ಬೆಂಗಳೂರು : ಮನೆಗಳಿಗೆ ಕಾವೇರಿ, ಕೈಗಾರಿಕೆಗಳಿಗೆ ಅಲ್ಟ್ರಾ ಪ್ಯೂರ್ ಸಂಸ್ಕರಿಸಿದ ನೀರು ಎಂಬ ಧ್ಯೇಯವಾಕ್ಯದೊಂದಿಗೆ, ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಸುಸ್ಥಿರ ಅಭಿವೃದ್ಧಿಯ ಆಶಯದಂತೆ, ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಅಲ್ಟ್ರಾ ಪ್ಯೂರ್ ವಾಟರ್ ಸಂಸ್ಕರಿಸಿದ ನೀರನ್ನು ಪೂರೈಸಲು ಬೆಂಗಳೂರು ಜಲಮಂಡಳಿ ಟೆಂಡರ್ ಕರೆದಿದೆ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಅಡೆತಡೆಯಿಲ್ಲದೆ ಉತ್ತಮ ಗುಣಮಟ್ಟದ ಸಂಸ್ಕರಿಸಿದ ಅಲ್ಟ್ರಾ ಪ್ಯೂರ್ ನೀರನ್ನು ಸರಬರಾಜು ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ದಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಉತ್ತಮ ನೀರು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಅಲ್ಟ್ರಾ ಪ್ಯೂರ್ ವಾಟರ್ ಸಂಸ್ಕರಿದ ನೀರು:
ಈ ಯೋಜನೆಯ ಪ್ರಮುಖ ವಿಶೇಷತೆಯೆಂದರೆ ಪೂರೈಕೆಯಾಗುವ ನೀರಿನ ಗುಣಮಟ್ಟ. ನಾಗಸಂದ್ರ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ (STP) ಪಡೆಯಲಾಗುವ 4 ಎಂಎಲ್‌ಡಿ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಸಂಸ್ಕರಿಸಲಾಗುತ್ತದೆ. ಅಲ್ಲದೇ ಈ ತ್ಯಾಜ್ಯ ನೀರನ್ನು ಅಲ್ಟ್ರಾ ಪ್ಯೂರ್ ವಾಟರ್ ಗುಣಮಟ್ಟಕ್ಕೆ ಶುದ್ದೀಕರಿಸಿ ಈ ನೀರು ಸರಬರಾಜು ಮಾಡಲಾಗುವುದು.
ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷಾಂತರ ಕಾರ್ಮಿಕರ ದಿನನಿತ್ಯದ ಬಳಕೆಗಾಗಿ (ಫ್ಲಶಿಂಗ್ ಮತ್ತು ಇತರೆ ಸ್ವಚ್ಛತಾ ಕಾರ್ಯಗಳಿಗೆ) ಪ್ರಸ್ತುತ ಬಳಸಲಾಗುತ್ತಿರುವ ಕುಡಿಯುವ ನೀರನ್ನು ಉಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಉತ್ಪಾದನಾ ಪ್ರಕ್ರಿಯೆಯನ್ನು ಹೊರತುಪಡಿಸಿ, ಇತರೆ ಉದ್ದೇಶಗಳಿಗೆ ಈ ಉನ್ನತ ಗುಣಮಟ್ಟದ ಅಲ್ಟ್ರಾ ಪ್ಯೂರ್ ಸಂಸ್ಕರಿಸಿದ ನೀರನ್ನು ಬಳಸುವುದರಿಂದ, ಲಕ್ಷಾಂತರ ಲೀಟರ್ ಶುದ್ಧ ಕಾವೇರಿ ನೀರನ್ನು ಉಳಿಸಿ, ಅದನ್ನು ಬೆಂಗಳೂರಿನ ಮನೆಗಳಿಗೆ ಒದಗಿಸಲು ಸಾಧ್ಯವಾಗುತ್ತದೆ.
ಮೂಲಸೌಕರ್ಯ ಮತ್ತು ಟೆಂಡರ್ ವಿವರ:
ಸಂಸ್ಕರಿಸಿದ ನೀರು ಕಲುಷಿತಗೊಳ್ಳದಂತೆ ಮತ್ತು ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮಂಡಳಿಯು ಪ್ರತ್ಯೇಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ. ಟೆಂಡರ್ ಅನ್ವಯ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.
ಪ್ರತ್ಯೇಕ ವಿತರಣಾ ಜಾಲ: ಕೈಗಾರಿಕೆಗಳಿಗೆ ನೀರು ತಲುಪಿಸಲು 27 ಕಿ.ಮೀ ಉದ್ದದ ಪ್ರತ್ಯೇಕ ಎಚ್‌ಡಿಪಿಇ (HDPE) ಕೊಳವೆ ಜಾಲ.
ಶೇಖರಣೆ ಮತ್ತು ಪಂಪಿಂಗ್: ಸಂಪ್ ಮತ್ತು ಪಂಪ್ ಹೌಸ್ ನಿರ್ಮಾಣ, ಪಂಪಿಂಗ್ ಯಂತ್ರೋಪಕರಣಗಳು, ಡಿಐ ರೈಸಿಂಗ್ ಮೇನ್ ಮತ್ತು 5 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ (OHT) ನಿರ್ಮಾಣ.
ಉಪಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ, ಕೈಗಾರಿಕಾ ತಾಣಗಳಲ್ಲಿ ಕಾವೇರಿ ನೀರಿನ ಬದಲಿಗೆ ಉನ್ನತ ಗುಣಮಟ್ಟದ ಸಂಸ್ಕರಿಸಿದ ನೀರನ್ನು ಬಳಸುವುದಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. ಪೀಣ್ಯದಲ್ಲಿ ಫ್ಲಶಿಂಗ್ ಮತ್ತು ಇತರೆ ಅಗತ್ಯಗಳಿಗೆ ಅಲ್ಟ್ರಾ ಪ್ಯೂರ್ ವಾಟರ್ ಗುಣಮಟ್ಟದ ನೀರನ್ನು ಪ್ರತ್ಯೇಕ ಪೈಪ್‌ಗಳ ಮೂಲಕ ಒದಗಿಸುವ ಮೂಲಕ, ಅಮೂಲ್ಯವಾದ ನದಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಮೀಸಲಿಡಲು ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
