ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ
ನಾಳೆ ತಂತ್ರಜ್ಞಾನ ಶೃಂಗಸಭೆ – 2025ಕ್ಕೆ ಚಾಲನೆ ದೊರೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಶೃಂಗಸಭೆಯಲ್ಲಿ ನೂರಕ್ಕೂ ಹೆಚ್ಚು ಸಭೆಗಳು, 500ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, ಸಾವಿರಕ್ಕೂ ಹೆಚ್ಚು ಪ್ರದರ್ಶಕರು, 15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. 60ಕ್ಕೂ ಹೆಚ್ಚು ದೇಶಗಳ 50 ಸಾವಿರಕ್ಕೂ ಹೆಚ್ಚು ವಾಣಿಜ್ಯ ಸಂದರ್ಶಕರು ಭಾಗಿಯಾಗಲಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ಟೆಕ್ ಶೃಂಗಸಭೆಯು- ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಿಂದ ಡೀಪ್ ಟೆಕ್, ಬಾಹ್ಯಾಕಾಶ ಮತ್ತು ಸುಸ್ಥಿರತೆಯವರೆಗೆ ಇಡೀ ತಂತ್ರಜ್ಞಾನ ಲೋಕದಲ್ಲಿ ಆವಿಷ್ಕಾರ ಮತ್ತು ಅಭಿವೃದ್ಧಿ ಬೆಳೆಸುತ್ತ ನಿಜವಾಗಿಯೂ ಜಾಗತಿಕ ನಾವೀನ್ಯತೆಯ ವೇದಿಕೆಯಾಗಿ ಬೆಳೆದಿದೆ ಎಂದರು.
ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ ಹಾಗೂ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಜಂಟಿಯಾಗಿ ಆಯೋಜಿಸಿರುವ 28ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ನಾಳೆ ಉದ್ಘಾಟಿಸಲಿದ್ದಾರೆ.
ಟೆಕ್ ಮೇಳವು 60 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ದೇಶದ ಯಾವುದೇ ರಾಜ್ಯವು ಆಯೋಜಿಸುವ ಅತಿದೊಡ್ಡ ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ಇದು ಒಂದಾಗಿದೆ.
ರಾಜ್ಯದಲ್ಲಿ ಕೈಗೆಟಕುವ ದರದಲ್ಲಿ ಕೃತಕ ಬುದ್ಧಿಮತ್ತೆ ಕಂಪ್ಯೂಟರ್ ಬಿಡುಗಡೆ ಮಾಡಲಾಗುವುದು. ನಾಳೆಯೇ ಕಿಯೊ-ಕೆಇಒ ಬೆಲೆಯನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಕಿಯೋದ ವಿಶೇಷತೆ ಕೈಗೆಟಕುವ ದರದಲ್ಲಿ ಕಂಪ್ಯೂಟಿಂಗ್ ಸೌಲಭ್ಯದ ಬುದ್ಧಿವಂತ ಹಾಗೂ ಅಗ್ಗದ ಕಂಪ್ಯೂಟರ್ ಆಗಿದೆ. ಇಂಟರ್‌ನೆಟ್ ಸೌಲಭ್ಯ ಇರದಿದ್ದರೂ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಎಐ ಅನುವು ಮಾಡಿಕೊಡಲಿದೆ. ಇದು ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿಯೂ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ.
ಹೆಚ್ಚಿನ ವಿವರಗಳಿಗೆ: www.bengalurutechsummit.com ಗೆ ಭೇಟಿ ನೀಡಬಹುದು.
