ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಪರಿಸರ ಸ್ನೇಹಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವ ಸಂಬಂಧ ಯೋಜನೆ ರೂಪಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಾರ್ವಜನಿಕ ಆಕರ್ಷಣಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಗಳನ್ನು ಆಕರ್ಷಣಾ ತಾಣಗಳಾಗಿ ಮಾಡುವುದರಿಂದ ನಾಗರಿಕರ ಒಡನಾಟ ಹೆಚ್ಚಾಗಲಿದೆ. ಕೆರೆಗಳಲ್ಲಿ ಇಂಧನ ಆಧಾರಿತ ಬೋಟಿಂಗ್ ವ್ಯವಸ್ಥೆಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಮಾಲಿನ್ಯರಹಿತ, ಪರಿಸರ ಸ್ನೇಹಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಯೋಜನೆ ರೂಪಿಸಬೇಕು. ಜೊತೆಗೆ ಜಲಚರ ಜೀವಜಾಲಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಶೂನ್ಯ ಮಾಲಿನ್ಯ ವ್ಯವಸ್ಥೆಯನ್ನು ರೂಪಿಸುವಂತೆ ಅವರು ನಿರ್ದೇಶನ ನೀಡಿದರು.
ಪ್ರಕೃತಿ ಆಧಾರಿತ ಅಭಿವೃದ್ಧಿಗೆ ಆದ್ಯತೆ:
ಜಿಬಿಎ ವ್ಯಾಪ್ತಿಯಲ್ಲಿ ಕೈಗೊಳ್ಳಲಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಕೃತಿ ಆಧಾರಿತ ಹಾಗೂ ಪರಿಸರ ಸ್ನೇಹಿ ತತ್ವಗಳಿಗೆ ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ಸಾರ್ವಜನಿಕ ಆಕರ್ಷಣಾ ಚಟುವಟಿಕೆಗಳು ಮತ್ತು ಪರಿಣಾಮಕಾರಿ ಪ್ರವಾಹ ನಿಯಂತ್ರಣ ಕ್ರಮಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಕೆರೆಗಳಲ್ಲಿ ಬಾತುಕೋಳಿಗಳ ಪರಿಚಯದ ಸಾಧ್ಯತೆ ಪರಿಶೀಲನೆ:
ಬಾತುಕೋಳಿಗಳು ನೀರಿನ ಸ್ವಾಭಾವಿಕ ಏರೇಟರ್ಸ್ ಹಾಗೂ ನೀರಿನ ಗುಣಮಟ್ಟದ ಸುಧಾರಣೆಗೆ ಸಹಕಾರಿಯಾಗಿರುವುದರಿಂದ, ಕೆರೆಗಳಲ್ಲಿ ಬಾತುಕೋಳಿಗಳನ್ನು ಪರಿಚಯಿಸುವ ಕುರಿತು ಸಾಧಕ-ಬಾಧಕಗಳನ್ನು ಪರಿಶೀಲಿಸುವಂತೆ ಸೂಚಿಸಿದರು. ಜೊತೆಗೆ, ಬಾತುಕೋಳಿಗಳನ್ನು ಪರಿಚಯಿಸಲು ಸಾಧ್ಯವಿದ್ದಲ್ಲಿ, ಬಾತುಕೋಳಿಗಳ ಪಾಲನೆ ಮತ್ತು ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಕಾನೂನಾತ್ಮಕತೆ ದೃಷ್ಟಿಯಿಂದ ಟೆಂಡರ್ ಮೂಲಕ ವಹಿಸಲಾಗುವುದು.
ಪ್ರವಾಹ ನಿಯಂತ್ರಣ ಮತ್ತು ಸಿದ್ಧತೆ:
ನಗರದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿ, ಪ್ರಕೃತಿ ಆಧಾರಿತ ಪ್ರವಾಹ ನಿಯಂತ್ರಣ ಪರಿಹಾರಗಳನ್ನು ರೂಪಿಸಬೇಕು. ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ, ಬೃಹತ್ ನೀರುಗಾಲುವೆಗಳಲ್ಲಿ ಹೂಳೆತ್ತುವುದು, ಅಡ್ಡಿಯಾಗಿರುವ ತಡೆಗಳನ್ನು ತೆರವುಗೊಳಿಸುವುದು ಹಾಗೂ ನೈಸರ್ಗಿಕ ನೀರು ಹರಿವಿನ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಕಾರ್ಯಗಳನ್ನು ಆದ್ಯತೆಯಿಂದ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಪ್ರವಾಹ ನಿಯಂತ್ರಣ ಕಾರ್ಯ ಯೋಜನೆ:
ಮುಂದಿನ ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಬಹುದಾದ ಪ್ರವಾಹ ನಿಯಂತ್ರಣ ಕಾರ್ಯಗಳಿಗಾಗಿ ಸಮಗ್ರ ಕಾರ್ಯಯೋಜನೆಯನ್ನು ತಯಾರಿಸುವಂತೆ ಸೂಚಿಸಿ, ಮಳೆಗಾಲದಲ್ಲಿ ಪ್ರವಾಹದ ಪರಿಣಾಮವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಅತಿ ಸೂಕ್ಷ್ಮ ಹಾಗೂ ಅಪಾಯಕಾರಿ ಪ್ರದೇಶಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.
ಪ್ರಕೃತಿ ಆಧಾರಿತ ಪರಿಹಾರಗಳ ಅಳವಡಿಕೆ:
ಆಯಾ ನಗರ ಪಾಲಿಕೆಗಳು ಹಾಗೂ ಸಂಬಂಧಿತ ಸಂಸ್ಥೆಗಳು ಕೈಗೊಳ್ಳುವ ಎಲ್ಲಾ ಕಾರ್ಯಗಳು ಪ್ರಕೃತಿ ಆಧಾರಿತ ಮತ್ತು ಪರಿಸರ ಸ್ನೇಹಿ ತತ್ವಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿರಬೇಕು. ಇದರಿಂದ ದೀರ್ಘಕಾಲಿಕ ಪರಿಸರ ಸ್ಥಿರತೆ ಹಾಗೂ ಹವಾಮಾನ ಪ್ರತಿರೋಧ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ಅವರು ತಿಳಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಆರ್. ರಾಮಚಂದ್ರನ್, ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಬಿ.ಎಸ್. ಪ್ರಹ್ಲಾದ್, ಮುಖ್ಯ ಅಭಿಯಂತರರಾದ ಹೇಮಲತಾ, ಕಾರ್ಯಪಾಲಕ ಅಭಿಯಂತರರಾದ ನಿತ್ಯಾ ಸೇರಿದಂತೆ ಇತರೆ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.
