ಬೆಂಗಳೂರು, ನ.17:
ಬೆಂಗಳೂರಿನ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ ಇಂದು ದೊರೆತಿದೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಇಂದಿನಿಂದ ಐದು ದಿನಗಳ ಕಾಲ ನಡೆಯುವ ಪರಿಷೆಗೆ ಚಾಲನೆ ನೀಡಿದರು.
ಬಸವನಗುಡಿಯ ದೊಡ್ಡ ಬಸವಣ್ಣ ದೇವಾಲಯದ ಆವರಣದಲ್ಲಿ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಹಾಗೂ ಎತ್ತುಗಳಿಗೆ ಕಡಲೆಕಾಯಿ ತಿನ್ನಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಈ ಬಾರಿ ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆಗೆ ಒತ್ತು ನೀಡಿದ್ದು, ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಜೊತೆಗೆ ಶುಲ್ಕ ರಹಿತ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ತಿಕ ಮಾಸದ ಪ್ರಯುಕ್ತ ಜನರು ಸರದಿ ಸಾಲಿನಲ್ಲಿ ನಿಂತು, ಭಕ್ತರು ದೊಡ್ಡಗಣಪತಿ ಹಾಗೂ ನಂದಿಯ ದರ್ಶನ ಪಡೆದರು.
ಕಡಲೆಕಾಯಿ ಪರಿಷೆಯಲ್ಲಿ ಗ್ರಾಮೀಣ ಸೊಬಗು ಅನಾವರಣಗೊಂಡಿದೆ. ಎಲ್ಲಿ ನೋಡಿದರೂ, ಜಾನಪದ ವೈಭವ ಕಣ್ಣಿಗೆ ಹಬ್ಬವನ್ನು ಉಂಟುಮಾಡಿದೆ. ಈ ತಿಂಗಳ 21 ರ ವರೆಗೆ ಕಡಲೆಕಾಯಿ ಪರಿಷೆ ನಡೆಯಲಿದೆ.
ಮೊದಲ ದಿನವಾದ ಇಂದು ಬಾರಿ ಜನಸಂದಣಿ ಕಂಡುಬಂದಿದೆ. ದೇವಾಲಯಕ್ಕೆ ದರ್ಶನ ಪಡೆದ ನಂತರ ಜನರು ತಮಗೆ ಇಷ್ಟವಾದ ಕಡಲೆಕಾಯಿ ಖರೀದಿಗೆ ಮುಗಿಬಿದ್ದರು. ಹಸಿ ಮತ್ತು ಉರಿದ ಕಡಲೆಕಾಯಿ, ಮಾರಾಟ ಮಾಡಲಾಗುತ್ತಿದೆ. ನೆರೆಯ ಜಿಲ್ಲೆಗಳಿಂದಲೂ ವ್ಯಾಪಾರಸ್ಥರ ಮೂಟೆಗಟ್ಟಲೆ ಕಡಲೆಕಾಯಿ ತಂದು ಮಾರಾಟ ಮಾಡುತ್ತಿದ್ದಾರೆ.
ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆಗೆ ಒತ್ತು:
ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆಗೆ ಒತ್ತು ನೀಡಲಾಗಿದ್ದು, ಪರಿಷೆಗೆ ಬನ್ನಿ ಬಟ್ಟೆ ಕೈಚೀಲ ತನ್ನಿ” ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.
ಸಮಾರಂಭದಲ್ಲಿ ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
