ಸಮಗ್ರ ಸುದ್ದಿ

ಕುವೆಂಪು ಅವರ ವಿಶ್ವಮಾನವ ಸಂದೇಶ ಇಡೀ ಜಗತ್ತಿಗೆ ಮಾದರಿ : ಕೆ. ಗೋಪಾಲಯ್ಯ

Share

ಬೆಂಗಳೂರು: ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರ ವಿಶ್ವಮಾನವ ಸಂದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಗೋಪಾಲಯ್ಯ ತಿಳಿಸಿದರು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯ ನಾಡಪ್ರಭು ಕೆಂಪೇಗೌಡ ಸಭಾಂಗಣದಲ್ಲಿ ಶನಿವಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜ ಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯಕ್ಕೆ ಮೆರುಗು ನೀಡುವ ಮೂಲಕ ನಾಡು, ನುಡಿ, ಸಂಸ್ಕೃತಿ ಹಾಗೂ ಭಾಷಾ ಬೆಳವಣಿಗೆಗೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರವಾಗಿದೆ. ಕನ್ನಡದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕುವೆಂಪು ಅವರನ್ನು ಕನ್ನಡದ ಶ್ರೇಷ್ಠ ಕವಿ ಎಂದರೆ ತಪ್ಪಾಗಲಾರದು. ಕನ್ನಡ ನಾಡು ಅನೇಕ ಕವಿಗಳನ್ನು ಪಡೆದ ನಾಡಾಗಿದೆ. ಈ ಪೈಕಿ ಕುವೆಂಪು ಅವರು ಅಗ್ರಗಣ್ಯರಾಗಿದ್ದಾರೆ. ಕಥೆ, ಕವನ, ನಾಟಕ, ಕಾದಂಬರಿ, ವಿಮರ್ಶಾತ್ಮಕ ಲೇಖನಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹೆಚ್ಚು ಮೆರಗು ನೀಡಿದ್ದಾರೆ ಎಂದರು.

ಭಾರತ ಕಂಡ ಶ್ರೇಷ್ಠ ಕವಿ, ಮಾನವತಾವಾದಿ ಕುವೆಂಪು ಅವರು ಇಡೀ ಜಗತ್ತಿಗೆ ವಿಸ್ತರಿಸಿದ ವಿಶ್ವ ಮಾನವ ಸಂದೇಶ ಸಾರ್ವಕಾಲೀಕವಾಗಿದೆ ಹಾಗೂ ಇಂದಿಗೂ ಪ್ರಸ್ತುತವಾಗಿದೆ. ಸಮಸಮಾಜದ ಪರಿಕಲ್ಪನೆಯೇ ವಿಶ್ವ ಮಾನವ ಸಂದೇಶದ ಮೂಲವಾಗಿದೆ. ಚಿಂತಕರು ಹಾಗೂ ಶ್ರೇಷ್ಠ ಬರಹಗಾರರಾಗಿದ್ದ ಕುವೆಂಪು ಅವರು ಸಾಹಿತ್ಯ ಕೃಷಿಯ ಮೂಲಕ ಉತ್ತಮ ಕೃತಿಗಳನ್ನು ರಚಿಸಿದ್ದು, ಅವು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿವೆ. ಕುವೆಂಪು ಅವರು ಜಮೀನ್ದಾರರ ಕುಟುಂಬದಿಂದ ಬಂದಿದ್ದರೂ ರೈತರು ಹಾಗೂ ದೀನ ದಲಿತರ ಪರವಾಗಿ ದನಿ ಎತ್ತಿದರು. ಸಾಹಿತ್ಯದ ಬಗ್ಗೆ ಅಪಾರ ಒಲವು, ಅಭಿಮಾನ, ತುಡಿತ ಹೊಂದಿದ್ದ ಕುವೆಂಪು ಕನ್ನಡ ಭಾಷೆಗೆ ವಿಶ್ವ ಮಾನ್ಯತೆ ತಂದುಕೊಟ್ಟರು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಬಿಜೆಪಿ ಉತ್ತರ ಘಟಕದ ಅಧ್ಯಕ್ಷ ಎಸ್ ಹರೀಶ್, ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ ಡಾ.ಮಂಜುನಾಥ್ ಗೌಡ, ರಾಘವೇಂದ್ರಶೆಟ್ಟಿ, ರಾಜೇಂದ್ರ ಕುಮಾರ್, ಮಹದೇವ್, ಮಂಡಲದ ಅಧ್ಯಕ್ಷರಾದ ಡಾ.ನಾಗೇಂದ್ರ, ಉಪ ಪ್ರಾಂಶುಪಾಲ ಶಾಂತರಾಜು, ನಾಗರತ್ನ ಲೋಕೇಶ್, ಟ್ರಸ್ಟಿನ ಅಧ್ಯಕ್ಷರಾದ ನಾರಾಯಣಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.


Share

You cannot copy content of this page