ ಅಗ್ನಿ ಅವಘಡಗಳಂತಹ ದುರಂತಗಳು ಪುನರಾವರ್ತಿಯಾಗದಂತೆ ತಡೆಯುವುದು ಮತ್ತು ಸಾರ್ವಜನಿಕರ ಜೀವ ಹಾಗೂ ಆಸ್ತಿ ಸುರಕ್ಷತೆಯನ್ನು ಖಚಿತಪಡಿಸುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಂಸ್ಥೆಗಳು ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿರುವುದನ್ನು ಮಾಲೀಕರು/ನಿರ್ವಾಹಕರು/ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಪಾಲಿಸಬೇಕಾದ ಪ್ರಮುಖ ಸುರಕ್ಷತಾ ನಿಯಮಗಳು:

ಎಲ್.ಪಿ.ಜಿ./ಅನಿಲ ಸಂಪರ್ಕಗಳ ಸುರಕ್ಷಿತ ಹಾಗೂ ಅಧಿಕೃತ ಬಳಕೆ, ಅಕ್ರಮ ಹಾಗೂ ಅಸುರಕ್ಷಿತ ಅನಿಲ ಸಿಲಿಂಡರ್‌ಗಳ ಸಂಪೂರ್ಣ ನಿಷೇಧ, ಸರಿಯಾದ ಗಾಳಿ ಮತ್ತು ಅಗ್ನಿ ಸುರಕ್ಷತಾ ಕ್ರಮಗಳು, ವಿದ್ಯುತ್ ಸುರಕ್ಷತೆ ಹಾಗೂ ಓವರ್‌ಲೋಡ್ ತಪ್ಪಿಸುವ ಕ್ರಮಗಳು, ಮಾನ್ಯ ಹಾಗೂ ಅಸ್ತಿತ್ವದಲ್ಲಿರುವ ವ್ಯಾಪಾರ ಪರವಾನಗಿ ಮತ್ತು ಅಗತ್ಯ ನೋಂದಣಿಗಳು ಪಾಲನೆ ಮಾಡಬೇಕು.

ನಿಯಮ ಅನುಸರಣೆಗೆ ಕಾಲಾವಕಾಶ:

ನಿಗದಿಪಡಿಸಿರುವ ಎಲ್ಲಾ ಸುರಕ್ಷತಾ ಕೊರತೆಗಳನ್ನು ಸರಿಪಡಿಸಿ, ಅನ್ವಯವಾಗುವ ಎಲ್ಲಾ ಕಾನೂನುಗಳು ಹಾಗೂ ಪರವಾನಗಿ ಷರತ್ತುಗಳ ಸಂಪೂರ್ಣ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಸರ್ವೀಸ್ ಅಪಾರ್ಟ್ ಮೆಂಟ್ ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳಿಗೆ ಏಳು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ತಪಾಸಣೆ ಮತ್ತು ಜಾರಿ ಕ್ರಮ:

ನಿಗದಿತ ಕಾಲಾವಕಾಶ ಮುಗಿದ ನಂತರ ನಗರ ಪಾಲಿಕೆ ವತಿಯಿಂದ ವಿಶೇಷ ತಪಾಸಣಾ ಅಭಿಯಾನವನ್ನು ಕೈಗೊಳ್ಳಲಾಗುವುದು. ಸುರಕ್ಷತಾ ನಿಯಮಗಳನ್ನು ಪಾಲಿಸಲು ವಿಫಲವಾದ ಸರ್ವೀಸ್ ಅಪಾರ್ಟ್ ಮೆಂಟ್, ಹಾಸ್ಟಲ್ ಮತ್ತು ಪಿಜಿ ಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅವುಗಳನ್ನು ಸೀಲಿಂಗ್ ಮಾಡುವುದರ ಜೊತೆಗೆ ವ್ಯಾಪಾರ ಪರವಾನಗಿಯನ್ನು ರದ್ದು ಅಥವಾ ಅಮಾನತು ಗೊಳಿಸಲಾಗುವುದು.

ಇದಲ್ಲದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ–2024 ಹಾಗೂ ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ದಂಡ ವಿಧಿಸಲಾಗುವುದು. ಉಲ್ಲಂಘನೆಗಳು ಜೀವ ಮತ್ತು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡಿದಲ್ಲಿ ಸಂಬಂಧಿತ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.


Share

You cannot copy content of this page